ಮಂಗಳವಾರ, ಜನವರಿ 21, 2020
29 °C

ತರಾನಾ ಕೇ ಬಾದ್‌ ಶಹಾ ಪಂಡಿತ್ ರತನ್ ಮೋಹನ್ ಶರ್ಮಾ

ಡಾ. ಪ್ರಕಾಶ ಭಟ್ Updated:

ಅಕ್ಷರ ಗಾತ್ರ : | |

Prajavani

ಹಿಂದೂಸ್ತಾನಿ ಸಂಗೀತದ ದಂತಕತೆ ಎನಿಸಿರುವ ಸಂಗೀತ ಮಾತಾಂಡ ಪಂಡಿತ್ ಜಸ್ರಾಜ್ ಮೇವಾಟಿ ಘರಾಣೆಯ ಪ್ರಾತಿನಿಧಿಕ ಸಂಗೀತಗಾರರು. ಅವರ ಸೋದರಳಿಯ ಹಾಗೂ ಮುಖ್ಯ ಶಿಷ್ಯ ಪಂ. ರತನ್ ಮೋಹನ್ ಶರ್ಮಾ ಸದ್ಯ ಹಿಂದೂಸ್ತಾನಿ ಸಂಗೀತದ ಮೇವಾತಿ ಘರಾಣೆಯ ದೀಪಧಾರಕರೆಂದೇ ಪ್ರಸಿದ್ಧರು. ಹಿಂದೂಸ್ತಾನಿ ಸಂಗೀತದಲ್ಲಿ ಅಸಾಧಾರಣ ಆಳ ಹಾಗೂ ವಿಶಾಲವಾದ ತಜ್ಞತೆ ಅವರದ್ದು. ಖ್ಯಾಲ್ ಹಾಡುಗಾರಿಕೆಯ ಪ್ರಬುದ್ಧ ಹಾಡುಗಾರರಾದ ಪಂಡಿತ್ ರತನ್ ಮೊಹನ್ ತರಾನಾ, ದ್ರುಪದ್, ಹವೇಲಿ ಸಂಗೀತ ಟಪ್ಪ್ಪಾ ಹಾಗೂ ಲಘು ಸಂಗೀತದ ಭಜನ್ ಕೀರ್ತನ್ ಎಲ್ಲವನ್ನೂ ಮನಮೋಹಕವಾಗಿ ಹಾಡಬಲ್ಲವರು. ರಾಜಸ್ಥಾನಿ ಜನಪದವನ್ನು ಅದರ ಶ್ರೀಮಂತಿಕೆಯೊಂದಿಗೆ ಪ್ರಸ್ತುತಪಡಿಸಬಲ್ಲರು.

ರತನ್ ಮೋಹನ್ ಸಂಗೀತ ಸಂಯೋಜಕರಾಗಿಯೂ ಪ್ರಸಿದ್ಧರು, ಉನ್ನತ ಗೌರವ ಗಳಿಸಿದವರು. ಟೆಲಿವಿಷನ್ ಧಾರಾವಾಹಿಗಳಿಗೆ, ಖಾಸಗಿ ಆಲ್ಬಂಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಭಾರತ, ಅಮೆರಿಕ, ಯುರೋಪ್, ದುಬೈ ಹಾಗೂ ಜಗತ್ತಿನ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಭಾಗವಹಿಸಿದ ಕೆಲವು ಪ್ರಸಿದ್ಧ ಉತ್ಸವಗಳು ಕಾರ್ಯಕ್ರಮಗಳು ಪುಣೆಯ ಸವಾಯಿ ಗಂಧರ್ವ ಭೀಮಸೇನ ಸಂಗೀತೋತ್ಸವ, ಅಹಮದಾಬಾದಿನ ಸಪ್ತಕ ಸಂಗೀತ ಸಮಾರೋಹ, ಗ್ವಾಲಿಯರ್ನ ತಾನ್ಸೇನ್ ಸಂಗೀತ ಸಮಾರೋಹ, ವೃಂದಾವನದ ಹರಿದಾಸ ಸಂಗೀತ ಸಮಾರೋಹ, ಜಲಂಧರದ ಹರವಲ್ಲಭ್ ಸಂಗೀತ ಸಮಾರೋಹ, ದಿಲ್ಲಿಯ ವಿಷ್ಣು ದಿಗಂಬರ ಜಯಂತಿ ಸಮಾರೋಹ, ಹೈದರಾಬಾದಿನ ಪಂಡಿತ್ ಮೋತಿರಾಮ್ ಪಂಡಿತ್ ಮಣಿರಾಮ್ ಸಂಗೀತ ಸಮಾರೋಹ ಇತ್ಯಾದಿ. ಅವರ ಆಲ್ಬಂಗಳು ಅಪರಿಮಿತ ಯಶಸ್ಸನೂ ಪ್ರಸಿದ್ಧಿಯನ್ನೂ ಗಳಿಸಿವೆ. ವಿಶೇಷವಾಗಿ ಆಧ್ಯಾತ್ಮಿಕ ಸಂಗೀತ, ಶಾಸ್ತ್ರೀಯ ಸಂಗೀತ ಮತ್ತು ಮಂತ್ರಗಳ ಸಂಗೀತ ಪ್ರಸ್ತುತಿ ಅವರ ವಿಶೇಷ ಸಾಧನೆ.

ಧರೋಹರ್, ಜಸರಂಗಿ, ಘರಾನಾ, ರಾಗಾ ರಿಫ್ಲೆಕ್ಷನ್ಸ್, ಗಾಯತ್ರಿ, ಹವೇಲಿ ಸಂಗೀತ ಅವರ ಬಹು ಜನಪ್ರಿಯ ಆಲ್ಬಂಗಳು . ಅವರ ಆಲ್ಬಂಗಳು ಟೈಮ್ಸ್ ಮ್ಯೂಸಿಕ್ ಆಡಿಯೊ ಕ್ಯಾಸೆಟ್ ಹಾಗೂ ಸಿಡಿ ರಿಲೀಸ್ ಶ್ರೇಣಿಗಳಲ್ಲಿ ಎಲ್ಲಕ್ಕಿಂತ ಮೇಲು ಸ್ಥಾನ ಪಡೆದಿವೆ. ರತನ್ ಮೊಹನ್ ಆಕಾಶವಾಣಿಯ ಎ ಗ್ರೇಡ್ ಕಲಾವಿದರು. ಶಂಕರರಾವ್ ವ್ಯಾಸ ಪ್ರಶಸ್ತಿ, ಸಂಗೀತ ಮಾತಾಂಡ ಪಂಡಿತ್ ಜಸ್ರಾಜ್ ಆವರ್ತ ಟ್ರೋಫಿ, ಮೇವಾತಿ ಘರಾನ ಗೌರವ ಪುರಸ್ಕಾರ, ಆಚಾರ್ಯ ವರಿಷ್ಠ ಪುರಸ್ಕಾರ, ಸುರ್ ರತ್ನ ಪ್ರಶಸ್ತಿ, ಸುರಮಣಿ ಪ್ರಶಸ್ತಿ, ಐಡಬ್ಲ್ಯುಎಎಫ್‌ ಘರಾನಾ ಪ್ರಶಸ್ತಿಗಳು ರತನ್ ಮೋಹನ್ ಶರ್ಮಾ ಅವರಿಗೆ ಲಭಿಸಿವೆ.

ಹೈದರಾಬಾದಿನ ಸಂಗೀತಪ್ರೇಮಿಗಳು ಇವರ ತರಾನಾದ ಶೈಲಿಯ ಮೇಲಿನ ಅಸಾಧಾರಣ ಹಿಡಿತಕ್ಕಾಗಿ ತರಾನಾ ಕೇ ಬಾದ್‌ಶಹಾ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಝೀ ಟಿವಿ ಐಡಿಯಾ ಜಲಸಾ ಕಾರ್ಯಕ್ರಮದಲ್ಲಿ ಹಾಗೂ ದೂರದರ್ಶನದಲ್ಲಿ ಹಲವು ಬಾರಿ ಇವರ ಕಾರ್ಯಕ್ರಮ ಬಿತ್ತರವಾಗಿದೆ. ಧಾರವಾಡದ ಡಿಸಿ ಕಾಂಪೌಂಡ್‌ನಲ್ಲಿರುವ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ರತನ್ ಮೋಹನ್ ಶರ್ಮಾ ಅವರು ಡಿಸೆಂಬರ್ 22ರ ಭಾನುವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ನೀಡುತ್ತಿದ್ದಾರೆ. ತಬ್ಲಾದಲ್ಲಿ ಡಾ ರವಿಕಿರಣ್ ನಾಕೋಡ್ ಹಾಗೂ ಹಾರ್‍ಮೋನಿಯಂನಲ್ಲಿ ಸಾರಂಗ ಕುಲಕರ್ಣಿ ಸಾಥ್ ನೀಡಲಿದ್ದಾರೆ. ಸರಸ್ವತಿ ಸಂಗೀತ ವಿದ್ಯಾಲಯ ಕಾರ್ಯಕ್ರಮ ಆಯೋಜಿಸಿದೆ. ಪ್ರವೇಶ ಉಚಿತ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು