ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆ ಎದುರು ಡಿಸಿಪಿಗೆ ನಿಂದನೆ: ಅಶೋಕ ಅಣ್ವೇಕರ ವಿರುದ್ಧ ಎಫ್‌ಐಆರ್‌

Last Updated 20 ಅಕ್ಟೋಬರ್ 2021, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಪ್ರಚೋದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಯವರು ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟಿಸುವಾಗ ವ್ಯಕ್ತಿಯೊಬ್ಬರು ಡಿಸಿಪಿಯನ್ನು ಬಹಿರಂಗವಾಗಿ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಅಶೋಕ ಅಣ್ವೇಕರ ಹಾಗೂ ಇತರ 100 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ. ರಾಮರಾಜನ್ ದೂರು ದಾಖಲಿಸಿದ್ದಾರೆ.

ಅಶೋಕ ಅಣ್ವೇಕರ ಜೊತೆಗಿದ್ದ ಬಜರಂಗದಳ ಹಾಗೂ ಇತರ ಹಿಂದೂಪರ ಸಂಘಟನೆಯ 100 ಜನ ಕಾರ್ಯಕರ್ತರು ಪೊಲೀಸ್‌ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಅ. 17ರಂದು ನವನಗರ ಪೊಲೀಸ್‌ ಠಾಣೆಯ ಮುಂದೆ ಏಕಾಏಕಿ ಪ್ರತಿಭಟಿಸಿ, ಅಕ್ರಮವಾಗಿ ಗುಂಪು ಕಟ್ಟಿಕೊಂಡು ಠಾಣೆಗೆ ನುಗ್ಗಿ ಸರ್ಕಾರಿ ಕರ್ತವ್ಯ ನಿಭಾಯಿಸಲು ಪೊಲೀಸರಿಗೆ ಅಡ್ಡಿಯುಂಟು ಮಾಡಿದ್ದಾರೆ. ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮತ್ತು ಶಾಂತಿಗೆ ಭಂಗವಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿಮಗೆ (ಪೊಲೀಸರಿಗೆ) ಹೆಲ್ಮೆಟ್‌ ಹಾಕದೆ ಇರುವವರನ್ನು ಹಾಗೂ ಸಣ್ಣ ಕಳ್ಳರನ್ನು ಹಿಡಿಯುವಂಥದ್ದನ್ನು ಬಿಟ್ಟರೆ ಮತಾಂತರದ ಆರೋಪಿಗಳನ್ನು ಹಿಡಿಯುವ ತಾಕತ್ತು ಇಲ್ಲ. ಒಬ್ಬ ಡಿಸಿಪಿಯಿಂದಾಗಿ ಪೊಲೀಸ್‌ ಇಲಾಖೆ ಮರ್ಯಾದೆ ಹರಾಜು ಆಗಿದೆ. ನೀನು ಯಾವ ಧರ್ಮಕ್ಕೆ ಹೋಗಿದ್ದಿಯಾ?, ಆ ಧರ್ಮದ ಯಾವ ವ್ಯಕ್ತಿಯನ್ನು ಆದರ್ಶವಾಗಿ ಇಟ್ಟುಕೊಂಡು ಹೋಗಿದ್ದಿಯಾ? ಆ ವ್ಯಕ್ತಿಯ ಮೈತುಂಬಾ ಮಳೆ ಹೊಡೆದದ್ದನ್ನು ನೀನು ನೋಡಿದ್ದೀಯಾ? ಎಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಮರಾಜನ್‌ ದೂರಿನಲ್ಲಿ ತಿಳಿಸಿದ್ದಾರೆ.

ಅಂದು ಪೊಲೀಸ್ ಠಾಣೆ ಮುಂದೆ ವ್ಯಕ್ತಿಯೊಬ್ಬರು ಅವಾಚ್ಯವಾಗಿ ಡಿಸಿಪಿಯನ್ನು ನಿಂದಿಸಿದ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು.

ಪೊಲೀಸ್‌ ಇಲಾಖೆಯಲ್ಲಿ ಶೇ 99ರಷ್ಟು ಜನ ಸಿಬ್ಬಂದಿ ಹಿಂದೂಗಳೇ ಇದ್ದು, ಅವರೆಲ್ಲ ಕಾನೂನು ಪಾಲನೆ ಮಾಡುತ್ತಿದ್ದಾರೆ. ಆದರೆ ಮತಾಂತರಿ, ದೇಶದ್ರೋಹಿ ಹಾಗೂ ಸೋನಿಯಾ ಗಾಂಧಿಯ ಚಮಚಾ ಡಿಸಿಪಿ, ಠಾಣೆಗೆ ಸಂಘಟನೆಯ ಕಾರ್ಯಕರ್ತರು ಕರೆದುಕೊಂಡು ಬಂದ ಆರೋಪಿಯನ್ನೇ ವಾಪಸ್‌ ಕಳುಹಿಸಿದ್ದಾನೆ ಆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದು, ವಿಡಿಯೊದಲ್ಲಿ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT