ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿ ಉದ್ಘಾಟನೆಗೆ ಇದೇ 12ರಂದು ಜಿಲ್ಲೆ ಭೇಟಿ ನೀಡುತ್ತಿದ್ದು, ಭದ್ರತೆ ಕಾರಣದಿಂದ ನಗರದ ಈದ್ಗಾ ಮೈದಾನದಲ್ಲಿ ಕಾಮಣ್ಣ–ರತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ’ ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹೋಳಿ ಹಬ್ಬದ ಅಂಗವಾಗಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದವರು ಕಾಮಣ್ಣ–ರತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಮಾರ್ಚ್ 7ರಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಪ್ರಧಾನಿ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಬೇಕಿರುವುದರಿಂದ ಮತ್ತು ತಡವಾಗಿ ಅರ್ಜಿ ಸಲ್ಲಿಸಿರುವುದರಿಂದ ಅನುಮತಿ ನಿರಾಕರಿಸಲಾಗಿದೆ’ ಎಂದರು.
‘ಮಹಾಮಂಡಳದ ಸದಸ್ಯರೊಂದಿಗೆ ಸಭೆ ನಡೆಸಿ, ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಯಾವುದೇ ರಾಜಕೀಯ ನಾಯಕರ ಒತ್ತಡದಿಂದ ಅನುಮತಿ ನಿರಾಕರಿಸಿಲ್ಲ’ ಎಂದು ತಿಳಿಸಿದರು.
‘ಈದ್ಗಾ ಮೈದಾನ ಪಾಲಿಕೆಗೆ ಸೇರಿದ್ದು, ಅಲ್ಲಿ ಯಾವುದೇ ಆಚರಣೆಗೆ ಅನುಮತಿ ನೀಡಲು ಕಾನೂನಿನ ಅಡಚಣೆ ಇಲ್ಲ. ಈ ಹಿಂದೆ ಗಣೇಶ ಚತುರ್ಥಿ, ಟಿಪ್ಪು ಜಯಂತಿ ಆಚರಣೆಗೆ ಸಾಕಷ್ಟು ಮುಂಚಿತವಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹಿರಿಯ ಅಧಿಕಾರಿಗಳು, ಪೊಲೀಸ್ ಕಮಿಷನರ್ ಜತೆ ಚರ್ಚೆ ನಡೆಸಿ ಸಾಧಕ–ಬಾಧಕಗಳನ್ನು ನೋಡಿಕೊಂಡು ಅನುಮತಿ ನೀಡಲಾಗಿತ್ತು. ಈ ಬಾರಿ ಸಿದ್ಧತೆಗೆ ಸಮಯ ಕಡಿಮೆ ಇದ್ದುದರಿಂದ ಮಹಾಮಂಡಳದ ಅರ್ಜಿಯನ್ನು ಪರಿಗಣಿಸಿಲ್ಲ’ ಎಂದು ಹೇಳಿದರು.
ಹು–ಧಾ ಪೊಲೀಸ್ ಕಮಿಷನರ್ ರಮನ್ ಗುಪ್ತಾ ಮಾತನಾಡಿ, ‘ಮಹಾಮಂಡಳದವರು ಮೊದಲೇ ಅರ್ಜಿ ಸಲ್ಲಿಸಿದ್ದರೆ ಭದ್ರತೆಗಾಗಿ ಎಷ್ಟು ಜನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದನ್ನು ನೋಡಿಕೊಂಡು ಅನುಮತಿ ನೀಡಬಹುದಿತ್ತು. ಸಿದ್ಧತೆಗೆ ಕನಿಷ್ಠ ಹತ್ತು ದಿನಗಳು ಬೇಕು. ಅವಳಿ ನಗರದಲ್ಲಿ ಈಗಾಗಲೇ 472 ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಎಲ್ಲ ಕಡೆ ಭದ್ರತೆ ಕಲ್ಪಿಸಲಾಗಿದೆ’ ಎಂದರು.
ಗುಪ್ತಚರ ಮಾಹಿತಿ ಆಧರಿಸಿ, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಮಾರ್ಚ್ 7ರ ನಂತರ ಯಾವುದೇ ಕಾಮಣ್ಣನ ಮೂರ್ತಿಗಳು ಪ್ರತಿಷ್ಠಾಪನೆ ಆಗಿಲ್ಲ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಸಭೆಯ ಬಳಿಕ ಮಾತನಾಡಿದ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ್, ‘ಒಂದು ದಿನವಾದರೂ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ಅನುಮತಿ ನೀಡಲು ಭದ್ರತೆಯ ಕಾರಣ ಹೇಳಿದ್ದಾರೆ. ಇದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ವೈಫಲ್ಯವನ್ನು ತೋರಿಸುತ್ತಿದೆ’ ಎಂದು ಹೇಳಿದರು.
ಆಕ್ಷೇಪಣೆ ಸಲ್ಲಿಕೆ ಶೀಘ್ರ
ಈದ್ಗಾ ಮೈದಾನಕ್ಕೆ ಕಿತ್ತೂರು ರಾಣಿ ಚನ್ನಮ್ಮ ಮೈದಾನ ಎಂದು ನಾಮಕರಣ ಮಾಡುವ ಕುರಿತು ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಅವುಗಳನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅಲ್ಲಿ ತೆಗೆದುಕೊಳ್ಳುವ ತೀರ್ಮಾನವನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸರ್ಕಾರ ಅನುಮತಿ ನೀಡಿದ ನಂತರ ಹೆಸರು ಬದಲಾಣೆ ಮಾಡಲಾಗುವುದು. ಈ ಬಂದಿರುವ ಆಕ್ಷೇಪಣೆಗಳನ್ನು ಶೀಘ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.