ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಎಲ್ಲೆಡೆ ಸೌಭಾಗ್ಯದ ಲಕ್ಷ್ಮಿ ದೇವಿಯ ಪ್ರಾರ್ಥನೆ

Published 25 ಆಗಸ್ಟ್ 2023, 7:04 IST
Last Updated 25 ಆಗಸ್ಟ್ 2023, 7:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲು ನಗರದ ಜನರು ಸಿದ್ಧರಾಗಿದ್ದು, ಗುರುವಾರ ಬೆಳಿಗ್ಗೆಯಿಂದಲೇ ಇಲ್ಲಿನ ಎಪಿಎಂಸಿ ಆವರಣ, ದುರ್ಗದಬೈಲ್‌ ಸೇರಿದಂತೆ ಮಹಾತ್ಮ ಗಾಂಧಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಬಾಳೆಕಂಬ, ಬಾಳೆಎಲೆ, ಮಾವಿನ ತೋರಣ ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ತುಸು ಜೋರಾಗಿಯೇ ನಡೆಯಿತು.

ಇಲ್ಲಿನ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಮಲ್ಲಿಗೆ, ಚೆಂಡು, ಕನಕಾಂಬರ ಹೂವು, ಬಾಳೆಕಂಬ ಹಾಗೂ ಸೇಬು, ಮೊಸಂಬಿ ಸೀತಾಫಲ ಹಣ್ಣುಗಳ ಬೆಲೆಯಲ್ಲಿ  ಏರಿಕೆ ಕಂಡುಬಂದರೂ ಜನರು ಖರೀದಿ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ.

ಮಾರುಕಟ್ಟೆಯ ರಸ್ತೆಯ ಇಕ್ಕೆಲಗಳಲ್ಲಿ ಬಗೆ ಬಗೆಯ ಹೂವಿನ ವ್ಯಾಪಾರವೂ ಜೋರಾಗಿಯೇ ನಡೆಯಿತು. ಪೂಜಾ ಸಾಮಗ್ರಿಗಳ ಮಾರಾಟದ ಅಂಗಡಿಗಳ ಮುಂದೆ ಜನರ ದ‌ಟ್ಟಣೆಯೇ ಸೇರಿತ್ತು. ಇದರಿಂದಾಗಿ ಇಲ್ಲಿನ ದುರ್ಗದಬೈಲ್‌ ಪ್ರದೇಶದಲ್ಲಿ ವಾಹನ ಹಾಗೂ ಜನರ ದಟ್ಟಣೆ ಹೆಚ್ಚಿತ್ತು. ದಿನವಿಡೀ ಈ ಮಾರ್ಗದಲ್ಲಿ ಜನರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯೂ ಉಂಟಾಯಿತು.

ಎಲ್ಲರ ಮನೆಗಳಲ್ಲಿ ಶುಕ್ರವಾರ ಬೆಳಿಗ್ಗೆಯೇ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ದೇವಿಯನ್ನು ವಿವಿಧ ಹೂವುಗಳ ಮೂಲಕ ಅಲಂಕರಿಸಿ, ಮನೆಯವರೆಲ್ಲಾ ಸೇರಿ ವಿಶೇಷವಾಗಿ ಪೂಜಿಸುತ್ತಾರೆ. ದೇವಿಯ ಪೂಜೆಗೆ ಯಾವುದೂ ಕಡಿಮೆಯಾಗಬಾರದು ಎಂದು ಮಹಿಳೆಯರು ತಮ್ಮ ಕುಟುಂಬ ಸಮೇತ ಮಾರುಕಟ್ಟೆಗೆ ಬಂದು ವಸ್ತುಗಳನ್ನು ಖರೀದಿಸಿದರು.

ವರಮಹಾಲಕ್ಷ್ಮಿ ದೇವಿ ಪೂಜೆಗೆ ಹೂವು, ಹಣ್ಣುಗಳ ಅಗತ್ಯ. ಇವುಗಳ ದರದಲ್ಲಿ ಏರಿಕೆಯಾಗಿತ್ತು. ಒಂದು ಮಾರು ಮಲ್ಲಿಗೆ ಹೂವಿಗೆ ₹ 50ಕ್ಕೆ ಮಾರಾಟವಾಗುತ್ತಿತ್ತು. ಚೆಂಡು ಹೂವು ಒಂದು ಮಾರಿಗೆ ₹ 70ರಿಂದ ₹120ರ ತನಕ ಮಾರಾಟವಾಗುತ್ತಿತ್ತು.

ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಗುರುವಾರ ಬಾಳೆಕಂಬ ಮಾವಿನ ತೋರಣದ ಮಾರಾಟ ಜೋರಾಗಿತ್ತು
ಚಿತ್ರ: ಗೋವಿಂದರಾಜ್ ಜವಳಿ
ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಗುರುವಾರ ಬಾಳೆಕಂಬ ಮಾವಿನ ತೋರಣದ ಮಾರಾಟ ಜೋರಾಗಿತ್ತು ಚಿತ್ರ: ಗೋವಿಂದರಾಜ್ ಜವಳಿ

‘ಹೂವು, ಹಣ್ಣುಗಳ ಬೆಲೆಯಲ್ಲಿ ಎಷ್ಟೇ ಏರಿಕೆಯಾದರೂ ಲಕ್ಷ್ಮಿ ದೇವಿ ಪೂಜೆಗಾಗಿ ಜನರು ಖರೀದಿಸುತ್ತಾರೆ. ಇದರಿಂದ ಬೆಳೆಗಾರರಿಗೂ ಹಾಗೂ ನಮಗೂ ಸ್ವಲ್ಪ ಲಾಭವಾಗುತ್ತದೆ’ ಎನ್ನುತ್ತಾರೆ ಇಲ್ಲಿನ ದುರ್ಗದ ಬೈಲು ಮಾರುಕಟ್ಟೆಯಲ್ಲಿನ ಹೂವು, ಹಣ್ಣುಗಳ ವ್ಯಾಪಾರಿ ರಾಮಚಂದ್ರಪ್ಪ.

‘ವರಮಹಾಲಕ್ಷ್ಮಿ ಪೂಜೆ ನಮಗೆ ದೊಡ್ಡ ಹಬ್ಬದಂತೆ. ಪ್ರತಿ ವರ್ಷ ಮನೆಯಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ, ಮನೆಯವರೆಲ್ಲಾ ಸೇರಿ ಸಂಭ್ರಮದಿಂದ ಪೂಜೆಸುತ್ತೇವೆ. ಪೂಜಾ ಸಾಮಗ್ರಿಗಳ ಬೆಲೆಯಲ್ಲಿ ಎಷ್ಟೇ ಏರಿಕೆಯಾದರೂ ಖರೀದಿಸುತ್ತೇವೆ’ ಎಂದು ಹೂವು ಖರೀದಿಸುತ್ತಿದ್ದ ಅನಿತಾ, ವೀಣಾ, ಭಾಸ್ಕರ ಹೇಳುತ್ತಾರೆ.

ತರಕಾರಿ ಬೆಲೆಯಲ್ಲಿ ಸ್ವಲ್ಪ ಇಳಿಕೆ: ಕೆಲ ದಿನಗಳ ಹಿಂದೆ ಕೆಜಿಗೆ ₹150ರ ತನಕ ಏರಿಕೆಯಾಗಿದ್ದ ಟೊಮೆಟೊ. ಗುರುವಾರ ಮಾರುಕಟ್ಟೆಯಲ್ಲಿ ಕೆಜಿಗೆ ₹30ಕ್ಕೆ ಮಾರಾಟವಾಯಿತು. ಈ ಹಿಂದೆ ಟೊಮೆಟೊ ಅರ್ಧ ಕೆಜಿ ಖರೀದಿಸುತ್ತಿದ್ದ ಜನರು 2– 3 ಕೆಜಿ ಖರೀದಿಸಿದ್ದೂ ಕಂಡುಬಂದಿತು. ಅದರಂತೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ, ಬದನೆಕಾಯಿ, ಹೂಕೂಸು, ಗಜ್ಜರಿ, ಬೀನ್ಸ್‌, ಹಿರೇಕಾಯಿ, ಬಟಾಣಿ, ಕ್ಯಾಪ್ಸಿಕಮ್‌, ಬೆಂಡೆಕಾಯಿ, ಚೌಳಿಕಾಯಿ, ಆಲೂಗಡ್ಡೆ, ಸೌತೆಕಾಯಿ ಬೆಲೆಯಲ್ಲಿ ತುಸು ಇಳಿಕೆ ಕಂಡುಬಂದಿತ್ತು. ಆದರೆ, ಈರುಳ್ಳಿ ಬೆಲೆ ಮಾತ್ರ ಕೆಜಿಗೆ ₹35ರಿಂದ ₹50ರ ತನಕ (ಗುಣಮಟ್ಟ, ಗಾತ್ರದ ಆಧಾರದ ಮೇಲೆ) ಮಾರಾಟವಾಗುತ್ತಿತ್ತು.

ವರಮಹಾಲಕ್ಷ್ಮಿ ಹಬ್ಬದ ವೇಳೆಯಲ್ಲಿ ಲಕ್ಷ್ಮಿ ದೇವಿಯ ಮೂರ್ತಿ ಮಂಟಪಗಳಿಗೆ ಬೇಡಿಕೆ ಇರುತ್ತದೆ. ಬೆಳಿಗ್ಗೆಯಿಂದ 20ಕ್ಕೂ ಹೆಚ್ಚು ದೇವಿ ಮೂರ್ತಿ ಮಂಟಪಗಳನ್ನು ಮಾರಾಟ ಮಾಡಿದ್ದೇವೆ.
ರಾಮರಾವ್ ಕುಲಕರ್ಣಿ ಬಾಂಡೆ ಮಾರಾಟ ಅಂಗಡಿಯ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT