ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಕ್ಕೆ ಅರ್ಧ ಕೆ.ಜಿ ತುಪ್ಪ, ಮೂರು ಲೀಟರ್‌ ಹಾಲು!

ಆರೋಗ್ಯದ ಗುಟ್ಟು ಬಿಚ್ಚಿಟ್ಟ ಹಿರಿಯ ಪೈಲ್ವಾನರು, ಅಖಾಡದಲ್ಲಿ ಹಿಂದಿನ ತಾಕತ್ತಿನ ನೆನಪುಗಳ ಅನಾವರಣ
Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಧಾರವಾಡ: ‘ಅವು 1964–65ರ ದಿನಗಳು. ಕುಸ್ತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರೆ ಊರ ತುಂಬಾ ಮೆರವಣಿಗೆ ಮಾಡುತ್ತಿದ್ದರು. ಚಿತ್ ಮಾಡಿಯೇ ಗೆಲುವು ಪಡೆಯಬೇಕೆಂಬ ಛಲ, ಶಕ್ತಿ ಇತ್ತು. ಅದಕ್ಕೆ ಕಾರಣ ದಿನವೂ ತಿನ್ನುತ್ತಿದ್ದ ಅರ್ಧ ಕೆ.ಜಿ.ತುಪ್ಪ ಮತ್ತು ಕುಡಿಯುತ್ತಿದ್ದ ಮೂರು ಲೀಟರ್‌ ಹಾಲು...’

ಹೀಗೆ ಮಾತಿಗೆ ಇಳಿದವರು ಕರ್ನಾಟಕ ಕುಸ್ತಿ ಹಬ್ಬ ಕಣ್ತುಂಬಿಕೊಳ್ಳಲು ಬಂದಿದ್ದ ಸವದತ್ತಿ ತಾಲ್ಲೂಕಿನ ಎಡೆಹಳ್ಳಿಯ ಮಾಜಿ ಪೈಲ್ವಾನ್‌ ಗದಿಗೆಪ್ಪ ನಿಗದಿ. ‘ನಮ್ಮಂತೆ ಈಗಿನ ಪೈಲ್ವಾನರು ಊಟವೇ ಮಾಡುವುದಿಲ್ಲ’ ಎಂದು ಅವರು ನಕ್ಕರು.

ಕುಸ್ತಿ ಹಬ್ಬವನ್ನು ನೋಡಲು ಧಾರವಾಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಪೈಲ್ವಾನರು ಬಂದಿದ್ದಾರೆ. ಅದರಲ್ಲಿ ಅನೇಕ ಕುಸ್ತಿಪಟುಗಳಿಗೆ ಎದುರಲ್ಲೇ ಇದ್ದರೂ ಅವರನ್ನು ಗುರುತು ಹಿಡಿಯಲು ಆಗದಷ್ಟು ವಯಸ್ಸಾಗಿದೆ. ಆದರೂ, ಅವರು ತಾವು ಕುಸ್ತಿ ಆಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡು ಖುಷಿಪಟ್ಟರು. ತಮ್ಮ ಆಹಾರ ಪದ್ಧತಿ, ಗರಡಿ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದ ರೀತಿ, ದಿನಚರಿಯನ್ನು ಪರಸ್ಪರರು ಮೆಲುಕು ಹಾಕಿದರು.

ಆ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ 75 ವರ್ಷದ ಗದಿಗೆಪ್ಪ ‘ಆಗಿನ ಕಾಲದಲ್ಲಿ ಪೈಲ್ವಾನರನ್ನು ಅತ್ಯಂತ ಪ್ರೀತಿ, ಗೌರವದಿಂದ ಕಾಣುತ್ತಿದ್ದರು. ನಮಗೆ ಸಿಕ್ಕಷ್ಟು ಬೆಲೆ ಈಗಿನ ಕುಸ್ತಿ ಪಟುಗಳಿಗೆ ಸಿಗುತ್ತಿಲ್ಲ’ ಎಂದರು. ನಿಗದಿ 40 ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಸವದತ್ತಿ ತಾಲ್ಲೂಕಿನ ಇಬ್ರಾಹಿಂ ಬಾವಾಖಾನ್‌ ಕರಿಕಟ್ಟಿ ‘ಈಗಿನ ಯುವಕರಲ್ಲಿ ಬ್ರಹ್ಮಚರ್ಯ ಪಾಲನೆ ಮಾಡುವುದು ಕಡಿಮೆಯಾಗಿದೆ. ಆದ್ದರಿಂದ ನಮ್ಮ ಕಾಲದಲ್ಲಿದ್ದ ಹಾಗೆ ಈಗ ಬಲಿಷ್ಠ ಪೈಲ್ವಾನರು ಸಿದ್ಧಗೊಳ್ಳುತ್ತಿಲ್ಲ. ಕುಸ್ತಿ ಕಲಿಯುವವರು ಬ್ರಹ್ಮಚರ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಆಗೆಲ್ಲ ಊರಿಗೊಂದು ಗರಡಿ ಮನೆ ಇರುತ್ತಿತ್ತು. ಮನೆಗೊಬ್ಬ ಕುಸ್ತಿಪಟು, ಓಣಿಗೊಬ್ಬ ಉಸ್ತಾದ್ ಇರುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪರಂಪರೆ ಕಡಿಮೆಯಾಗಿದೆ. ಈಗ ಗರಡಿ ಮನೆಗಳ ಆಸಕ್ತಿಯನ್ನು ಕ್ರಿಕೆಟ್‌ ಕಸಿದುಕೊಂಡಿದೆ’ ಎಂದು ಬೇಸರಿಸಿದರು.

1970ರ ದಶಕದಲ್ಲಿ ಪೈಲ್ವಾನರಾಗಿದ್ದ ಮಹಾದೇವಪ್ಪ ಕ್ಯಾರಿಕೊಪ್ಪ ‘ಗ್ರಾಮೀಣ ನೆಲದಿಂದ ಬೆಳೆದು ಬಂದ ಕುಸ್ತಿ ಈಗ ಯಶಸ್ಸಿನ ಉನ್ನತ ಶಿಖರದಲ್ಲಿ ಇರಬೇಕಿತ್ತು. ಆದರೆ, ಪಾತಾಳಕ್ಕೆ ಹೋಗುತ್ತಿದೆ. ಕುಸ್ತಿ ಉಳಿಯಲು ಈ ಹಬ್ಬ ವೇದಿಕೆಯಾಗಲಿ’ ಎಂದು ಆಶಿಸಿದರು.

60 ವರ್ಷದ ಹಿರಿಯ ಪೈಲ್ವಾನ ಧಾರವಾಡ ತಾಲ್ಲೂಕಿನ ಕಲ್ಲೂರಿನ ಮಡಿವಾಳಪ್ಪ ಬಸಪ್ಪ ಬುಡರಕಟ್ಟಿ ‘ಹಬ್ಬದ ನೆಪದಲ್ಲಿ ನಮ್ಮನ್ನೂ ನೆನಪಿಸಿಕೊಂಡಿದ್ದಕ್ಕೆ ಅತೀವ ಸಂತೋಷವಾಗಿದೆ. ಈಗಿನ ಮಕ್ಕಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಇವೆ. ಇವುಗಳನ್ನು ಬಳಸಿಕೊಂಡು ಕುಸ್ತಿಗೆ ಹಿಂದೆ ಇದ್ದ ಘನತೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ನಮಗೂ ನೋಡಲು ಬಿಡಿ

ಕೆ.ಸಿ.ಡಿ. ಕಾಲೇಜು ಮೈದಾನದಲ್ಲಿ ಮೂರು ಅಖಾಡಗಳನ್ನು ನಿರ್ಮಿಸಲಾಗಿದೆ. ಮೂರೂ ಅಖಾಡಗಳ ಮುಂದೆ ಹಿರಿಯ ಪೈಲ್ವಾನರಿಗೆ ಕುಳಿತು ಪಂದ್ಯಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಅವರ ಮುಂದೆ ಬಂದು ನಿಂತು ಪಂದ್ಯ ನೋಡುವವರನ್ನು ಗದರಿಸಿ ‘ನಾವು ಕುಸ್ತಿಗಾಗಿ ದುಡಿದವರು... ನೋಡಲು ಬಿಡಿ’ ಎನ್ನುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ಬಾರದ ನಾಡಾ ತಂಡ

ಕುಸ್ತಿ ಹಬ್ಬದಲ್ಲಿ ಪಾಲ್ಗೊಂಡಿರುವ ಪೈಲ್ವಾನರನ್ನು ಪರೀಕ್ಷೆಗೆ ಒಳಪಡಿಸಲು ಉದ್ದೀಪನಾ ಮದ್ದು ಸೇವನೆ ತಡೆ ಘಟಕ (ನಾಡಾ) ತಂಡ ಬರುತ್ತದೆ ಎಂದು ಸಂಘಟಕರು ಹೇಳಿದ್ದರು. ಆದರೆ, ತಂಡದ ಯಾವ ಸದಸ್ಯರು ಕೂಡ ಇಲ್ಲಿಗೆ ಬಂದಿಲ್ಲ. ಆದರೆ, ಭಾರತ ಕುಸ್ತಿ ಫೆಡರೇಷನ್‌ನ ಸದಸ್ಯರು ಮಾತ್ರ ಬಂದಿದ್ದಾರೆ.

ಈ ಬಗ್ಗೆ ಸಂಘಟಕರನ್ನು ಪ್ರಶ್ನಿಸಿದಾಗ ‘ ನಾಡಾ ತಂಡದ ಸದಸ್ಯರು ಸೋಮವಾರ ಬರುವ ನಿರೀಕ್ಷೆಯಿದೆ. ಅನುಮಾನ ಬಂದ ಪೈಲ್ವಾನರನ್ನು ಮಾತ್ರ ನಾಡಾ ತಂಡದವರು ಪರೀಕ್ಷೆಗೆ ಒಳಪಡಿಸಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಯೂಟ್ಯೂಬ್‌ನಲ್ಲಿ ನೇರ ಪ್ರಸಾರ

ಕುಸ್ತಿ ಪಂದ್ಯಗಳನ್ನು ಮನೆಯಲ್ಲಿದ್ದುಕೊಂಡೇ ಯೂ ಟ್ಯೂಬ್‌ ಮೂಲಕ ನೇರವಾಗಿ ವೀಕ್ಷಿಸಲು ಸಂಘಟಕರು ವ್ಯವಸ್ಥೆ ಮಾಡಿದ್ದಾರೆ. ಆಸಕ್ತರು ‘ಧಾರವಾಡ ದಂಗಲ್‌’(Dharwad Dangal) ಮೂಲಕ ಪಂದ್ಯಗಳನ್ನು ವೀಕ್ಷಿಸಬಹುದು.

ನೀಗಿದ ಶೌಚಾಲಯಗಳ ಕೊರತೆ

ಪಂದ್ಯಗಳನ್ನು ವೀಕ್ಷಿಸಲು ಬಂದಿದ್ದ ಕುಸ್ತಿ ಪ್ರೇಮಿಗಳಿಗೆ ಮೊದಲ ದಿನ ಶೌಚಾಲಯಗಳ ಕೊರತೆ ಕಾಡಿತ್ತು. ಇದನ್ನು ಪ್ರಜಾವಾಣಿ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಘಟಕರು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT