ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಜಾಲತಾಣದಲ್ಲಿ ಸುಳ್ಳು ಪೋಸ್ಟ್‌; ಪ್ರಕರಣ ದಾಖಲು

ಶೆಟ್ಟರ್‌ ಹೇಳಿಕೆ ತಿರುಚಿದ ಪೋಸ್ಟ್‌!
Last Updated 23 ಫೆಬ್ರುವರಿ 2023, 4:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಾಸಕ ಜಗದೀಶ ಶೆಟ್ಟರ್‌ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಬಜೆಟ್‌ಗೆ ನೀಡಿದ್ದ ಪ್ರತಿಕ್ರಿಯೆಯನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ಗೆ ನೀಡಿರುವ ಪ್ರತಿಕ್ರಿಯೆಯಂತೆ ಎಡಿಟ್‌ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಅವಮಾನ ಮಾಡಿರುವ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ ಖಾತೆದಾರ ಸಂತೋಷ ನೆಲಮಂಗಲ ವಿರುದ್ಧ ಪಾಲಿಕೆ ಸದಸ್ಯ ಸಂತೋಷ ಚವ್ಹಾಣ್‌ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಗದೀಶ ಶೆಟ್ಟರ್‌ ವಿರೋಧ ಪಕ್ಷದ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ಗೆ ಶೆಟ್ಟರ್‌ ಮಾಧ್ಯಮದ ಎದುರು ಪ್ರತಿಕ್ರಿಯೆ ನೀಡಿದ್ದರು. ಅದೇ ವಿಡಿಯೋವನ್ನು ಮುಖ್ಯಮಂತ್ರಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ಗೆ ಎಡಿಟ್‌ ಮಾಡಲಾಗಿದೆ. ಬೊಮ್ಮಾಯಿ ಬಜೆಟ್‌ ಮಂಡನೆ ಫೋಟೊಗೆ, ಶೆಟ್ಟರ್‌ ಪ್ರತಿಕ್ರಿಯೆಯ ವಿಡಿಯೊ ಸೇರಿಸಿ, ಪಕ್ಷಕ್ಕೆ ಹಾಗೂ ಶೆಟ್ಟರ್‌ ಅವರಿಗೆ ಅವಮಾನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೊಸಪೇಟೆಯಲ್ಲಿ ಕಳವು; ಇಬ್ಬರ ಬಂಧನ: ಹೊಸಪೇಟೆಯ ಅಂಗಡಿಗಳಿಂದ ಕಳವು ಮಾಡಿರುವ ಬಟ್ಟೆ ಹಾಗೂ ಹಿತ್ತಾಳೆ ಸಾಮಗ್ರಿಗಳನ್ನು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ₹19 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯ ನಿವಾಸಿ ರಾಜ ಹರಿಜನ್‌ ಮತ್ತು ಹೊಸಪೇಟೆಯ ಸಲ್ಮಾನ್‌ ಸಾಗರ ಬಂಧಿತರು. ಆರೋಪಿಗಳು ರೈಲ್ವೆ ನಿಲ್ದಾಣದಿಂದ ರಾಜಗೋಪಾಲನಗರದ ಕಡೆ ತೆರಳುತ್ತಿದ್ದಾಗ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಟ್ಟೆ ಮತ್ತು ಹಿತ್ತಾಳೆ ಸಾಮಗ್ರಿಗಳನ್ನು ಹೊಸಪೇಟೆಯಿಂದ ಕಳವು ಮಾಡಿ, ಹುಬ್ಬಳ್ಳಿಯಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದೆ.

₹53 ಸಾವಿರ ದಂಡ ಸಂಗ್ರಹ: ಅವಳಿನಗರದಲ್ಲಿ ಸಂಚಾರ ನಿಯಮಾವಳಿ ಉಲ್ಲಂಘಿಸಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳ ಸವಾರರ ಮೇಲಿನ ವಿಶೇಷ ಕಾರ್ಯಾಚರಣೆ ಮಂಗಳವಾರ–ಬುಧವಾರವೂ ಮುಂದುವರಿದಿತ್ತು. ಹು–ಧಾ ಕಮಿಷನರೇಟ್‌ ಘಟಕದ ಸಂಚಾರ ವಿಭಾಗದ ಪೊಲೀಸರು, 175 ಪ್ರಕರಣಗಳನ್ನು ದಾಖಲಿಸಿಕೊಂಡು ₹81,500 ದಂಡ ಸಂಗ್ರಹಿಸಿದ್ದಾರೆ.

ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು: ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಾಗೂ ಚುನಾವಣೆ ಹಿನ್ನೆಲೆಯಲ್ಲಿ ಹು–ಧಾ ಪೊಲೀಸ್‌ ಕಮಿಷನರೇಟ್‌ ಘಟಕ ಮುಂಜಾಗ್ರತ ಕ್ರಮವಾಗಿ ನಗರದಲ್ಲಿನ ರೌಡಿಗಳಿಗೆ ಬಿಸಿ ಮುಟ್ಟಿಸಿದೆ.

ಡಿಸಿಪಿ ಸಾಹಿಲ್‌ ಬಾಗ್ಲಾ ನೇತೃತ್ವದಲ್ಲಿ ಬುಧವಾರ ಹಳೇಹುಬ್ಬಳ್ಳಿ ಹಾಗೂ ಕಸಬಾ ಠಾಣೆ ವ್ಯಾಪ್ತಿಯಲ್ಲಿನ ರೌಡಿಗಳನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಲಾಗಿದೆ. ಕೊಲೆ, ಕೊಲೆ ಯತ್ನ, ಕಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ 50ಕ್ಕೂ ಹೆಚ್ಚು ರೌಡಿಗಳ ಪರೇಡ್‌ ನಡೆಸಲಾಯಿತು.

ರೌಡಿಗಳಿಂದ ಅವರ ಸಹಚರರ ಹಾಗೂ ಸಂಬಂಧಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಅಪರಾಧ ಚಟುವಟಿಕೆಗಳಲ್ಲಿ ಯಾರೂ ಪಾಲ್ಗೊಳ್ಳಬಾರದು. ಮಾರಕಾಸ್ತ್ರಗಳ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದರೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ದೂರುಗಳು ಬಂದರೆ ಜೈಲಿಗೆ ಅಟ್ಟಲಾಗುವುದು. ಸಮಾಜದ ಶಾಂತಿ ಕದಡಲು ಮುಂದಾದರೆ ಗಡಿಪಾರು ಮಾಡುವ ನಿರ್ಧಾರ ಸಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

‘ಠಾಣಾ ವ್ಯಾಪ್ತಿಯ ಕೆಲವು ರೌಡಿಗಳನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ. ರೌಡಿಗಳ ಮೇಲೆ ಕಣ್ಣಿಡಲಾಗಿದ್ದು, ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವುದಾಗಿ ಸೂಚಿಸಲಾಗಿದೆ’ ಎಂದು ಡಿಸಿಪಿ ಸಾಹಿಲ್‌ ಬಾಗ್ಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT