ಭಾನುವಾರ, ಸೆಪ್ಟೆಂಬರ್ 19, 2021
29 °C
ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಎದುರು ಗದಿಗೆಪ್ಪಗೌಡರ ಆಕ್ರೋಶ

ರಜತ್‌ ಉಳ್ಳಾಗಡ್ಡಿಮಠ ಬದಲಾಯಿಸದಿದ್ದರೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ರಜತ್‌ ಉಳ್ಳಾಗಡ್ಡಿಮಠ ಅವರನ್ನು ಕೂಡಲೇ ಕೆಳಗಿಳಿಸಿ, ಸಾಗರ ಹಿರೇಮನಿ ಅವರನ್ನು ಪುನರ್‌ ನೇಮಕ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಜಿಲ್ಲಾ ಕಾಂಗ್ರೆಸ್‌ ಘಟಕದ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡರ ಆಗ್ರಹಿಸಿದರು.

ಭಾನುವಾರ ನಗರಕ್ಕೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಬಲಿಗರೊಂದಿಗೆ ಭೇಟಿಯಾದ ಗಿರೀಶ್ ಅವರು, ರಜತ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತೀಚೆಗೆ ನಗರದಲ್ಲಿ ನಡೆದ ವಿಭಾಗದ ಮಟ್ಟದ ಕಾಂಗ್ರೆಸ್‌ ಸಮಾವೇಶದಲ್ಲಿ ಜಿಲ್ಲಾ ಘಟಕದ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳಿಗೆ ಮಾತ್ರ ಅವಕಾಶವಿತ್ತು. ಆದರೆ, ರಜತ್‌ ಪಕ್ಷದ ಕಾರ್ಯಕರ್ತರಲ್ಲದವರು ಹಾಗೂ ರೌಡಿಗಳನ್ನು ಕರೆದುಕೊಂಡು ಬಂದಿದ್ದರು. ಪಾಲಿಕೆ ಚುನಾವಣೆಗೆ ಟಿಕೆಟ್‌ ಹಂಚುತ್ತೇನೆ ಎನ್ನುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಾಗರ ಹಿರೇಮನಿ ಅಧ್ಯಕ್ಷರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಷದ ಮುಖಂಡರ ಸರ್ವಾನುಮತಿಯಿಲ್ಲದೆ ಅವರನ್ನು ಕೆಳಗಿಳಿಸಿ, ರಜತ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಇದು ಮಾದಿಗ ಸಮಾಜಕ್ಕೆ ಮಾಡಿದ ಅನ್ಯಾಯ. ಜಿಲ್ಲಾ ಘಟಕದ ಅಧ್ಯಕ್ಷರು ಎಲ್ಲದಕ್ಕೂ ತಲೆ ಅಲ್ಲಾಡಿಸುತ್ತಾರೆ. ರಜತ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಿದ್ದರೆ ಮಾದಿಗ, ವೀರಶೈವ ಹಾಗೂ ಲಿಂಗಾಯತ ಸಮಾಜದ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಚುನಾವಣೆಗೆ ಒಬ್ಬರೇ 25 ಮಂದಿಗೆ ಟಿಕೆಟ್‌ ಹಂಚಿಕೆ ಮಾಡಲು ಅವಕಾಶವಿಲ್ಲ. ನಿಮ್ಮಲ್ಲಿಯ ಸಮಸ್ಯೆ ಕುರಿತು ಪರಿಶೀಲಿಸಲು ತಿಳಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಅರಿವಾದಾಗ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿ ಎದುರಾಗಿದೆಯೇ ಹೊರತು, ಇದು ಕಾರ್ಯಕರ್ತರ ಕಚ್ಚಾಟವಲ್ಲ’ ಎಂದರು.

ಪ್ರಫುಲ್‌ಚಂದ್ರ ರಾಯನಗೌಡರ್‌, ಮೋಹನ ಹಿರೇಮನಿ, ಸಾಗರ ಹಿರೇಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು