ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಸ್ತೆ ಅಗೆತ; ಸಂಚಾರಕ್ಕೆ ಸಂಚಕಾರ

ಇತ್ತೀಚಿನ ಮಳೆಗೆ ಕಿಮ್ಸ್ ಆವರಣದಿಂದ ನುಗ್ಗಿ ಬಂದ ಕೊಳಚೆ ಮತ್ತು ಒಳಚರಂಡಿ ನೀರು
Published 1 ಜೂನ್ 2024, 6:25 IST
Last Updated 1 ಜೂನ್ 2024, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವಾರದ ಹಿಂದೆ ಸುರಿದ ಭಾರಿ ಮಳೆಯಿಂದ ಕಿಮ್ಸ್‌ ಕ್ಯಾಂಪಸ್‌ನಿಂದ ಹರಿದು ಬಂದ ಕೊಳಚೆ ಮತ್ತು ಒಳಚರಂಡಿ ನೀರು ನ್ಯೂ ಕಾಟನ್‌ ಮಾರ್ಕೆಟ್‌ ರಸ್ತೆ ಪಕ್ಕದ ಕಟ್ಟಡಗಳಿಗೆ ಭಾರೀ ಹಾನಿಯನ್ನುಂಟು ಮಾಡಿದೆ. ಘಟನೆ ನಂತರ ಕಿಮ್ಸ್‌ ಕ್ಯಾಂಪಸ್‌ನಿಂದ ಒಳಚರಂಡಿ ನೀರನ್ನು ದೇಶಪಾಂಡೆನಗರದ ರಾಜನಾಲಕ್ಕೆ ಸಂಪರ್ಕಿಸಲು ವಾರದ ಹಿಂದೆ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಕಿಮ್ಸ್‌ ಕ್ಯಾಂಪಸ್‌ನ ಹಿಂಬದಿಯಲ್ಲಿ  ನುಗ್ಗಿ ಬಂದ ನೀರು ಔಷಧವನ್ನು ಪೂರೈಸುವ ಪ್ರಮುಖ ಏಜೆನ್ಸಿಗಳಿದ್ದ ಖಾಸಗಿ ಕಾಂಪ್ಲೆಕ್ಸ್‌ನ ತಡೆಗೋಡೆಯನ್ನು ಒಡೆದು ನುಗ್ಗಿದ್ದರಿಂದ ಅಪಾರ ಹಾನಿಗೆ ಕಾರಣವಾಗಿದೆ. ಕಿಮ್ಸ್‌ ಆಡಳಿತ ಮಳೆನೀರು ಹರಿದು ಹೋಗಲು ಸರಿಯಾಗಿ ನಿರ್ವಹಣೆ ನಡೆಸದ ಕಾರಣ ₹52 ಲಕ್ಷದಷ್ಟು ಹಾನಿಯನ್ನು ಅನುಭವಿಸುವಂತಾಯಿತು ಎಂದು ಔಷಧ ಪೂರೈಕೆದಾರರಾದ ಮುಖೇಶ ಶಹಾ ಹಾಗೂ ಸಹೋದರರು ಆರೋಪಿಸಿದ್ದಾರೆ.

ಕಿಮ್ಸ್‌ನ ನ್ಯೂ ಕಾಟನ್‌ ಮಾರ್ಕೆಟ್‌ನ ಪಂಚರತ್ನ ಕಾಂಪ್ಲೆಕ್ಸ್‌ನಲ್ಲಿ ಔಷಧ ಪೂರೈಸುವ ರಚನಾ ಡಿಸ್ಟ್ರಿಬ್ಯೂಟರರ್ಸ್‌, ಶಿವಾ ಮೆಡಿಕಲ್‌ ಸರ್ವೀಸ್, ಡೈನಾಮಿಕ್‌ ಡಿಸ್ಟ್ರಿಬ್ಯೂಟರ್, ಶ್ರೀಜಿ ಟ್ರೇಡರ್ಸ್‌ ಕಿಮ್ಸ್‌ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದು, ಕಿಮ್ಸ್‌ನ ಸವೇಜ್‌ ಹಾಗೂ ಯುಜಿಡಿ ನೀರಿನಿಂದ ತಮಗಾದ ನಷ್ಟವನ್ನು ಗಮನಕ್ಕೆ ತಂದಿದ್ದಾರೆ.

ಮೇಘಾ ಎಂಟರ್‌ಪ್ರೈಸಸ್‌ನಲ್ಲಿ ಪೈಪ್‌ ಪರಿಕರಗಳು ಮಣ್ಣು ಮೆದ್ದುಕೊಂಡಿವೆ. ಇದರಿಂದ ₹15 ಲಕ್ಷ ನಷ್ಟ  ಉಂಟಾಗಿದೆ ಎಂದು ಮಾಲೀಕ ರಾಜು ಜೈನ್‌ ಹೇಳಿದರು.

ನೀರು ನುಗ್ಗಿ ಬಂದಿದ್ದರಿಂದ ಪಂಚರತ್ನ ಕಾಂಪ್ಲೆಕ್ಸ್‌ನ ತಡೆಗೋಡೆ ಸಂಪೂರ್ಣ ಕುಸಿದಿದ್ದು, ನೀರು ಕಟ್ಟಡದ ತಳಮಟ್ಟದಲ್ಲಿ 8 ಅಡಿಯಷ್ಟು ಎತ್ತರಕ್ಕೆ ಸಂಗ್ರಹಗೊಂಡಿದೆ. ಪರಿಣಾಮ ಎರಡು ಲಿಫ್ಟ್‌, ವಿದ್ಯುತ್‌ ಪರಿವರ್ತಕಗಳು, ಜನರೇಟರ್‌ಗಳು ಕೆಟ್ಟು ನಿಂತಿದೆ. ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಡಬೇಕಾದ ಔಷಧಗಳು ವಿದ್ಯುತ್‌ ಸ್ಥಗಿತದಿಂದ ಹಾನಿಗೊಳಗಾಗಿವೆ ಎಂದು ಮುಖೇಶ ಶಹಾ ಆರೋಪಿಸಿದರು.

ಕಿಮ್ಸ್‌ ಆಡಳಿತವು ಕೈಗೊಳ್ಳಬೇಕಾದ ಒಳಚರಂಡಿ ನಿರ್ವಹಣೆಯಲ್ಲಿ ಇರುವ ಲೋಪದಿಂದ ಸಾರ್ವಜನಿಕರು ಕೂಡ ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಿಮ್ಸ್‌ ಕ್ಯಾಂಪಸ್‌ನಿಂದ ನುಗ್ಗಿ ಬಂದ ಒಳಚರಂಡಿ ನೀರು ಸೃಷ್ಟಿಸಿದ ಅವಾಂತರ ಗಮನಕ್ಕೆ ಇದೆ. ಸ್ಥಳ ಪರಿಶೀಲಿಸಿದ್ದು ಕಿಮ್ಸ್‌ ಕ್ಯಾಂಪಸ್‌ನಿಂದ ನೀರನ್ನು ರಾಜನಾಲಕ್ಕೆ ಸಂಪರ್ಕಿಸಲು ಕ್ರಮಕೈಗೊಳ್ಳಲಾಗಿದೆ. ಶೀಘ್ರ ಕಾಮಗಾರಿ ಮುಗಿಸಿ ಸಂಚಾರವನ್ನು ಸುಗಮಗೊಳಿಸಲಾಗುವುದು

–ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

‘ಕಿಮ್ಸ್‌ನ ತೆರೆದ ಚರಂಡಿಗೆ ತಡೆಯಾಗಿದೆ’

ಕಿಮ್ಸ್‌ ಆವರಣ ಎತ್ತರದ ಪ್ರದೇಶದಲ್ಲಿದ್ದುದ್ದರಿಂದ ಅಲ್ಲಿಂದ ನೀರು ಹರಿದುಹೋಗುವುದು ಸಾಮಾನ್ಯ. ಜೋರಾಗಿ ಮಳೆ ಸುರಿದ ಕಾರಣ ಕಿಮ್ಸ್‌ ಕ್ಯಾಂಪಸ್‌ನಿಂದ ತೆರೆದ ಚರಂಡಿಯಿಂದ ನೀರು ಹರಿದಿದೆಯಷ್ಟೆ. ದೇವಸ್ಥಾನವನ್ನು ಕಿಮ್ಸ್‌ನ ತೆರೆದ ಚರಂಡಿ ಮೇಲೆ ನಿರ್ಮಿಸಲಾಗಿರುವುದರಿಂದ ನೀರಿನ ಹರಿವಿಗೆ ತಡೆಯಾಗಿದೆ. ಕೊಳಚೆ ನೀರು ಕೂಡ ಶುದ್ಧೀಕರಿಸುವಲ್ಲಿ ಅಗತ್ಯವಿದ್ದಷ್ಟು ನೀರನ್ನು ಮಾತ್ರ ಪಡೆದು ಶುದ್ಧೀಕರಣಗೊಳ್ಳುವಾಗ ಉಳಿದ ನೀರು ಓವರ್‌ ಫ್ಲೋ ಆಗಿ ಯುಜಿಡಿ ಜೊತೆ ಸೇರುತ್ತಿದೆ. ಸರ್ಕಾರದಿಂದ ನೀಡುವ ನಿರ್ವಹಣಾ ವೆಚ್ಚ ಅನುದಾನ ಸಾಕಾಗದ ಕಾರಣ ನಾವು ನಿರ್ವಹಣೆಗೆ ದಾನಿಗಳನ್ನು ಹುಡುಕಬೇಕಾಗಿದೆ ಎಂದು ಕಿಮ್ಸ್‌ ಆವರಣಾಧಿಕಾರಿ ಉದಯಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT