ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸರ್ಕಾರಿ ಇಂಗ್ಲಿಷ್‌ ಶಾಲೆಗಳತ್ತ ಹೆಚ್ಚಿದ ಒಲವು

ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 7 ಕನ್ನಡ ಸರ್ಕಾರಿ ಶಾಲೆಗಳಲ್ಲಿ ಆರಂಭ
Last Updated 18 ಸೆಪ್ಟೆಂಬರ್ 2021, 3:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ಸಂಕಷ್ಟದಿಂದ ತತ್ತರಿಸಿರುವ ಬಡ ಮಧ್ಯಮ ವರ್ಗದ ಪಾಲಕರು ಇದೀಗ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಇಂಗ್ಲಿಷ್‌ ಶಾಲೆಗಳತ್ತ ಮುಖಮಾಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 2019-20ನೇ ಸಾಲಿನಿಂದ ಸರ್ಕಾರಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಪರಿಚಯಿಸಲಾಗಿದ್ದು, ಒಟ್ಟು 3,273 ಮಕ್ಕಳು ಓದುತ್ತಿದ್ದಾರೆ.

2019–20ರಲ್ಲಿ 24 ಕನ್ನಡ ಹಾಗೂ 4 ಉರ್ದು ಶಾಲೆಗಳಲ್ಲಿ, 2020–21ರಲ್ಲಿ 19 ಉರ್ದು ಹಾಗೂ 11 ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ವಿಭಾಗ ಆರಂಭಗೊಂಡಿದ್ದು, ಪ್ರಸಕ್ತ 2021–22ನೇ ಸಾಲಿಗೆ 7 ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ವಿಭಾಗ ಆರಂಭಕ್ಕೆ ಅನುಮತಿ ಸಿಕ್ಕಿದೆ. ಜಿಲ್ಲೆಯ 65 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಪರಿಚಯಿಸಲಾಗಿದೆ.

ಈ ಪೈಕಿ 24 ಕನ್ನಡ ಸರ್ಕಾರಿ ಶಾಲೆ, 4 ಉರ್ದು ಸರ್ಕಾರಿ ಶಾಲೆಯಲ್ಲಿ ಒಂದರಿಂದ ಮೂರನೇ ತರಗತಿಗಳಲ್ಲಿ 2,520 ವಿದ್ಯಾರ್ಥಿಗಳಿದ್ದಾರೆ. 19 ಸರ್ಕಾರಿ ಉರ್ದು ಶಾಲೆಯಲ್ಲಿ 404 ಮಕ್ಕಳಿದ್ದಾರೆ. 18 ಕನ್ನಡ ಸರ್ಕಾರಿ ಶಾಲೆಗಳಲ್ಲಿ 349 ಮಕ್ಕಳು ಓದುತ್ತಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ಅರ್ಜಿ ಸಲ್ಲಿಕೆ: ಪ್ರತಿ ತರಗತಿಗೆ 30 ವಿದ್ಯಾರ್ಥಿಗಳ ದಾಖಲಾತಿ ಮಿತಿ ನಿಗದಿಪಡಿಸಲಾಗಿದೆ. ಆದರೆ, ಜಿಲ್ಲೆಯ ಹಲವು ಶಾಲೆಗಳಲ್ಲಿ ಒಂದನೇ ತರಗತಿಯ ಇಂಗ್ಲಿಷ್‌ ವಿಭಾಗಕ್ಕೆ ಸೇರಲು ಅಗತ್ಯಕ್ಕಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ, ಆ ಶಾಲೆಗಳು ಹೆಚ್ಚುವರಿ ವಿಭಾಗ ಆರಂಭಿಸಲು ಮನವಿ ಮಾಡಿವೆ.

‘ಜಿಲ್ಲೆಯ 9 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ 1ನೇ ತರಗತಿಗೆ ಹೆಚ್ಚುವರಿ ವಿಭಾಗ ಆರಂಭಿಸಲು ಅನುಮತಿ ಕೋರಿ ಮನವಿ ಮಾಡಲಾಗಿದೆ. ಶಾಲೆಯಲ್ಲಿರುವ ಕೊಠಡಿಗಳ ಸೌಲಭ್ಯ, ಬೋಧಕ ಸಂಪನ್ಮೂಲದಂಥ ವಿವರಗಳನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಹೆಚ್ಚುವರಿ ವಿಭಾಗ ಆರಂಭಕ್ಕೆ ಶೀಘ್ರವೇ ಮಂಜೂರಾತಿ ಸಿಗುವ ಸಾಧ್ಯತೆಗಳಿವೆ’ ಎಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಧಾರವಾಡ ಜಿಲ್ಲಾ ಉಪಯೋಜನಾಧಿಕಾರಿ ಎಸ್‌.ಎಂ.ಹುಡೇದಮನಿ ತಿಳಿಸಿದರು.

ಶೂನ್ಯ ದಾಖಲಾತಿ; ಶಾಲೆ ಬದಲು: ಜಿಲ್ಲೆಯ ಕೆಲ ಶಾಲೆಗಳಿಗೆ 2020–21ನೇ ಸಾಲಿನಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಮಂಜೂರಾಗಿದ್ದರೂ, ಕಾರಣಾಂತರಗಳಿಂದ ಅಲ್ಲಿ ತರಗತಿಗಳು ಆರಂಭಗೊಂಡಿರಲಿಲ್ಲ. ನವಲಗುಂದ, ಕುಂದಗೋಳ ಸೇರಿದಂತೆ ಅಂಥ 6 ಶಾಲೆಗಳ ಬದಲಿಗೆ ಹುಬ್ಬಳ್ಳಿ–ಧಾರವಾಡದ ಇತರ ಆರು ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಕಲಘಟಗಿ ತಾಲ್ಲೂಕಿನ ಒಂದು ಶಾಲೆಯಲ್ಲಿ ಈ ತನಕ ಶೂನ್ಯದಾಖಲಾತಿ ಇದೆ
ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಕರಿಗೆ ತರಬೇತಿ: ಧಾರವಾಡ ನಗರದಲ್ಲಿರುವ ಡಯಟ್‌ನಲ್ಲಿ 19 ಉರ್ದು ಹಾಗೂ ಏಳು ಕನ್ನಡ ಶಾಲೆಗಳ ತಲಾ ಇಬ್ಬರು ಶಿಕ್ಷಕರಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುವ ಕುರಿತು ತರಬೇತಿ ನಡೆಯುತ್ತಿದೆ. ಅವರಿಗೆ 15 ದಿನಗಳ ಕಾಲ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಕಿ–ಅಂಶ

65 - ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಹೊಂದಿರುವ ಶಾಲೆಗಳು

3,273 - ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗದಲ್ಲಿ ಓದುತ್ತಿರುವ ಮಕ್ಕಳು

248 - ಇಂಗ್ಲಿಷ್‌ ಮಾಧ್ಯಮ ತರಗತಿ ಪ್ರವೇಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT