ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ನಿರಂತರ ವಿದ್ಯುತ್‌ಗೆ ಆಗ್ರಹಿಸಿ ರೈತರ ಪ್ರತಿಭಟನೆ

Published 30 ಆಗಸ್ಟ್ 2023, 6:01 IST
Last Updated 30 ಆಗಸ್ಟ್ 2023, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆ ಕೊರತೆಯಾಗಿದ್ದು, ಬಿತ್ತಿದ ಬೆಳೆ ಉಳಿಸಿಕೊಳ್ಳಲು ಹೊಲಗಳಿಗೆ ನೀರು ಹಾಯಿಸಲು ದಿನಕ್ಕೆ ಕನಿಷ್ಠ 12 ತಾಸು ನಿರಂತರ ವಿದ್ಯುತ್‌ ಪೂರೈಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ನವನಗರದಲ್ಲಿರುವ ಹೆಸ್ಕಾಂ ಮುಖ್ಯ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು. 

ಹೆಸ್ಕಾಂ ವ್ಯಾಪ್ತಿ ಹೊಂದಿರುವ ಧಾರವಾಡ, ಬೆಳಗಾವಿ, ಹಾವೇರಿ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ರೈತರು ಪಾಲ್ಗೊಂಡಿದ್ದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ‘ಮಳೆ ಕೈಕೊಟ್ಟಿದೆ. ಬಿತ್ತಿದ ಬೆಳೆ ಒಣಗುತ್ತಿದೆ. ಕೆರೆ, ಬಾವಿಗಳಿಂದ ನೀರು ಹಾಯಿಸಬೇಕೆಂದರೆ ಗ್ರಾಮೀಣ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್‌ ಕೊರತೆ ಸಾಕಷ್ಟು ಎದುರಾಗಿದೆ. ಇದರಿಂದಾಗಿ ನೀರು ಹಾಯಿಸದಿರುವುದರಿಂದ ಬೆಳೆಗಳು ನಾಶವಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ದಿನಕ್ಕೆ ಕನಿಷ್ಠ 12 ತಾಸು ವಿದ್ಯುತ್‌ ಪೂರೈಸಿದರೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುವುದು. ಅಲ್ಲದೇ, ರೈತರ ಮಕ್ಕಳಿಗೆ ರಾತ್ರಿ ಅಭ್ಯಾಸ ಮಾಡಲು ಸಹಾಯವಾಗಲಿದೆ. ಕೂಡಲೇ ವಿದ್ಯುತ್‌ ಪೂರೈಸಲು ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿದ್ಯುತ್‌ ಸಚಿವರ ಗಮನಕ್ಕೂ ತಂದಿದ್ದೇವೆ’ ಎಂದು ಹೇಳಿದರು. 

‘ಸುಮಾರು 50 ವರ್ಷ  ಹಳೆಯದಾದ ವಿದ್ಯುತ್‌ ತಂತಿ, ವಿದ್ಯುತ್‌ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಿ ವಿದ್ಯುತ್‌ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ. ವಿದ್ಯುತ್‌ ಅಪಘಾತದಿಂದ ಹಾನಿಗೊಳಗಾದ ರೈತರ ಬೆಳೆ ಹಾನಿ, ಜಾನುವಾರುಗಳು ಹಾಗೂ ವಸ್ತುಗಳಿಗೆ ತಕ್ಷಣ ಪರಿಹಾರ ಕಲ್ಪಿಸಿಕೊಡಬೇಕು. ವಿದ್ಯುತ್‌ ದರವನ್ನು ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು. 

ಸಂಘದ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ ಮಾತನಾಡಿ, ‘ಸಮರ್ಪಕ ವಿದ್ಯುತ್‌ ಕೊಡಲು ಸಾಧ್ಯವಾಗದಿದ್ದರೆ, ಸರ್ಕಾರ ನಡೆಸಲು ಆಗದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ಕೊಟ್ಟು ಹೊರಡಲಿ’ ಎಂದು ಸವಾಲು ಹಾಕಿದರು. 

ಎಂ.ಎನ್‌. ನಾಯ್ಕ ಮಾತನಾಡಿ, ‘ಬೆಳೆ ವಿಮೆ ಪರಿಹಾರ ಕೂಡ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ. ರೈತರ ಅಳಲಿಗೆ ವಿಮಾ ಕಂಪನಿಗಳು ಸ್ಪಂದಿಸುತ್ತಿಲ್ಲ. ರೈತರ ಬಗ್ಗೆ ಸರ್ಕಾರಕ್ಕೆ ಎಳ್ಳಷ್ಟೂ ಕಾಳಜಿ ಇಲ್ಲ. ರೈತರು ಬೀದಿಗೆ ಬಂದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ಮುಖ್ಯಮಂತ್ರಿ ಅವರಿಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು. 

ಬಾಗಲಕೋಟೆಯ ಪರಮೇಶ್ವರ ಮಾತನಾಡಿ, ‘ವಿದ್ಯುತ್ ಕಂಬ, ಟಿ.ಸಿ ಬದಲಾಯಿಸಲು ಕೆಲವು ಕಡೆ ಅಧಿಕಾರಿಗಳು ರೈತರಿಂದ ಲಂಚ ಪಡೆದಿದ್ದಾರೆ. ರೈತರ ಬಗ್ಗೆ ಅಧಿಕಾರಿಗಳಿಗೆ ಅಸಡ್ಡೆ ಭಾವನೆ ಇದೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 

ಹೆಸ್ಕಾಂ ಎಂ.ಡಿ ಭರವಸೆ

‘ಪ್ರತಿದಿನ ಕನಿಷ್ಠ 6 ಗಂಟೆ ನಿರಂತರ ವಿದ್ಯುತ್‌ ಒದಗಿಸುತ್ತೇವೆ. ವಿದ್ಯುತ್‌ ಕಂಬ ಟಿ.ಸಿ ಬದಲಾಯಿಸಲು ಕೂಡಲೇ ಕ್ರಮಕೈಗೊಳ್ಳುತ್ತೇನೆ’ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ರೋಷನ್‌ ಹೇಳಿದರು. ರೈತರ ಮನವಿ ಆಲಿಸಿದ ನಂತರ ಮಾತನಾಡಿದ ಅವರು ‘ರೈತರ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ  ಗಮನಕ್ಕೆ ಇದೆ. ಆಗಸ್ಟ್‌ 13ರಂದು ಇಡೀ ದೇಶದಲ್ಲಿ ಪವನವಿದ್ಯುತ್‌ ಉತ್ಪಾದನೆ ನಿಂತುಹೋಗಿತ್ತು. ಹೀಗಾಗಿ ಆ ವಾರ ಸಮಸ್ಯೆಯಾಗಿತ್ತು. ಈಗ ಪ್ರತಿದಿನ ₹ 15ಕೋಟಿಯಿಂದ ₹ 20 ಕೋಟಿ ಮೊತ್ತದಷ್ಟು ವಿದ್ಯುತ್‌ ಖರೀದಿಸಿ ಪೂರೈಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ವಿದ್ಯುತ್‌ ಕೊರತೆಯಾಗಲ್ಲ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT