ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಅವರದ್ದು ದೇಶದ್ರೋಹಿ ಹೇಳಿಕೆ: ಸಚಿವ ಪ್ರಹ್ಲಾದ ಜೋಶಿ

Last Updated 21 ಜನವರಿ 2020, 13:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪೊಲೀಸರನ್ನು ಅನುಮಾನಿಸಿ ನೀಡಿರುವ ಹೇಳಿಕೆಗಳು ದೇಶದ್ರೋಹದಿಂದ ಕೂಡಿದೆ. ಹಾಗಾಗಿ, ಅವರು ಕ್ಷಮೆ ಯಾಚಿಸಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಹೇಳಿಕೆ ನಾಲಾಯಕ್‌ತನದಿಂದ ಕೂಡಿದೆ. ದೇಶದ ಕೆಲ ವಿರೋಧ ಪಕ್ಷಗಳ ಹಾಗೂ ಪಾಕಿಸ್ತಾನದ ಹೇಳಿಕೆಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ಕುಮಾರಸ್ವಾಮಿ ಹೇಳಿಕೆಯೂ ಅದೇ ರೀತಿ ಇದೆ. ಹಾಗಾಗಿ, ಅವರು ಭಾರತದ ಪರ ಇದ್ದಾರೊ ಅಥವಾ ಪಾಕಿಸ್ತಾನದ ಪರ ಇದ್ದಾರೊ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದರು.

‘ನಮ್ಮ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೆ ಪಾಕಿಸ್ತಾನ ಕಾರಣ ಎಂದು ನಾವು ದೂರುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಭಾರತವು ವಿಶ್ವಸಂಸ್ಥೆ ಸೇರಿದಂತೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಯಶಸ್ವಿಯಾಗಿದೆ. ಹಾಗಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆ ನೀಡಬಾರದು. ಒಂದು ವೇಳೆ, ಪೊಲೀಸರೇ ಬಾಂಬ್ ಇಟ್ಟಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ಗೊತ್ತಿದ್ದರೆ, ಪ್ರಕರಣ ದಾಖಲಿಸಲಿ’ ಎಂದು ಸವಾಲು ಹಾಕಿದರು.

ಎನ್‌ಎಐಗೆ ವಹಿಸಿ:

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಕೃತ್ಯದ ಹಿಂದೆ, ಅಲ್ಲಿ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದವರ ಪ್ರೇರಣೆ ಇರುವಂತಿದೆ. ಹಾಗಾಗಿ, ರಾಜ್ಯದ ಎಲ್ಲಾ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಅಗತ್ಯವಿದ್ದರೆ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT