ಗುರುವಾರ , ಫೆಬ್ರವರಿ 27, 2020
19 °C
ಕರ್ನಾಟಕ ಕುಸ್ತಿ ಹಬ್ಬ 2020ರ ಲಾಂಛನ ಬಿಡುಗಡೆ

ಕುಸ್ತಿಪಟುಗಳ ಸಾಮೂಹಿಕ ವಿಮೆಗೆ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಇದೇ 22ರಿಂದ ಆರಂಭವಾಗಲಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲಾ ಕುಸ್ತಿಪಟುಗಳ ವೈಯಕ್ತಿಕ ಹಿತ ಕಾಯಲು ಅವರನ್ನು ಸಾಮೂಹಿಕ ವಿಮೆಗೆ ಒಳಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಕರ್ನಾಟಕ ಕುಸ್ತಿ ಹಬ್ಬದ–2020ರ ಲಾಂಛನ ಬಿಡುಗಡೆ ನೆರವೇರಿಸಿ ಗುರುವಾರ ಮಾತನಾಡಿದ ಅವರು, ‘ಜತೆಗೆ ಪಂದ್ಯಾವಳಿಯನ್ನು ಪಾರದರ್ಶಕವಾಗಿ ಆಯೋಜಿಸಲು ಮಾದಕ ದ್ರವ್ಯ ಸೇವನೆ ಪತ್ತೆಗೆ ನುರಿತ ನಾಡಾ ವೈದ್ಯಕೀಯ ತಜ್ಞರನ್ನು ನೇಮಿಸಲು ಸರ್ಕಾರವನ್ನು ಕೋರಲಾಗಿದೆ’ ಎಂದು ಮಾಹಿತಿ ನೀಡಿದರು.

‘ಫೆ. 25ರವರೆಗೂ ಕುಸ್ತಿ ಹಬ್ಬ ಜರುಗಲಿದ್ದು, ಇದಕ್ಕಾಗಿ ಮೂರು ಕುಸ್ತಿ ಅಂಕಣಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಭಾರತೀಯ ಕುಸ್ತಿ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ ಕುಸ್ತಿ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ ₹2ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ₹1.2ಕೋಟಿ ಮೊತ್ತವನ್ನು ಪಂದ್ಯಾವಳಿಯ ಆಯೋಜನೆಗೆ ಮತ್ತು ಉಳಿದ ಮೊತ್ತವನ್ನು ಬಹುಮಾನಕ್ಕೆ ಹಂಚಿಕೆ ಮಾಡಲಾಗಿದೆ’ ಎಂದರು.

‘ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸುವುದು ಹಾಗೂ ಹೆಚ್ಚು ಜನರು ವೀಕ್ಷಣೆಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಪಂದ್ಯಗಳು ಸಂಜೆ 5ರ ನಂತರ ಹೊನಲು ಬೆಳಕಿನಲ್ಲಿ ಪಂದ್ಯಗಳು ಜರುಗಲಿವೆ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸುಮಾರು 1200 ಕುಸ್ತಿಪಟುಗಳು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕುಸ್ತಿ ಹಬ್ಬದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕರ್ತಾರ ಸಿಂಗ್, ಸಾಕ್ಷಿ ಮಲ್ಲಿಕ್, ಯೋಗೇಶ್ವರ ದತ್ತ ಅವರು ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ದೀಪಾ ಚೋಳನ್ ಮಾಹಿತಿ ನೀಡಿದರು.

‘ಕ್ರೀಡಾಪಟುಗಳ ಊಟ ಹಾಗೂ ವಸತಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕುಸ್ತಿ ಹಬ್ಬದ ಯಶಸ್ಸಿಗೆ 16 ಸಮಿತಿಗಳನ್ನು ರಚಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅದಕ್ಕೆ ನೇಮಿಸಲಾಗಿದೆ. ಒಟ್ಟು ₹2.36ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಹೆಚ್ಚುವರಿ ಮೊತ್ತವನ್ನು ಬ್ಯಾಂಕ್‌, ಖಾಸಗಿ ಕಂಪನಿ, ಸಂಘ ಸಂಸ್ಥೆಗಳಿಂದ ಪ್ರಾಯೋಜಕತ್ವ ರೂಪದಲ್ಲಿ ಪಡೆಯಲಾಗುತ್ತಿದೆ’ ಎಂದರು.

ಕುಸ್ತಿ ಹಬ್ಬದ ಸವಿನೆನಪಿನಲ್ಲಿ ಜಿಲ್ಲೆಯಲ್ಲಿ ಒಂದು ಮಾದರಿ ಗರಡಿಮನೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಅಮೃತ ದೇಸಾಯಿ ತಿಳಿಸಿದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು