ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂಬಾಯಿ ಹಾನಗಲ್ 108ನೇ ಜನ್ಮದಿನ: ಗುರುಕುಲ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ

Last Updated 5 ಮಾರ್ಚ್ 2021, 7:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದು ತರಗತಿ ಆಧರಿಸಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ಸಂಗೀತಾಭ್ಯಾಸ ಮಾಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆರ್ಥಿಕ ಸಾಮರ್ಥ್ಯ ಇಲ್ಲದ ಬಡ ವಿದ್ಯಾರ್ಥಿಗಳ ಹಿತಕ್ಕಾಗಿ ಹುಬ್ಬಳ್ಳಿಯಲ್ಲಿ ಅತ್ಯುತ್ತಮ ಗುಣಮಟ್ಟದ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ನಡೆಯುತ್ತಿರುವುದು ಹೆಮ್ಮೆಯ ಹಾಗೂ ದೇಶಕ್ಕೆ ಮಾದರಿಯಾದ ಕಾರ್ಯವಾಗಿದೆ ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಗಣಪತಿಭಟ್ ಹಾಸಣಗಿ ಹೇಳಿದರು.

ಇಲ್ಲಿನ ಉಣಕಲ್ಲಿನ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ ಆವರಣದಲ್ಲಿ ಶುಕ್ರವಾರ ನಡೆದ ಗಂಗೂಬಾಯಿ ಹಾನಗಲ್ ಅವರ 108ನೇ ಜನ್ಮದಿನ ಮತ್ತು ಎರಡನೇ ಹಂತದಲ್ಲಿ ನಾಲ್ಕು ವರ್ಷದ ಸಂಗೀತಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

108 ವರ್ಷಗಳ ಹಿಂದೆ ಈ ನಾಡಿನಲ್ಲಿ ಗಂಗೂಬಾಯಿ ಹಾನಗಲ್ ಎಂಬ ಹೆಸರಿನ ದಿವ್ಯ ಚೇತನ ಜನಿಸಿ, ಹುಬ್ಬಳ್ಳಿ ಹಾಗೂ ನಾಡಿನ ಭಾಗ್ಯವನ್ನು ಬಹಳ ಎತ್ತರಕ್ಕೆ ಕೊಂಡೊಯ್ದರು. ಯಾವ ಉದ್ದೇಶದಿಂದ ಈ ಗುರುಕುಲ ಸ್ಥಾಪನೆಯಾಯಿತೋ; ಆ ಉದ್ದೇಶದಲ್ಲಿ ಈಗಾಗಲೇ ಶೇ 50 ರಷ್ಟು ಯಶಸ್ಸು ಸಾಧಿಸಿದ್ದೇವೆ. ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಟ್ರಸ್ಟ್ ನಲ್ಲಿ ಅನೇಕ ವಿಶಿಷ್ಟ ಸಂಗೀತ ಕಛೇರಿಗಳನ್ನು ಆಯೋಜಿಸಬೇಕು. ಗುರುಕುಲದಲ್ಲಿ ಶಿಕ್ಷಣ ಪಡೆದು ಸಂಗೀತ ಜಗತ್ತಿಗೆ ಕಾಲಿಡುತ್ತಿರುವುದು ಸಂತಸದ ಸಂಗತಿಯಾಗಿದೆ. ಅವರು ಗುರುಕುಲದ ದಿನಗಳನ್ನು ಸ್ಮರಣೀಯವಾಗಿರಿಸಿಕೊಂಡು, ಗುರುಕುಲದ ಕೀರ್ತಿ ಹೆಚ್ಚಿಸಬೇಕು ಎಂದರು.

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಾಯಕ ಪಾಲನಕರ್ ಮಾತನಾಡಿ, ಆಧುನಿಕ ದಿನಗಳಲ್ಲಿ ಕಲೆ, ಸಂಸ್ಕೃತಿ ಪರಂಪರೆ ಮುಂದುವರೆಸಲು ಈ ಸಂಸ್ಥೆ ಉತ್ತಮ ಕೊಡುಗೆ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಗಂಗಜ್ಜಿಯ ಕನಸಿನಂತೆ ಸಾಧನೆ ಮಾಡಿ ದೇಶದ ಹೆಮ್ಮೆಯ ಸಂಗೀತಗಾರರಾಗಲಿ ಎಂದು ಹಾರೈಸಿದರು.

ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಮಾತನಾಡಿ, ಗಂಗೂಬಾಯಿ ಹಾನಗಲ್ ಅವರೊಂದಿಗಿನ ಒಡನಾಟ ಸ್ಮರಿಸಿದರು.ಈ ಪ್ರದೇಶಕ್ಕೆ ಗಂಗಾ ನಗರ ಎಂದು ನಾಮಕರಣ ಮಾಡಿದರೆ ಅರ್ಥಪೂರ್ಣವಾಗುತ್ತದೆ ಎಂದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿಮಂಜುಳಾ ಯಲಿಗಾರಮಾತನಾಡಿದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಭೋಗೆನಾಗರಕೊಪ್ಪದ ಬಸವರಾಜ ಬ.ಕಡ್ಲೆಣ್ಣವರ ಹಾಗೂ ಗಂಗೂಬಾಯಿ ಹಾನಗಲ್ ಕುಟುಂಬದ ಕಲಾವಿದರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿ ಪ್ರಮಾಣ ಪತ್ರ ನೀಡಿ ಸತ್ಕರಿಸಲಾಯಿತು.

ಸಂಗೀತ ಅಭ್ಯಾಸ ಪೂರ್ಣಗೊಳಿಸಿದವರನ್ನು ಸನ್ಮಾನಿಸಲಾಯಿತು.
ಸಂಗೀತ ಅಭ್ಯಾಸ ಪೂರ್ಣಗೊಳಿಸಿದವರನ್ನು ಸನ್ಮಾನಿಸಲಾಯಿತು.

ನಾರಾಯಣರಾವ್ ಹಾನಗಲ್, ಪಂಡಿತ್ ಕೈವಲ್ಯಕುಮಾರ್ ಗುರವ್, ವಿದುಷಿ ವಿಜಯಾ ಜಾಧವ ಗಾಟ್ಲೆವಾರ್, ಟ್ರಸ್ಟ್ ಆಡಳಿತಾಧಿಕಾರಿ ಜಿ.ವಿ.ಪಾಟೀಲ, ಅವರ ಆಡಳಿತಾಧಿಕಾರಿ ಟಿ.ಬಿ.ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT