ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷಧಾರೆ; ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು

Published 6 ಜೂನ್ 2024, 0:24 IST
Last Updated 6 ಜೂನ್ 2024, 0:24 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಕಲಬುರಗಿ: ಧಾರವಾಡ, ಬೆಳಗಾವಿ, ಕಲಬುರಗಿ, ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಮಳೆಯಾಯಿತು.

ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಸಂಜೆ ಶುರುವಾದ ಮಳೆಯು ರಾತ್ರಿಯವರೆಗೆ ಮುಂದುವರೆಯಿತು. ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮತ್ತು ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಡಂಬಳ ಭಾಗದಲ್ಲಿ ಉತ್ತಮ ಮಳೆಯಾಯಿತು.

ಕಲಬುರಗಿಯಲ್ಲಿ ಬಿಸಿಲು, ಮೋಡಕವಿದ ವಾತಾವರಣದೊಂದಿಗೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಮಿಂಚು ಸಹಿತ ಜೋರು ಮಳೆ ಸುರಿಯಿತು.

ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಬಿರುಸಿನ ಮಳೆಯಾಗುತ್ತಿದೆ. ಬುಧವಾರವೂ ಮುಂದುವರಿದು, ಸುಮಾರು 40 ನಿಮಿಷಗಳ ಕಾಲ ಸುರಿಯಿತು. ಮಳೆಯಿಂದ ನಗರದ ಪ್ರಮುಖ ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯಿತು.

ಕಾಳಗಿ, ಚಿಂಚೋಳಿ ಸೇರಿದಂತೆ ಹಲವೆಡೆ ಗುಡುಗು ಮಿಂಚಿನೊಂದಿಗೆ ಅರ್ಧ ಗಂಟೆ ಧಾರಾಕಾರ ಮಳೆಯಾಯಿತು. ಕೃಷಿ ಜಮೀನು ಬಿತ್ತನೆಗೆ ಅಗತ್ಯವಾದಷ್ಟು ತೇವಾಂಶ ಹೊಂದಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಬೀದರ್‌ ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ವರ್ಷಧಾರೆಯಾಗಿದೆ. ಹುಮನಾಬಾದ್‌ ಹಾಗೂ ಚಿಟಗುಪ್ಪ ತಾಲ್ಲೂಕಿನ ಹಲವು ಕಡೆಗಳಲ್ಲಿ ಮಳೆಯಾಗಿರುವುದು ವರದಿಯಾಗಿದೆ.

ಶಿವಮೊಗ್ಗ/ದಾವಣಗೆರೆ ವರದಿ: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಬುಧವಾರ ಉತ್ತಮ ಮಳೆಯಾಗಿದೆ. ಶಿಕಾರಿಪುರದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ಸಾಗರ, ಸೊರಬದಲ್ಲಿ ಸಾಧಾರಣ ವರ್ಷಧಾರೆಯಾಗಿದೆ. 

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ನಗರದಲ್ಲಿ ಮಧ್ಯಾಹ್ನ ಹಾಗೂ ಸಂಜೆ ಕೆಲ ಹೊತ್ತು ಜೋರು ಮಳೆ ಸುರಿಯಿತು. ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಮಲೇಬೆನ್ನೂರು, ಸಾಸ್ವೆಹಳ್ಳಿ, ಕಡರನಾಯ್ಕನಹಳ್ಳಿ ಭಾಗದಲ್ಲಿ ಸುರಿದ ಮಳೆಗೆ ವಾತಾವರಣ ತಂಪಾಯಿತು.

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಚಿಕ್ಕಮಗಳೂರು, ಆಲ್ದೂರು, ಬಾಳೆಹೊನ್ನೂರು, ಕೊಪ್ಪ, ಕಳಸ ಭಾಗದಲ್ಲಿ ಹದ ಮಳೆಯಾಗಿದ್ದರೆ, ಬೀರೂರು ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಮುಳ್ಳಯ್ಯನಗಿರಿಗೆ ಬೆಳ್ಳಿ ಮೋಡಗಳು ಮುತ್ತಿಗೆ ಹಾಕಿದಂತೆ ಭಾಸವಾಗುತ್ತಿದ್ದು, ಪ್ರವಾಸಿಗರಿಗೆ ಹಿತಕರ ವಾತಾವರಣ ನಿರ್ಮಾಣವಾಗಿದೆ.

ಸಿಡಿಲು ಬಡಿದು ಸಾವು

ಅರಕಲಗೂಡು(ಹಾಸನ ವರದಿ): ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಹೊಲದಲ್ಲಿ ಬುಧವಾರ ಮಧ್ಯಾಹ್ನ ಸಿಡಿಲು ಬಡಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಮೂವರು ತೀವ್ರವಾಗಿ ಗಾಯಗೊಂಡರು.

ದ್ಯಾವಮ್ಮ (60) ಪುಟ್ಟಮ್ಮ (60) ಮೃತರು. ಗಾಯಾಳುಗಳಾದ ಮರೀಗೌಡ, ಉಷಾ, ಸರೋಜಾ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಜಮೀನಿನಲ್ಲಿ  ಅವರೆಲ್ಲರೂ ಜೋಳ ಬಿತ್ತನೆ ಮಾಡುತ್ತಿದ್ದರು. ಮಳೆ ಬಂದಿದ್ದರಿಂದ ರಕ್ಷಣೆಗಾಗಿ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿಯಿತು.

ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎ.ಮಂಜು, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುರಿದ ಮಳೆಯಲ್ಲಿಯೇ ನೆನೆಯುತ್ತ ಬೈಕ್‌ ಸವಾರರು ಸಾಗಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಬುಧವಾರ ಸುರಿದ ಮಳೆಯಲ್ಲಿಯೇ ನೆನೆಯುತ್ತ ಬೈಕ್‌ ಸವಾರರು ಸಾಗಿದರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT