ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವ

ಬಸ್‌ ಕಾರ್ಯಾಚರಣೆ ಪರಿಶೀಲಿಸಿದ ರಾಜೇಂದ್ರ ಚೋಳನ್‌ ಹೇಳಿಕೆ
Last Updated 19 ಮೇ 2020, 15:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಪರಿಣಾಮದಿಂದ ಇಲಾಖೆಗೆ ಆದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಮಾಸಿಕ ಪಾಸ್‌ ದರ ಹೆಚ್ಚಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲಾಖೆಯನ್ನು ಆರ್ಥಿಕವಾಗಿ ಗಟ್ಟಿಗೊಳಿಸಲು ಹೊಸ ಯೋಜನೆಗಳನ್ನೂ ರೂಪಿಸಲಾಗುತ್ತಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.

ನಗರದ ಹೊಸ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಬಸ್‌ಗಳ ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮಾಸಿಕ ಪಾಸ್‌ ಇದ್ದವರು ಒಂದು ಬಸ್‌ನಲ್ಲಿ 30 ಜನರಿದ್ದರೆ ಆಗ ಇಲಾಖೆಗೆ ಹೆಚ್ಚು ನಷ್ಟವಾಗುತ್ತದೆ. ಆದ್ದರಿಂದ ಮಾಸ್‌ ಬೆಲೆ ಹೆಚ್ಚಳ ಮಾಡುವ ಮೂಲಕ ನಷ್ಟ ಸರಿದೂಗಿಸಲಾಗುವುದು. ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ವಿದ್ಯಾರ್ಥಿಗಳ ಪಾಸ್‌ ದರ ಏರಿಕೆಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಾಯವ್ಯ ವಿಭಾಗದಲ್ಲಿ ಒಟ್ಟು 4,500ರಿಂದ 5,000 ಬಸ್‌ಗಳ ವೇಳಾಪಟ್ಟಿಯಿದೆ. ಮೊದಲ ಹಂತದಲ್ಲಿ ಶೇ 30ರಷ್ಟು ಬಸ್‌ಗಳ ಸಂಚಾರವನ್ನಷ್ಟೇ ಆರಂಭಿಸಲಾಗಿದೆ. ಮೊದಲ ದಿನ 500ರಿಂದ 600 ಬಸ್‌ಗಳು ತೆರಳಿದವು. ಮುಂದಿನ ವಾರದ ವೇಳೆಗೆ ಶೇ 50ರಷ್ಟು ಬಸ್ ಸಂಚಾರ ಆರಂಭಿಸುವ ಗುರಿಯಿದೆ. ಸ್ಟ್ರೀನಿಂಗ್‌ ಸಮಸ್ಯೆಯ ಕಾರಣ ಸದ್ಯಕ್ಕೆ ಗ್ರಾಮೀಣ ಭಾಗದಲ್ಲಿ ಬಸ್‌ಗಳು ಸಂಚರಿಸುವುದಿಲ್ಲ’ ಎಂದರು.

‘ಸಾರಿಗೆ ಇಲಾಖೆ ಮೊದಲಿನಿಂದಲೂ ನಷ್ಟದಲ್ಲಿದೆ. ಈಗ ಪ್ರತಿ ಬಸ್‌ನಲ್ಲಿ 30 ಪ್ರಯಾಣಿಕರಿಗಷ್ಟೇ ಅವಕಾಶ ಇರುವುದರಿಂದ ನಿತ್ಯ ಅಂದಾಜು ₹32 ಲಕ್ಷ ನಷ್ಟವಾಗುತ್ತದೆ. ಇದನ್ನು ಸರಿದೂಗಿಸಲು ವಾಣಿಜ್ಯದ ಉದ್ದೇಶಕ್ಕೂ ಬಸ್‌ ಸಂಚಾರ ಆರಂಭಿಸುವ ಯೋಜನೆಯಿದೆ. ರೈತರು ಬೆಳೆದ ಬೆಳೆಗಳನ್ನು ಎಪಿಎಂಸಿಗೆ ತಲುಪಿಸುವ ಸೌಲಭ್ಯ ಆರಂಭಿಸಲಾಗುವುದು. ಈ ಕುರಿತು ಎಪಿಎಂಸಿ ಅಧಿಕಾರಿಗಳ ಜೊತೆ ಚರ್ಚಿಸಲಾಗುತ್ತದೆ. ಇದಕ್ಕಾಗಿ ನೋಡಲ್‌ ಅಧಿಕಾರಿಗಳನ್ನೂ ನೇಮಿಸಲಾಗಿದೆ’ ಎಂದು ಹೇಳಿದರು.

‘ಇಲಾಖೆ ಬಹಳಷ್ಟು ನಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಎಲ್ಲ ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ಪೂರ್ಣ ವೇತನ ಪಾವತಿಸಿದೆ. 55 ವರ್ಷ ಮೇಲಿನ ಸಿಬ್ಬಂದಿಗೆ ಮೊದಲು ಅವರ ಖಾತೆಯಲ್ಲಿನ ರಜೆಗಳನ್ನು ಕೊಡಲಾಗುವುದು. ಬಳಿಕ ಹೆಚ್ಚು ಸುರಕ್ಷತೆ ಇರುವ ಕಡೆ ಕೆಲಸಕ್ಕೆ ನಿಯೋಜಿಸಲಾಗುವುದು. ನಷ್ಟವಾದರೂ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT