ಬುಧವಾರ, ಮೇ 18, 2022
25 °C
ಕಾರ್ಮಿಕರ ದಿನಾಚರಣೆ: ಸಿಐಟಿಯುನಿಂದ ‌ ಸೌಹಾರ್ದ ಮೇ ದಿನ ಆಚರಣೆ

‘ಹಕ್ಕುಗಳ ರಕ್ಷಣೆಗೆ ಹೋರಾಟ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಿರತ ಹೋರಾಟದ ಮೂಲಕ ಕಾರ್ಮಿಕರು ಗಳಿಸಿದ ಹಕ್ಕುಗಳ ಮೇಲೆ ತೀವ್ರತರವಾದ ದಾಳಿ ನಡೆಯುತ್ತಿದೆ. ದೇಶದಲ್ಲಿ ಜಾರಿ ಮಾಡಲಾಗುತ್ತಿರುವ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕ ವರ್ಗ ನವಗುಲಾಮಗಿರಿಗೆ ಒಳಪಡಲಿದೆ. ಹಾಗಾಗಿ, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಒಗ್ಗಟ್ಟಿನ ಹೋರಾಟ ಅಗತ್ಯವಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್. ಪೂಜಾರಿ ಹೇಳಿದರು.

ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ, ನಗರದ ಅಮರಗೋಳ ಎಪಿಎಂಸಿಯಲ್ಲಿರುವ ಶ್ರಮಿಕ ಭವನದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ಭಾನುವಾರ ಏರ್ಪಡಿಸಿದ್ದ ಸೌಹಾರ್ದ ಮೇ ದಿನ ಕಾರ್ಯಕ್ರಮದಲ್ಲಿ ಮಾತನಾಡಿ ‘ದೇಶದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸುವ ಶ್ರಮಜೀವಿಗಳ ಪರ ಇರಬೇಕಾದ ಪ್ರಭುತ್ವಗಳು, ದೇಶವನ್ನು ಲೂಟಿ ಮಾಡಲು ಬಂದಿರುವ ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ವರ್ತಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ‘ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಜಾತಿ, ಧರ್ಮ, ಭಾಷೆ, ಆಹಾರ, ಸಂಸ್ಕತಿ ಹಾಗೂ ಪ್ರಾದೇಶಿಕತೆ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಲಾಗುತ್ತಿದೆ’ ಎಂದು ಆರೋಪಿಸಿದರು.

ರೈತ ಮುಖಂಡ ಬಿ.ಎಸ್. ಸೊಪ್ಪಿನ ಸಿಐಟಿಯು ಧ್ವಜಾರೋಹಣ ನೇರವೇರಿಸಿದರು. ಸಮುದಾಯ ಕಲಾ ತಂಡದವರು ಸೌಹಾರ್ದ ಗೀತೆಗಳನ್ನು ಪ್ರಸ್ತುತಪಡಿಸಿದರು.

ಕಾರ್ಮಿಕ ಮುಖಂಡರಾದ ಬಿ.ಐ. ಈಳಿಗೇರ, ಉದಯ ಗದಗಕರ, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಮಹೇಶ ಹುಲಗೋಡ, ಮಂಜುನಾಥ ಹುಜರಾತಿ, ಕೆ.ಎಚ್. ಪಾಟೀಲ, ಡಾ. ರಾಘವೇಂದ್ರ ಪಾಟೀಲ, ಖತಾಲಸಾಬ ಮುಲ್ಲಾ, ಮೊಹ್ಮದರಫೀಕ್ ಮುಳಗುಂದ, ಲಕ್ಷ್ಮಣ ಅವರಾದಿ, ವೀರೇಶ ಗುಡ್ಡದಮಠ, ಹನಮಂತ ಅಂಬಿಗೇರ, ಗಾಳೆಪ್ಪ ಮುತ್ಯಾಳ, ಮನೋಜ ತೋರಣಗಟ್ಟಿ ಇದ್ದರು. ಹಮಾಲಿ, ಗ್ರಾಮ ಪಂಚಾಯಿತಿ ಹಾಗೂ ಕೃಷಿ ವಿಶ್ವವಿದ್ಯಾಲಯ ಹಂಗಾಮಿ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಮಿಕ ವಿರೋಧಿ ನೀತಿಗೆ ಆಕ್ರೋಶ

ಎಐಟಿಯುಸಿ ಹಾಗೂ ಇತರ ಕಾರ್ಮಿಕ ಸಂಘಟನೆಗಳ ಕಾರ್ಮಿಕರು ಸ್ಟೇಷನ್ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಕಾರ್ಮಿಕ ಮುಖಂಡ ದಿವಂಗತ ಎ.ಜಿ. ಮುಧೋಳ ಭಾವಚಿತ್ರದೊಂದಿಗೆ ಚನ್ನಮ್ಮ ವೃತ್ತದವರೆಗೆ ನಡೆದ ಮೆರವಣಿಗೆ ಪಾಲಿಕೆ ಆವರಣದಲ್ಲಿ ಸಮಾರೋಪಗೊಂಡಿತು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರ್ಮಿಕರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಬಾಲಚಂದ್ರ ಗಂಗೂರ, ದೇವಾನಂದ ಜಗಾಪುರ, ಬಾಬಾಜಾನ್ ಮುಧೋಳ, ಎ.ಎಸ್. ಪೀರಜಾದೆ, ಬಿ.ಎ, ಮುಧೋಳ್, ರಾಜಶೇಖರ ಮೆಣಸಿನಕಾಯಿ, ಡಾ. ಶರಣಪ್ಪ ಕೊಟಗಿ, ಸುರೇಶ ಸವಣೂರ, ಬಂಗಾರೇಶ ಹಿರೇಮಠ, ಅಮೃತ ಇಜಾರಿ, ಆರ್.ಎಫ್. ಕವಳಿಕಾಯಿ, ಯಮನೂರಪ್ಪ ಕಟ್ಟಿಮನಿ, ಶಾಜಿದ್ ಹಲಬಾವಿ, ಶ್ರೀಕಾಂತ, ಮುಸ್ತಾಕ್ ಕರ್ಜಗಿ, ಪುಂಡಲೀಕ ಬಡಿಗೇರ, ಶೈನಾಜ್ ಅಮರಗೋಳ, ಬಾನು ಮುಜಾವರ, ನಾಗಪ್ಪ ಪಾಟೀಲ, ಎನ್.ಐ. ನದಾಫ್, ಆಟೊ ಚಾಲಕರ ಸಂಘ, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು, ಆಶ್ರಯ ನಿವಾಸಿಗಳ ಸಂಘ, ಕೆಎಸ್‌ಆರ್‌ಟಿಸಿ, ಇಂಟೆಕ್ ಕಾಂಗ್ರೆಸ್ ಸೇರಿದಂತೆ ಇತರ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.