ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ರಸ್ತೆಗಳಲ್ಲಿ ಕಣ್ಗಾವಲು; ಅತಿ ವೇಗದ ಮೇಲೆ ‘ಸ್ಪೀಡ್ ರೇಡಾರ್’ ನಿಗಾ

ವಾಹನಗಳ ಮಾಲೀಕರಿಗೆ ನಿಯಮ ಉಲ್ಲಂಘನೆ ನೋಟಿಸ್ ರವಾನೆ
Last Updated 17 ಮಾರ್ಚ್ 2021, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ವಾಹಗಳನ್ನುಅತಿ ವೇಗವಾಗಿ ಚಾಲನೆ ಮಾಡಿದರೆ ಜೊಕೆ!‌ ಇನ್ಮುಂದೆ ಅಂತಹ ವಾಹನಗಳ ಮಾಲೀಕರ ವಿಳಾಸಕ್ಕೆ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್ ಬರಲಿದೆ. ಮಾಡಿದ ತಪ್ಪಿಗಾಗಿ ಕೋರ್ಟ್‌ಗೆ ಹೋಗಿ ದಂಡ ಕಟ್ಟಬೇಕಾಗುತ್ತದೆ.

ಅವಳಿ ನಗರದ ಹೊರವಲಯದ ಇಟ್ಟಿಗಟ್ಟಿ ಬೈಪಾಸ್‌ ರಸ್ತೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದ ಬೆನ್ನಲ್ಲೇ, ಸಂಚಾರ ಪೊಲೀಸರು ವಾಹನಗಳ ಅತಿ ವೇಗಕ್ಕೆ ಕಡಿವಾಣ ಹಾಕಲು ಸ್ವಯಂಚಾಲಿತ ‘ಸ್ಪೀಡ್ ರೇಡಾರ್ ವೊಲ್ವೊಮೀಟರ್’ ಸಾಧನದ ಮೊರೆ ಹೋಗಿದ್ದಾರೆ. ರಸ್ತೆ ಬದಿ ಈ ಸಾಧನವನ್ನು ಟ್ರೈಪಾಡ್ ಹಾಕಿ ಅಳವಡಿಸಿದರೆ, ವಾಹನಗಳ ವೇಗವನ್ನು ದೂರದಿಂದಲೇ ನೋಂದಣಿ ಸಂಖ್ಯೆ ಸಹಿತ ಸೆರೆ ಹಿಡಿಯುತ್ತದೆ.

‘ಎಲ್ಲಾ ಬಗೆಯ ವಾಹನಗಳಲ್ಲಿರುವ ಸ್ಪೀಡ್ ಮೀಟರ್‌ನಿಂದ, ವಾಹನಗಳ ವೇಗವನ್ನು ತಿಳಿಯಬಹುದು. ಹಲವು ಚಾಲಕರು ಮೀಟರ್ ಗಮನಿಸದೇ ಅತಿ ವೇಗದಲ್ಲಿ ವಾಹನ ಓಡಿಸುತ್ತಿರುತ್ತಾರೆ. ‘ಸ್ಪೀಡ್ ರೇಡಾರ್ ವೊಲ್ವೊಮೀಟರ್’ ಆ ಮೀಟರ್ ಅನ್ನು ರೀಡ್ ಮಾಡುತ್ತದೆ. ವೇಗದ ಮಿತಿ ಮೀರಿದ್ದರೆ ಚಿತ್ರ ಸೆರೆ ಹಿಡಿಯುತ್ತದೆ’ ಎಂದು ಸಂಚಾರ ವಿಭಾಗದ ಎಸಿಪಿ ಎಂ.ಎಸ್. ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮ ಉಲ್ಲಂಘನೆಯ ಚಿತ್ರವು ತಕ್ಷಣ ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ರವಾನೆಯಾಗುತ್ತದೆ. ಅಲ್ಲಿರುವ ಸಿಬ್ಬಂದಿ, ನೋಂದಣಿ ಸಂಖ್ಯೆ ಆಧರಿಸಿ ವಾಹನದ ಮಾಲೀಕರ ವಿಳಾಸಕ್ಕೆ ನೋಟಿಸ್ ಕಳಿಸುತ್ತಾರೆ. ನಗರದ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ವಾಹನಗಳ ವೇಗದ ಮಿತಿ ಪ್ರತಿ ಗಂಟೆಗೆ 40 ಕಿ.ಮೀ. ಇದ್ದು, ಮೀರಿದ ವಾಹನಗಳಿಗೆ ₹1 ಸಾವಿರ ದಂಡ ವಿಧಿಸಲಾಗುತ್ತಿದೆ’ ಎಂದು ಹೇಳಿದರು.

‘ಹೆದ್ದಾರಿಗಳಲ್ಲಿ ಇಂಟರ್‌ಸೆಪ್ಟರ್ ವಾಹನಗಳಲ್ಲಿ ಸಂಚಾರ ಸಿಬ್ಬಂದಿ ವಾಹನಗಳ ಅತಿ ವೇಗವನ್ನು ಪತ್ತೆ ಹಚ್ಚಿ ತಡೆದು, ದಂಡ ವಿಧಿಸುತ್ತಿದ್ದಾರೆ. ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚಿದಂತೆ, ಸಂಚಾಯ ನಿಯಮಗಳ ಉಲ್ಲಂಘನೆಯೂ ಹೆಚ್ಚುತ್ತಿದೆ. ಹಾಗಾಗಿ, ಉಲ್ಲಂಘನೆ ಮೇಲೆ ನಿಗಾ ಇಡಲು ರೆಡಾರ್‌ನಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿಯ ಪೂರ್ವ, ದಕ್ಷಿಣ ಹಾಗೂ ಧಾರವಾಡ ಸಂಚಾರ ಠಾಣೆಗಳಿಗೆ ಈ ಸಾಧನ ನೀಡಲಾಗಿದೆ’ ಎಂದರು.

500 ಮೀಟರ್ ಸಾಮರ್ಥ್ಯ: ‘ವಾಹನಗಳ ವೇಗವನ್ನು ಗರಿಷ್ಠ 500 ಮೀಟರ್ ದೂರದಿಂದಲೇ ಸೆರೆ ಹಿಡಿಯಬಲ್ಲ ಸಾಮರ್ಥ್ಯ ರೇಡಾರ್‌ಗೆ ಇದೆ. ಈ ಅಂತರವನ್ನು ಕಡಿಮೆ ಮಾಡಿಕೊಂಡಷ್ಟು ಚಿತ್ರ ಮತ್ತಷ್ಟು ಸ್ಪಷ್ಟವಾಗಿ ಕಾಣಲಿದೆ. ಸದ್ಯ ನಾವು 200–250 ಮೀಟರ್ ದೂರದಲ್ಲಿ ರೇಡಾರ್ ಅಳವಡಿಸಿಕೊಂಡು ನಿಗಾ ವಹಿಸುತ್ತಿದ್ದೇವೆ. ನಿತ್ಯ ಆರೇಳು ಮಂದಿ ವಿರುದ್ಧ ಅತಿ ವೇಗದ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಪೂರ್ವ ವಿಭಾಗದ ಸಂಚಾರ ಠಾಣೆ ಕಾನ್‌ಸ್ಟೆಬಲ್ ರಾಜು ಕೊರಗು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT