ಶನಿವಾರ, ಮೇ 21, 2022
23 °C
ಕಲಘಟಗಿ: ಮೂಲಸೌಲಭ್ಯಗಳ ಸಮಸ್ಯೆ, ಕ್ರಮಕ್ಕೆ ಆಗ್ರಹ

ಗಾಂಧಿನಗರ: ಇಲ್ಲಗಳದ್ದೇ ಕಾರುಬಾರು

ಕಲ್ಲಪ್ಪ ಮಿರ್ಜಿ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 2ನೇ ವಾರ್ಡ್‌ ಗಾಂಧಿನಗರದ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಜನ ಹೈರಾಣಾಗಿದ್ದಾರೆ.

ರಸ್ತೆಯುದ್ದಕ್ಕೂ ಕಸ, ಕಡ್ಡಿ ಬೆಳೆದಿದ್ದು ಪಟ್ಟಣ ಪಂಚಾಯ್ತಿಯಿಂದ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಹಾಗೂ ಸ್ವಚ್ಛತೆ ನಿರ್ವಹಣೆ ಕೆಲಸ ಆಗುತ್ತಿಲ್ಲ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಈ ಬಡಾವಣೆಯಲ್ಲಿ ಮನೆಗಳು ತೀರಾ ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಹಾಗೂ ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗಿ ನಿವಾಸಿಗಳು ತೀರಾ ತೊಂದರೆ ಅನುಭವಿಸುತ್ತಿದ್ದಾರೆ.

‘ವಾರ್ಡ್‌ನ ಪಕ್ಕದಲ್ಲಿ ರಾಜ್ಯ ಹೆದ್ದಾರಿ ಇರುವುದರಿಂದ ದಿನನಿತ್ಯ ರಸ್ತೆಗೆ ಕಸ ಹಾಕುತ್ತಾರೆ. ವಿಲೇವಾರಿ ಸರಿಯಾಗಿ ಆಗದ ಕಾರಣ ಚರಂಡಿ ತುಂಬಿ ಹಂದಿಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗುತ್ತಿದೆ. ಈ ಕುರಿತು ಆದಷ್ಟು ಬೇಗನೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಪರಶುರಾಮ ಬಂಡಿವಡ್ಡರ ಆಗ್ರಹಿಸಿದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೈ.ಜಿ ಗದ್ದಿಗೌಡರ ಪ್ರಜಾವಾಣಿಗೆ ಪ್ರತಿಕ್ರಿಯಿಸಿ ‘ಮನೆಗಳು ತೆಗ್ಗು ಪ್ರದೇಶದಲ್ಲಿ ಇರುವುದರಿಂದ ಜೋರು ಮಳೆ ಬಂದಾಗ ಆಗುವ ಸಮಸ್ಯೆ ಗಮನಕ್ಕೆ ಬಂದಿದೆ. ಚರಂಡಿ ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸಿ ವಾರ್ಡ್‌ನ ಅಭಿವೃದ್ಧಿ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗುವುದು. ಸಮರ್ಪಕ ಕಸ ವಿಲೇವಾರಿಗೆ ಸೂಚಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು