ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶದಿಕ್ಕುಗಳಲ್ಲಿ ಜಗ್ಗಲಗಿ ಅನುರಣನ

‘ಜಗ್ಗಲಗಿ ಹಬ್ಬ’ಕ್ಕೆ ಅದ್ಧೂರಿ ಚಾಲನೆ; ಗಮನ ಸೆಳೆದ ಮೆರವಣಿಗೆ; ಕುಣಿದು ಕುಪ್ಪಳಿಸಿದ ಜನ
Last Updated 21 ಮಾರ್ಚ್ 2022, 3:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋಳಿ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಜಗ್ಗಲಗಿ ಹಬ್ಬದಲ್ಲಿ, ದಶದಿಕ್ಕುಗಳಲ್ಲೂ ಜಗ್ಗಲಗಿಗಳು ಅನುರಣಿಸಿದವು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಹಲಗಿ, ಡೋಲು ವಾದ್ಯಗಳು, ಕೋಲಾಟದ ತಂಡಗಳು, ವೇಷಧಾರಿಗಳು, ಕಿವಿಗಡಚಿಕ್ಕುವ ಡಿ.ಜೆ ಸಂಗೀತ, ಬಣ್ಣದ ಎರಚಾಟ ಹಬ್ಬಕ್ಕೆ ಮೆರಗು ತಂದಿತು. ಹಬ್ಬದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ದಾರಿಯುದ್ದಕ್ಕೂ ಜಮಾಯಿಸಿದ್ದ ಜನ, ಕುಣಿದು ಕುಪ್ಪಳಿಸಿದರು.

ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಆಯೋಜಕ ಮಹೇಶ ಟೆಂಗಿನಕಾಯಿ ಸೇರಿದಂತೆ ವಿವಿಧ ಮಠಗಳ 20ಕ್ಕೂ ಹೆಚ್ಚು ಸ್ವಾಮೀಜಿಗಳು ಹಾಗೂ ಗಣ್ಯರು ಹಬ್ಬಕ್ಕೆ ಚಾಲನೆ ನೀಡಿದರು.

‘ನಮ್ಮ ಹಬ್ಬಗಳನ್ನು ರಾಷ್ಟ್ರೀಯ ಭಾವೈಕ್ಯದ ಹಬ್ಬಗಳನ್ನಾಗಿ ಆಚರಿಸುವ ಸಂಕಲ್ಪ ಮಾಡಬೇಕು’ ಎಂದು ಮೂರುಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಸಲಹೆ ನೀಡಿದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ‘ಹುಬ್ಬಳ್ಳಿ ಜಗ್ಗಲಗಿ ಹಬ್ಬವು ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಸಂಪ್ರದಾಯವನ್ನು ಸಾರುವ ನಾಡಿನ ಹಬ್ಬವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ನಾಡಿನ ಗ್ರಾಮೀಣ ಕಲಾವಿದರ ಪ್ರತಿಭೆ ಅನಾವರಣಕ್ಕೆ ಜಗ್ಗಲಗಿ ಹಬ್ಬವು ವೇದಿಕೆ ಕಲ್ಪಿಸಿಕೊಟ್ಟಿದೆ’ ಎಂದರು.

ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ 35 ತಂಡಗಳು ಸುಮಾರು 200ಕ್ಕೂ ಜಗ್ಗಲಗಿಗಳೊಂದಿಗೆ ಹಬ್ಬದಲ್ಲಿ ಭಾಗವಹಿಸಿದ್ದವು. ಗೋವಾದ ಜಗದಂಭಾ ಡೋಲ ತಾಷಾ ಪಠಾಕ್ ಮಹಿಳಾ ತಂಡ ಹಾಗೂ ಹಾನಗಲ್ಲದ ತಾರಕೇಸರ ಯುವಕ ಮಂಡಳದ ಬೇಡರ ವೇಷದ ತಂಡಗಳು ಗಮನ ಸೆಳೆದವು. ಮೂರು ಸಾವಿರ ಮಠದಿಂದ ಆರಂಭಗೊಂಡ ಜಗ್ಗಲಗಿ ತಂಡಗಳ ಮೆರವಣಿಗೆ ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ದುರ್ಗದ ಬೈಲ್ ರಾಧಾಕೃಷ್ಣ ಗಲ್ಲಿ, ಜವಳಿ ಸಾಲ, ಪೆಂಡಾರ ಗಲ್ಲಿ ಮಾರ್ಗವಾಗಿ ಮರಳಿ ರಾತ್ರಿ ಮಠವನ್ನು ತಲುಪುವುದರೊಂದಿಗೆ ಅಂತ್ಯಗೊಂಡಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ,ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಮಹಾನಗರ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಸುಭಾಸ ಸಿಂಗ್, ರಾಜು ಕೋರ್ಯಾಣಮಠ, ಸಂಗಮ ಹಂಜಿ, ಜಗದೀಶ ಬುಳ್ಳಾನವರ, ರವಿ ನಾಯ್ಕ, ನಾಗರಾಜ ಪಟ್ಟಣ, ತೋಟಪ್ಪ ನಿಡಗುಂದಿ, ಸತೀಶ ಶೇಜವಾಡಕರ, ರವಿ ಕೊಪ್ಪಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT