ಧಾರವಾಡ: ‘ಅವಧಿಮುಗಿದ ಆಹಾರ ಉತ್ಪನ್ನಗಳನ್ನು (ತಂಪು ಪಾನೀಯ...) ಮಾರಾಟಕ್ಕೆ ಇಟ್ಟಿರುವುದು ನಗರದ ಹೊಸ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಕಂಡುಬಂತು. ಸಂಬಂಧಪಟ್ಟವರ ವಿರುದ್ಧ ಕ್ರಮವಹಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿಲ್ದಾಣದ ಅಧಿಕಾರಿಗಳು ನಿಯಮಿತವಾಗಿ ಮಳಿಗೆಗಳನ್ನು ಪರಿಶೀಲನೆ ಮಾಡಬೇಕು. ನಿಗಾ ವಹಿಸಬೇಕು’ ಎಂದು ತಿಳಿಸಿದರು.
‘ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ 45 ಪ್ರಕರಣಗಳು ಇವೆ. 18 ಪ್ರಕರಣಗಳ ವರದಿ ಬರುವುದು ಬಾಕಿ ಇದೆ. ಮಾನವ ಹಕ್ಕು ಉಲ್ಲಂಘನೆಯಾದ ಸಂತ್ರಸ್ತ ಕುಟುಂಬದವರಿಗೆ ಪರಿಹಾರ ನೀಡಲು ನಾಲ್ಕು ಪ್ರಕರಣಗಳಲ್ಲಿ ಶಿಫಾರಸು ಮಾಡಲಾಗಿದೆ’ ಎಂದರು.
‘ಮಾನವ ಹಕ್ಕುಗಳ ಹೋರಾಟ ಸಮಿತಿ, ವೇದಿಕೆಯವರು ಎಂದು ಕೆಲವರು ವಿಸಿಟಿಂಗ್ ಕಾರ್ಡ್ ತೋರಿಸಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್, ಒತ್ತಡ ಹೇರಿರುವ ಪ್ರಕರಣಗಳು ಕೆಲವು ಜಿಲ್ಲೆಗಳಲ್ಲಿ ಆಗಿರುವುದು ಗಮನಕ್ಕೆ ಬಂದಿದೆ. ಅಂಥ ಪ್ರಕರಣಗಳು ಇದ್ದರೆ ಆಯೋಗ, ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಬೇಕು. ಅಂಥ ತಂತ್ರ ಮಾಡುವವರ ವಿರುದ್ಧ ಕ್ರಮ ಜರುಗಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ‘ನಗರದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲದಿರುವುದು, ಮತ್ತೊಂದು ಹಾಸ್ಟೆಲ್‌ನಲ್ಲಿ ಬಟ್ಟೆ ಒಣಗಿಸಲು ವ್ಯವಸ್ಥೆ ಇಲ್ಲದಿರುವುದು ಕಂಡುಬಂತು. ಈ ಹಾಸ್ಟೆಲ್‌ಗಳಲ್ಲಿ ಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹೊಸ ಹಾಸ್ಟೆಲ್ ನಿರ್ಮಾಣದ ಪ್ರಸ್ತಾವದಲ್ಲಿ ಪ್ರತಿ ಕೊಠಡಿಗೂ ಹೊಂದಿಕೊಂಡ ಸ್ನಾನಗೃಹ, ಶೌಚಾಲಯ ಹಾಗೂ ಡ್ರೆಸ್ಸಿಂಗ್ ಕ್ಯಾಬಿನ್ ವ್ಯವಸ್ಥೆ ಪ್ಲಾನ್‌ನಲ್ಲಿ ಅಳವಡಿಸಿ ಸಲ್ಲಿಸಬೇಕು’ ಎಂದು ಅವರು ಸಲಹೆ ನೀಡಿದರು.
‘ಜೈಲು, ಪೊಲೀಸ್ ಠಾಣೆ, ಆಸ್ಪತ್ರೆ, ಹಾಗೂ ಬಸ್ ನಿಲ್ದಾಣಗಳಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಈ ಸ್ಥಳಗಳಲ್ಲಿ ಶೌಚಾಲಯ, ಕುಡಿಯುವ ನೀರು, ಆಸನ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು. ಕೆಲವೆಡೆ ಕಟ್ಟಡ ಕಾರ್ಮಿಕರು (ಹೊರ ರಾಜ್ಯ, ಹೊರ ಜಿಲ್ಲೆಗಳವರು) ಟೆಂಟ್‌ಗಳಲ್ಲಿ ವಾಸ ಇರುತ್ತಾರೆ. ಅಲ್ಲಿ ಮೂಲಸೌಕರ್ಯಗಳೇ ಇರಲ್ಲ. ಕಾರ್ಮಿಕ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದರು.
‘ಅಕ್ರಮ, ಬಂಧನ ದೂರುಗಳಿಗೆ ಸಂಬಂಧಿಸಿದಂತೆ ಠಾಣೆಯ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿ ಒದಗಿಸುವಂತೆ ಕೇಳಿದಾಗ ಕೆಲವೊಮ್ಮೆ ನೀಡುವುದಿಲ್ಲ. ಸಿ.ಸಿ ಟಿ.ವಿ ಕ್ಯಾಮೆರಾ ಹಾಳಾಗಿದೆ ಅಥವಾ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳುತ್ತಾರೆ. ಠಾಣೆಗಳಲ್ಲಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳು ಆಗಾಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವರದಿ, ಮಾಹಿತಿಯನ್ನು ಆಯೋಗದ ಅಧ್ಯಕ್ಷರಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.