ಜಿಮ್ನಾಸ್ಟ್‌ಗಳ ಸಾಹಸ ಲೋಕ...; ದೊಡ್ಡ ಸಾಧನೆಯ ಹೆಗ್ಗುರಿ

ಹುಬ್ಬಳ್ಳಿ: ಅಲ್ಲಿ ಬೆಳಗಿನ ಜಾವ ಐದು ಗಂಟೆಗೆಲ್ಲ ಮಕ್ಕಳ ಕಲರವ. ದೈಹಿಕ ಕಸರತ್ತು ನಡೆಸಲು ನಾ ಮುಂದು, ತಾ ಮುಂದು ಎನ್ನುವ ಪೈಪೋಟಿ. ದೊಡ್ಡ ಸಾಧನೆ ಮಾಡುವ ಹೆಬ್ಬಯಕೆ ಹೊಂದಿರುವ ಜಿಮ್ನಾಸ್ಟ್‌ಗಳಿಗೆ ಕೋಚ್‌ಗಳಿಂದ ಕಟ್ಟುನಿಟ್ಟಿನ ತರಬೇತಿ.
ಇದು ಧಾರವಾಡದ ಕಿಲ್ಲಾ ಏರಿಯಾದಲ್ಲಿರುವ ಬಾಲಮಾರುತಿ ಸಂಸ್ಥೆಯ ಹಾರಾಡಿ ರಾಮಣ್ಣ ಶೆಟ್ಟಿ ಜಿಮ್ನಾಸ್ಟಿಕ್ ಸಂಸ್ಥೆಯ ಕೇಂದ್ರದಲ್ಲಿ ನಿತ್ಯ ಕಂಡುಬರುವ ವಾತಾವರಣ.
1969ರಲ್ಲಿ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಮೂಲಕ ಧಾರವಾಡದಲ್ಲಿ ಜಿಮ್ನಾಸ್ಟಿಕ್ ಚಟುವಟಿಕೆಗಳು ಆರಂಭವಾದವು. ಹಾರಾಡಿ ರಾಮಣ್ಣ ಶೆಟ್ಟಿ ಕೇಂದ್ರದಲ್ಲಿ ತರಬೇತಿ ಪಡೆದ ಜಿಮ್ನಾಸ್ಟ್‌ಗಳು ರಾಷ್ಟ್ರೀಯ ಮಟ್ಟದಲ್ಲಿ 35 ಪದಕಗಳನ್ನು ಜಯಿಸಿದ್ದಾರೆ. ರಾಜ್ಯಮಟ್ಟದಲ್ಲಿ ಮೂರೂ ಸಾವಿರಕ್ಕೂ ಹೆಚ್ಚು ಪದಕಗಳು ಬಂದಿವೆ.
10, 12 ಹಾಗೂ 14 ವರ್ಷದ ಒಳಗಿನವರ ಬಾಲಕ, ಬಾಲಕಿಯರ ವಿಭಾಗ ಮತ್ತು ಸೀನಿಯರ್ ವಿಭಾಗದಲ್ಲಿ ಪದಕಗಳ ಲಭಿಸಿವೆ. ಹಾರಾಡಿ ರಾಮಣ್ಣ ಶೆಟ್ಟಿ ಜಿಮ್ನಾಸ್ಟಿಕ್ ಸಂಸ್ಥೆ ಹಲವು ಬಾರಿ ಟೂರ್ನಿಗಳನ್ನು ಸಂಘಟಿಸಿದೆ.
ಕೋವಿಡ್ ಪ್ರಕರಣಗಳು ಕಡಿಮೆಯಾದ ಬಳಿಕ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಪೋಷಕರು ತಮ್ಮ ಮಕ್ಕಳು ಸಾಹಸ ಕ್ರೀಡೆ ಕಲಿಯಲಿ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ. ಬೆಳಿಗ್ಗೆ ಸಾಮಾನ್ಯ ದೈಹಿಕ ವ್ಯಾಯಾಮದಿಂದ ಆರಂಭವಾಗುವ ಅಭ್ಯಾಸ ಕೊನೆಗೆ ಕಠಿಣ ತಾಲೀಮಿನ ತನಕ ಮುಂದುವರಿಯುತ್ತದೆ.
ಮಕ್ಕಳು ಮನೆಯಲ್ಲಿ ವ್ಯರ್ಥವಾಗಿ ಸಮಯ ಕಳೆಯಬಾರದು ಎನ್ನುವ ಕಾರಣಕ್ಕೆ ಪೋಷಕರು ಕಳುಹಿಸುತ್ತಾರೆ. 100ರಿಂದ 120 ಮಕ್ಕಳು ಸಾಹಸ ಕ್ರೀಡೆಯ ಕೌಶಲಗಳನ್ನು ಕಲಿಯಲು ಬರುತ್ತಾರೆ ಎಂದು ಜಿಮ್ನಾಸ್ಟಿಕ್ ಸಂಸ್ಥೆಯ ಮುಖ್ಯ ಕೋಚ್ ವಿಠ್ಠಲ್ ಮೂರ್ತಗುಡ್ಡೆ ಹೇಳುತ್ತಾರೆ.
ವಿಠ್ಠಲ್ ಅವರು ವಿದ್ಯಾರ್ಥಿ ಹಾಗೂ ಕೋಚ್ ಆಗಿ ಈ ಸಂಸ್ಥೆ ಜೊತೆ ಐದು ದಶಕಗಳಿಂದ ನಂಟು ಹೊಂದಿದ್ದಾರೆ. ಅವರೊಂದಿಗೆ ಶೇಖರ್ ಮಾನೆ, ಬಸವರಾಜ ಪಟಾತ್, ಶ್ಯಾಮರಾವ್ ಪವಾರ್ ಹಾಗೂ ಮೆಹಬೂಬ್ ಹಂಚಿನಾಳ ತರಬೇತಿ ನೀಡುತ್ತಿದ್ದಾರೆ.
ಜಿಮ್ನಾಸ್ಟಿಕ್ ಎಲ್ಲ ಕ್ರೀಡೆಗಳ ತಾಯಿ ಎನಿಸಿಕೊಂಡಿದೆ. ಈ ಕ್ರೀಡೆಯಲ್ಲಿ ಪಳಗಿದವರು ಬೇರೆ ಕ್ರೀಡೆ ಆಯ್ಕೆ ಮಾಡಿಕೊಂಡರೂ ಉತ್ತಮ ಫಿಟ್‌ನೆಸ್ ಕಾಪಾಡಿಕೊಳ್ಳಬಹುದು ಎಂದು ಇದೇ ಕೇಂದ್ರದಲ್ಲಿ 15 ವರ್ಷಗಳಿಂದ ತರಬೇತಿ ಪಡೆಯುವ ಅಮೃತ ಮುದ್ರಬೆಟ್ ಹೇಳುತ್ತಾರೆ. ಅಮೃತ ಗುವಾಹಟಿಯಲ್ಲಿ 2020ರಲ್ಲಿ ನಡೆದ ಖೇಲೊ ಇಂಡಿಯಾ ರಾಷ್ಟ್ರೀಯ ಯೂತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.