ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆ ಶುಲ್ಕದಲ್ಲಿ ಹಗಲು ದರೋಡೆ

ಹುಬ್ಬಳ್ಳಿಯ ಕೊಪ್ಪಿಕರ್‌ ರೋಡ್‌ನಲ್ಲಿ ನಿಗದಿಗಿಂತ ಮೂರು ಪಟ್ಟು ಅಧಿಕ ಶುಲ್ಕ ವಸೂಲಿ
Last Updated 6 ಫೆಬ್ರುವರಿ 2020, 15:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಪ್ರಮುಖ ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ (ವೆಹಿಕಲ್‌ ಪಾರ್ಕಿಂಗ್‌) ಮಹಾನಗರ ಪಾಲಿಕೆ ನಿಗದಿಪಡಿಸಿದ ದರಕ್ಕಿಂತ ಮೂರು ಪಟ್ಟು ಅಧಿಕ ಶುಲ್ಕವನ್ನು ವಾಹನ ಮಾಲೀಕರಿಂದ ಗುತ್ತಿಗೆದಾರರು ವಸೂಲಿ ಮಾಡತೊಡಗಿದ್ದಾರೆ.

ಟೆಂಡರ್‌ ನಿಯಮಾವಳಿ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ಪಾರ್ಕಿಂಗ್‌ ಶುಲ್ಕ ಕಾರು (ಫೋರ್‌ ವೀಲರ್‌)ಗಳಿಗೆ ₹ 10 ಮತ್ತು ದ್ವಿಚಕ್ರವಾಹನ (ಬೈಕ್‌, ಸ್ಕೂಟಿ)ಗಳಿಗೆ ₹5 ನಿಗದಿಪಡಿಸಲಾಗಿದೆ. ಆದರೆ, ಕೊಪ್ಪಿಕರ್‌ ರಸ್ತೆಯಲ್ಲಿ ಕಾರುಗಳಿಗೆ ₹30 ಮತ್ತು ಬೈಕುಗಳಿಗೆ ₹10 ಶುಲ್ಕ ಸಂಗ್ರಹಿಸಲಾಗುತ್ತಿದೆ.

ಗುತ್ತಿಗೆದಾರರು ವಾಹನ ಮಾಲೀಕರಿಗೆ ₹10ರ ರಸೀದಿಯನ್ನೇ ನೀಡಿ, ಅದರ ಹಿಂದೆ ₹ 30 ಎಂದು ಬರೆದು ಕೊಡುತ್ತಿದ್ದಾರೆ. ಹೀಗೇಕೆ ಎಂದು ವಾಹನ ಮಾಲೀಕರು ಪ್ರಶ್ನಿಸಿದರೆ, ಶುಲ್ಕ ಹೆಚ್ಚಳವಾಗಿದೆ. ಸದ್ಯ ಹೊಸ ರಸೀದಿ ಇನ್ನೂ ಬಂದಿಲ್ಲ, ಹಾಗಾಗಿ ಹಳೇ ರಸೀದಿಯನ್ನು ನೀಡಲಾಗುತ್ತಿದೆ ಎಂದು ಪಾಲಿಕೆ ಗುತ್ತಿಗೆದಾರರ ಕಡೆಯವರು ಸಬೂಬು ನೀಡುತ್ತಿದ್ದಾರೆ.ಮೂರು ಪಟ್ಟು ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ವಾಹನ ಮಾಲೀಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಹಗಲು ದರೋಡೆ:

‘ಪ್ರತಿ ಕಾರಿನಿಂದ ₹20 ಮತ್ತು ದ್ವಿಚಕ್ರ ವಾಹನಗಳಿಂದ ₹ 5 ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುವ ಮೂಲಕ ದಿನವೊಂದಕ್ಕೆ ಸಾವಿರಾರು ರೂಪಾಯಿ ಹಣವನ್ನು ಲಪಟಾಯಿಸಲಾಗುತ್ತಿದೆ. ಸಾರ್ವಜನಿಕರು ಕಟ್ಟುವ ಶುಲ್ಕ ಪಾಲಿಕೆ ಬದಲು ಗುತ್ತಿಗೆದಾರನ ಪಾಲಾಗುತ್ತಿದೆ. ತಕ್ಷಣ ಪಾಲಿಕೆ ಅಧಿಕಾರಿಗಳು ಸೂಕ್ತಕ್ರಮಕೈಗೊಳ್ಳಬೇಕು’ ಎಂದು ಕೊಪ್ಪಿಕರ್‌ ರಸ್ತೆಯ ಜವಳಿ ವ್ಯಾಪಾರಿ ಸಂಗಮೇಶ ಶೆಟ್ಟರ್‌ ಆಗ್ರಹಿಸಿದರು.

‘ಅಧಿಕ ಪಾರ್ಕಿಂಗ್‌ ಶುಲ್ಕ ಸಂಗ್ರಹದಿಂದ ಬರುವ ಹಣವನ್ನು ಪಾಲಿಕೆ ಅಧಿಕಾರಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಮತ್ತು ಗುತ್ತಿಗೆದಾರರು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ, ಗುತ್ತಿಗೆದಾರರ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಗುತ್ತಿಗೆದಾರರು ಪಾರ್ಕಿಂಗ್‌ ಶುಲ್ಕ ಅಧಿಕ ವಸೂಲಿ ಮಾಡುತ್ತಿರುವುದರಿಂದ ವಾಹನ ನಿಲುಗಡೆಗೆ ಜನರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವ್ಯಾಪಾರ, ವಹಿವಾಟಿಗೂ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

₹ 10, ₹ 5 ಮಾತ್ರ:

‘ದುರ್ಗದಬೈಲ್‌ ಮತ್ತು ಕೊಪ್ಪಿಕರ್‌ ರಸ್ತೆಗಳಲ್ಲಿ ವೆಹಿಕಲ್‌ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಕಾರುಗಳು ₹ 10, ಬೈಕ್‌, ಸ್ಕೂಟಿಗಳಿಗೆ ₹ 5 ಶುಲ್ಕು ನಿಗದಿ‍ಪಡಿಸಲಾಗಿದೆ’ ಎಂದು ಮಹಾನಗರ ಪಾಲಿಕೆ ಕಂದಾಯ ವಿಭಾಗದ ಉಸ್ತುವಾರಿ ಡಿಸಿ ಪಿ.ಡಿ.ಗಾಳೆಮ್ಮನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರ್ಗದಬೈಲ್‌ ವ್ಯಾಪ್ತಿಯಲ್ಲಿ ಆಸಿಫ್‌ ನದಾಫ್‌ ಎಂಬುವವರು ₹7.91 ಲಕ್ಷಕ್ಕೆ ಹಾಗೂ ಕೊಪ್ಪಿಕರ್‌ ರಸ್ತೆಯಲ್ಲಿ ಅರುಣ್‌ ಶಿರ್ಕೆ ಎಂಬುವವರು ₹8.20 ಲಕ್ಷಕ್ಕೆ ಪಾರ್ಕಿಂಗ್‌ ಶುಲ್ಕ ಸಂಗ್ರಹದ ಟೆಂಡರ್‌ ಒಂದು ವರ್ಷಕ್ಕೆ ಪಡೆದುಕೊಂಡಿದ್ದಾರೆ’ ಎಂದರು.

ಮರು ಟೆಂಡರ್‌:

‘ಹುಬ್ಬಳ್ಳಿಯ ಆರು ಮತ್ತು ಧಾರವಾಡದ ಎರಡು ಸೇರಿದಂತೆ ಇನ್ನೂ ಎಂಟು ಪ್ರದೇಶಗಳಲ್ಲಿ ವಾಹನ ನಿಲುಗಡೆ ಶುಲ್ಕ ಸಂಗ್ರಹ ಟೆಂಡರ್‌ ಪ್ರಕ್ರಿಯೆ ಬಾಕಿ ಇದೆ. ಈ ಹಿಂದೆ ಕರೆದ ಟೆಂಡರ್‌ನಲ್ಲಿ ಭಾಗವಹಿಸಿದ್ದವರು ನೀಡಿದ್ದ ದಾಖಲೆ ಪತ್ರಗಳು ಸರಿಯಿಲ್ಲದ ಕಾರಣ ರದ್ದುಗೊಂಡಿದೆ. ಶೀಘ್ರದಲ್ಲೇ ಮರು ಟೆಂಡರ್‌ ಕರೆಯಲಾಗುವುದು’ ಎಂದು ಗಾಳೆಮ್ಮನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT