ಭಾನುವಾರ, ಸೆಪ್ಟೆಂಬರ್ 27, 2020
24 °C

ಮೈದುಂಬಿಕೊಂಡಿವೆ ಇಳೆಯ ಜಲಧಾರೆಗಳು...

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಈ ಬಾರಿಯೂ ಮಳೆ ಕೊರತೆ ಎಂಬ ಹವಾಮಾನ ಇಲಾಖೆ ವರದಿಯನ್ನು ಈ ವರ್ಷದ ಮುಂಗಾರು ನೀವಾಳಿಸಿ ಹಾಕಿದೆ. ಆರಿದ್ರ, ಪುನರ್ವಸು ಮಳೆಗಳ ಸತತ ಸುರಿತ ಜನರಲ್ಲಿ ಆಶಾಭಾವ ಮೂಡಿಸಿದೆ.

ನೀರಿನ ಹರಿವನ್ನೇ ನಿಲ್ಲಿಸಿದ್ದ ಹಳ್ಳಕೊಳ್ಳಗಳಲ್ಲಿ ಜಲಸಂಚಾರ ಆರಂಭವಾಗಿದೆ. ನದಿಗಳು ಸಮಾಧಾನಕರ ಮಟ್ಟಕ್ಕೇರಿ ಹರಿಯುತ್ತಿವೆ. ಜಲಪಾತಗಳು ಮೈದುಂಬಿಕೊಂಡು ಬಿಂದಾಸ್‌ ಆಗಿ ಜಿಗಿಯುತ್ತಿವೆ. ಒಂದೊಂದು ಜಲಪಾತಗಳ ನೋಟವೂ ನವನವೀನ, ಕಣ್ಮನಗಳಿಗೆ ರಸದೌತಣ.

ಮುಂಗಾರಿಗೆ ಹಸಿರು ಹೊದ್ದು, ಮಳೆ ಬಂದಾಗ ಕಾಡಿನ ನಡುವಿಂದ ಮೇಲೇಳುವ ಹೊಗೆ ಎರಡೂ ಜೊತೆಯಾದಾಗ ಕಾಣುವ ನೋಟ ಅವಿಸ್ಮರಣೀಯ. ಪ್ರಕೃತಿಯ ಸೊಬಗಿಗೆ ಸಾಟಿ ಇಲ್ಲದಂತ ಸೊಬಗಿನ ದೃಶ್ಯವದು. ಹಸಿರ ನಡುವೆ, ಬಂಡೆಗಳ ಮೇಲಿನಿಂದ ಜಿಗಿಯುವ, ಬಂಡೆಯನ್ನೇ ಸೀಳಿ ಬರುವಂತ ದೃಶ್ಯ ರೋಮಾಂಚನಕಾರಿ.

ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ ತಾಲ್ಲೂಕುಗಳ ಜಲಧಾರೆಗಳು ಮನಬಿಚ್ಚಿ ಧುಮುಕುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ, ಸಾತೊಡ್ಡಿ, ಮಾಗೋಡ ಫಾಲ್ಸ್‌, ಶಿರ್ಲೆ, ಉಂಚಳ್ಳಿ ಫಾಲ್ಸ್‌, ಶಿವಗಂಗೆ, ಗೋಕಾಕ, ಅಂಬೋಲಿ, ಬಾಬಾ ಫಾಲ್ಸ್‌, ವಿಭೂತಿ, ವಜ್ರ ಫಾಲ್ಸ್‌ಗಳು ವಿಶೇಷವಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಈ ಎಲ್ಲ ಜಲಪಾತಗಳು ಹುಬ್ಬಳ್ಳಿಯಿಂದ ಒಂದು ದಿನಕ್ಕೆ ಹೋಗಿಬರಬಹುದಾದ ಸುಂದರ ಜಲಪಾತ ತಾಣಗಳು. ಈ ಬಾರಿ ಮುಂಗಾರು ಮನಸ್ಸುಬಿಚ್ಚಿ ಸುರಿಯುವಾಗ ಜಲಪಾತಗಳನ್ನು ನೋಡಲು ಮತ್ತೇಕೆ ತಡ. ವೀಕೆಂಡ್‌ಗೆ ಒಂದೊಂದು ಜಲಪಾತಕ್ಕೆ ಪ್ರವಾಸ ಹಮ್ಮಿಕೊಳ್ಳಲು ಇದು ಸಕಾಲ.

ಹುಬ್ಬಳ್ಳಿಯಿಂದ ಯಲ್ಲಾಪುರ ತಾಲ್ಲೂಕಿನತ್ತ ಹೊರಟರೆ ಸಾತೊಡ್ಡಿ, ಮಾಗೋಡ ಫಾಲ್ಸ್‌ ಸಹಿತ, ಜೇನಕಲ್ಲುಗುಡ್ಡ, ಕವಡಿಕೆರೆಯನ್ನೂ ನೋಡಿಕೊಂಡು ಬರಬಹುದು. ಖಾಸಗಿ ವಾಹನಗಳಿದ್ದರೆ ಅನುಕೂಲ. ರಸ್ತೆ ಸ್ವಲ್ಪ ಪ್ರಯಾಸವೆನ್ನಿಸಬಹುದು. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸದ ಪ್ರಯಾಸವನ್ನು ಮರೆಸಲಿದೆ.

ಶಿರಸಿ ತಾಲ್ಲೂಕಿನತ್ತ ಹೋಗುವವರಿಗೆ ಉಂಚಳ್ಳಿ ಫಾಲ್ಸ್‌, ಶಿವಗಂಗಾ ಫಾಲ್ಸ್‌ಗಳು ಉತ್ತಮ ತಾಣ. ಬೆಳಗಾವಿ ಭಾಗದಲ್ಲಿ ಗೋಕಾಕ ಫಾಲ್ಸ್‌, ಗೊಡಚಿನಮಲ್ಕಿ ಜಲಪಾತಗಳನ್ನು ನೋಡಬಹುದು. ಬೆಳಗಾವಿ ಸಮೀಪದ ಅಂಬೋಲಿ ಕೂಡ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ. ದೂಧ್‌ಸಾಗರ ಫಾಲ್ಸ್‌ ನೋಡಲು ಬರುವವರು ರೈಲ್ವೆ ಹಳಿಯ ಮೇಲೆ ನಡೆದು ಬರಬೇಕಿತ್ತು. ಆದರೆ ಕೆಲವು ವರ್ಷಗಳಿಂದ ಫಾಲ್ಸ್‌ ಹತ್ತಿರ ಕ್ಯಾಸರ್‌ಲಾಕ್‌, ದೂಧ್‌ಸಾಗರನಿಂದ ಹಳಿಗಳ ಮೇಲೆ ನಡೆಯುವುದಕ್ಕೆ ಗೋವಾ ಸರ್ಕಾರ ನಿಷೇಧ ಹೇರಿದ್ದರಿಂದ ಪ್ರವಾಸಿಗರಿಗೆ ನಿರಾಸೆಯಾಗಲಿದೆ. ಗೋವಾಕ್ಕೆ ಹೋಗುವ ರೈಲು ಹತ್ತಿದರೆ ಫಾಲ್ಸ್‌ ಎದುರು ನಿಧಾನಗೊಳಿಸುವುದರಿಂದ ಆ ಸಮಯದಲ್ಲಷ್ಟೇ ಹಾಲಿನ ಹೊಳೆಯಂತಿರುವ ದೂಧ್‌ಸಾಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು