ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2ಎ’ ಸೇರ್ಪಡೆಗೆ ಆಗ್ರಹಿಸಿ 28ರಂದು ಉಪವಾಸ ಸತ್ಯಾಗ್ರಹ

ಲಿಂಗಾಯತ ಸ್ವತಂತ್ರ್ಯ ಧರ್ಮ, ಕೇಂದ್ರ ತಿರಸ್ಕರಿಸಿಲ್ಲ: ಮೃತ್ಯುಂಜಯ ಸ್ವಾಮೀಜಿ
Last Updated 20 ಅಕ್ಟೋಬರ್ 2020, 9:03 IST
ಅಕ್ಷರ ಗಾತ್ರ

ಹುಬ್ಬಳ್ಳಿ:‌ ಲಿಂಗಾಯತ ಪಂಚಮಸಾಲಿ ಸಮಾಜದವರನ್ನು ರಾಜ್ಯ ಸರ್ಕಾರ ಪ್ರವರ್ಗ ‘2ಎ’ಗೆ ಸೇರ್ಪಡೆ ಮಾಡಬೇಕು, ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಲು ಅ. 28ರಂದು ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ರಾಜ್ಯಮಟ್ಟದ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ‘ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4ರ ತನಕ ಉಪವಾಸ ಸತ್ಯಾಗ್ರಹ ಜರುಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗೋವಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜನ ಇದ್ದಾರೆ. ಜನಸಂಖ್ಯೆಯಲ್ಲಿ ನಮ್ಮ ಸಮಾಜ ಬಹುಸಂಖ್ಯಾತರಾದರೂ, ಸೌಲಭ್ಯಗಳ ವಿಷಯದಲ್ಲಿ ಅಲ್ಪ ಸಂಖ್ಯಾತರಾಗಿದ್ದೇವೆ. ಈ ಕುರಿತು ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಸರ್ಕಾರ ಈಗಲೂ ನಮ್ಮ ಬೇಡಿಕೆಗೆ ಮನ್ನಣೆ ನೀಡದಿದ್ದರೆ ಕೋವಿಡ್‌ ಮುಗಿದ ಬಳಿಕ ಉಗ್ರಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ನಮ್ಮ ಹೋರಾಟಕ್ಕೆ ಸಮಾಜದ ಎಲ್ಲ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಒಟ್ಟು 25 ಸಾವಿರ ಜನ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಕೋವಿಡ್‌ ಇದ್ದರೂ ವಿಧಾನಸೌಧದ ಸುತ್ತಮುತ್ತಲೂ ಇರುವ ಹೊಲಗಳಲ್ಲಿ ಅಂತರ ಕಾಯ್ದುಕೊಂಡು ಕೂಡುತ್ತೇವೆ. ನಿಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ’ ಎಂದು ಮಾಹಿತಿ ನೀಡಿದರು.

’ಲಿಂಗಾಯತ ಸಮಾಜದ ಒಳ ಪಂಗಡದವರನ್ನೂ ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು. ಬೆಳಗಾವಿ ವಿಧಾನಸೌಧದ ಮುಂಭಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳನ್ನು ಸ್ಥಾಪಿಸಬೇಕು, ರೈತರಿಗೆ ಬೆಂಬಲ ಬೆಲೆ ನೀಡಬೇಕು ಎನ್ನುವ ಬೇಡಿಕೆಗಳಿಗೂ ಉಪವಾಸ ಸತ್ಯಾಗ್ರಹದ ವೇಳೆ ಹಕ್ಕೊತ್ತಾಯ ಮಾಡಲಾಗುವುದು’ ಎಂದರು.

ತಿರಸ್ಕೃತಗೊಂಡಿಲ್ಲ: ಲಿಂಗಾಯತ ಸ್ವತಂತ್ರ್ಯ ಧರ್ಮಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ಇದನ್ನು ಕೇಂದ್ರ ತಿರಸ್ಕರಿಸಿಲ್ಲ, ಪರಿಶೀಲನಾ ಹಂತದಲ್ಲಿದೆ ಎಂದು ಸ್ವಾಮೀಜಿ ಹೇಳಿದರು. ಪ್ರತ್ಯೇಕ ಧರ್ಮದ ಹೋರಾಟ ನಿರಂತರವಾಗಿರಲಿದ್ದು, ಕಾನೂನು ಸಮರವೂ ಮುಂದುವರಿದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT