ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣ ಕಾರ್ಯಾರಂಭ

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರಿಂದ ಹಸಿರು ನಿಶಾನೆ
Last Updated 1 ಮಾರ್ಚ್ 2020, 14:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಚರಿಸುವ ಲಾಂಗ್‌ರೂಟ್‌ ಬಸ್‌ಗಳ ಕಾರ್ಯಾಚರಣೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಚಾಲನೆ ನೀಡಿದರು.

‘ಹುಬ್ಬಳ್ಳಿ ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವುದರಿಂದ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಕಿತ್ತೂರು ಚನ್ನಮ್ಮ ಸರ್ಕಲ್‌ ಮತ್ತು ಹಳೇ ಬಸ್‌ ನಿಲ್ದಾಣದ ಮೇಲಿನ ಒತ್ತಡ ತಗ್ಗಿಸುವ ಉದ್ದೇಶದಿಂದ ಹೊಸೂರು ಟರ್ಮಿನಲ್‌ ಮತ್ತು ಗೋಕುಲ ಹೊಸ ಬಸ್‌ ನಿಲ್ದಾಣಕ್ಕೆ ಹಂತಹಂತವಾಗಿ ಬಸ್‌ಗಳ ಕಾರ್ಯಾಚರಣೆಯನ್ನು ಸ್ಥಳಾಂತರಿಸಲಾಗುತ್ತಿದ್ದು, ಪ್ರಯಾಣಿಕರು ಸಹಕರಿಸಬೇಕು’ ಎಂದು ಶೆಟ್ಟರ್‌ ಮನವಿ ಮಾಡಿದರು.

ಯಾವಾವ ಬಸ್‌ ಸ್ಥಳಾಂತರ:

ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಮಂತ್ರಾಲಯ, ಬಾದಾಮಿ, ಇಳಕಲ್, ರೋಣ, ಬಾಗಲಕೋಟೆ, ವಿಜಯಪುರ, ತುಳಜಾಪುರ, ಔರಂಗಾಬಾದ್‌, ಅಥಣಿ, ಜಮಖಂಡಿ ಮತ್ತು ಸೊಲ್ಲಾಪೂರ ಮಾರ್ಗದ ಒಟ್ಟು 309 ಬಸ್‌ಗಳು ಮೊದಲ ಹಂತವಾಗಿ ಹೊಸೂರು ಟರ್ಮಿನಲ್‌ನಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌ ತಿಳಿಸಿದರು.

ಹೊಸೂರು ವಾಣಿವಿಲಾಸ ಸರ್ಕಲ್‌ನಿಂದ ಉಣಕಲ್‌ ಸಂಪರ್ಕಿಸುವ ಸಿಆರ್‌ಎಫ್‌ ರಸ್ತೆ ಕಾಮಗಾರಿ ಪೂರ್ಣವಾದ ಬಳಿಕ ಹಳೇ ಬಸ್‌ ನಿಲ್ದಾಣ ಮತ್ತು ಗೋಕುಲ ಹೊಸ ಬಸ್‌ ನಿಲ್ದಾಣದಿಂದ ಕಾರ್ಯಾಚರಿಸುತ್ತಿರುವ ಲಾಂಗ್‌ ರೂಟ್‌ ಬಸ್‌ಗಳನ್ನು ಸಹ ಹೊಸೂರು ಟರ್ಮಿನಲ್‌ಗೆ ಸ್ಥಳಾಂತರಿಸುವ ಉದ್ದೇಶವಿದೆ ಎಂದು ಹೇಳಿದರು.

ಬೆಂಗಳೂರು ಬಸ್‌:

ಬೆಂಗಳೂರಿಗೆ ತೆರಳುವ ಬಸ್‌ಗಳು ಸದ್ಯ ಹಳೇ ಬಸ್‌ ನಿಲ್ದಾಣದಿಂದಲೇ ಕಾರ್ಯಾಚರಣೆ ನಡೆಸಲಿವೆ. ಹೊಸೂರು ವಾಣಿವಿಲಾಸ ಸರ್ಕಲ್‌ನಿಂದ ಉಣಕಲ್‌ ಸಂಪರ್ಕಿಸುವ ಸಿಆರ್‌ಎಫ್‌ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಸೂರು ಟರ್ಮಿನಲ್‌ನಿಂದ ಬೆಂಗಳೂರು ಬಸ್‌ಗಳೂ ಕಾರ್ಯಾಚರಣೆ ನಡೆಸಲಿವೆ ಎಂದು ಚೋಳನ್‌ ತಿಳಿಸಿದರು.

ಶೀಘ್ರ ಟೆಂಡರ್‌:

ಕಿತ್ತೂರು ಚನ್ನಮ್ಮ ವೃತ್ತದ ಸಮೀಪ ಇರುವ ಹಳೇ ಬಸ್‌ ನಿಲ್ದಾಣವನ್ನು ಕೆಡವಿ ₹ 70 ಕೋಟಿ ಅನುದಾನದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಿಸಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು. ಬಳಿಕ ಈ ಬಸ್‌ ನಿಲ್ದಾಣವನ್ನು ನಗರ ಸಾರಿಗೆ ಬಸ್‌ಗಳು ಹಾಗೂ ಗ್ರಾಮೀಣ ಸಾರಿಗೆ ಬಸ್‌ಗಳ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಮನೆಗಳ ಸ್ಥಳಾಂತರಕ್ಕೆ ಕ್ರಮ:

ಹೊಸೂರು ವಾಣಿ ವಿಲಾಸ ವೃತ್ತದ ಸಮೀಪ ಇರುವ 240 ಮನೆಗಳ ಸ್ಥಳಾಂತಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಸ್ಥಳಾಂತರಗೊಳ್ಳುವ ಕುಟುಂಬಗಳಿಗಾಗಿ ₹ 24 ಕೋಟಿ ಮೊತ್ತದಲ್ಲಿ ಅಲ್ಲಿಯೇ ಸಮೀಪ ಇರುವ ಕೆಐಡಿಬಿ ಜಾಗದಲ್ಲಿ ವಸತಿ ಸಮುಚ್ಛಯವೊಂದನ್ನು ನಿರ್ಮಿಸಿಕೊಡಲಾಗುವುದು. ಇದಕ್ಕೆ ಅಲ್ಲಿಯ ಜನರು ಒಪ್ಪಿದ್ದಾರೆ ಎಂದು ಹೇಳಿದರು.

ಇಂದಿನಿಂದ ಕಾರ್ಯಾಚರಣೆ:

ಆರಂಭದಲ್ಲಿ ಮಾರ್ಚ್‌ 1ರಿಂದಲೇ ಹೊಸೂರು ಟರ್ಮಿನಲ್‌ನಿಂದ ಬಸ್‌ಗಳು ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಬಸ್‌ಗಳ ಕಾರ್ಯಾಚರಣೆಗೆ ಸಚಿವರು ಚಾಲನೆ ನೀಡುವ ಕಾರ್ಯಕ್ರಮ ಇದ್ದ ಕಾರಣ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಸೋಮವಾರದಿಂದ(ಮಾ2) ಪೂರ್ಣ ಪ್ರಮಾಣದಲ್ಲಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ, ಅಧಿಕಾರಿಗಳಾದ ಅಶೋಕ ಪಾಟೀಲ, ಕೆ.ಎಲ್‌.ಗುಡೆನ್ನವರ, ಬಸವರಾಜ ಕೇರಿ ಮತ್ತಿತರರು ಇದ್ದರು.

‘ಚಿಗರಿ’ ಪ್ರಯಾಣಿಕರಿಗೆ ಜಿಎಸ್‌ಟಿ ಹೊರೆ!

ಹುಬ್ಬಳ್ಳಿ–ಧಾರವಾಡ ಅವಳಿ ನಗರದ ನಡುವೆ ಸಂಚರಿಸುವ ಪ್ರಯಾಣಿಕರು ಬಸ್‌ ಪ್ರಯಾಣದ ದರ ಏರಿಕೆಯ ಜೊತೆಗೆ ಜಿಎಸ್‌ಟಿ ಭಾರ ಹೊರಬೇಕಾಗಿದೆ.

‘ಚಿಗರಿ’ ಬಸ್‌ಗಳು ಹವಾನಿಯಂತ್ರಿತ ಐಷಾರಾಮಿ ವ್ಯವಸ್ಥೆ ಒಳಗೊಂಡಿರುವುದರಿಂದ ಶೇ 5ರಷ್ಟು ಜಿಎಸ್‌ಟಿಯನ್ನು ತೆರೆಬೇಕಾಗಿದೆ. ಪರಿಣಾಮ ಬಸ್‌ ಪ್ರಯಾಣ ಸಾಮಾನ್ಯ ಪ್ರಯಾಣ ದರಕ್ಕಿಂತ ಅಧಿಕವಾಗಿದೆ.

‘ಜಿಎಸ್‌ಟಿ ಪರಿಣಾಮ ಚಿಗರಿ ಬಸ್‌ಗಳ ಕನಿಷ್ಠ ಪ್ರಯಾಣ ದರ ₹5 ರಿಂದ ₹ 6ಕ್ಕೆ ಹೆಚ್ಚಳವಾಗಿದೆ. ಸೆಕೆಂಡ್‌ ಸ್ಟೇಜ್‌ಗೆ ₹ 10 ರಿಂದ ₹ 12ಕ್ಕೆ, ಥರ್ಡ್‌ ಸ್ಟೇಜ್‌ಗೆ ₹ 12ರಿಂದ ₹ 15ಕ್ಕೆ ಹೆಚ್ಚಳವಾಗಿದೆ’ ಎಂದು ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌ ತಿಳಿಸಿದರು.

‘ಹುಬ್ಬಳ್ಳಿ ಸಿಬಿಟಿಯಿಂದ ಧಾರವಾಡ ಹೊಸ ಬಸ್‌ ನಿಲ್ದಾಣಕ್ಕೆ ₹24ರಿಂದ ₹ 32ಕ್ಕೆ ಏರಿಕೆ ಆಗಿದೆ. ಅದೇ ರೀತಿ ಹುಬ್ಬಳ್ಳಿ ಸಿಬಿಟಿಯಿಂದ ಧಾರವಾಡ ಮಿತ್ರ ಸಮಾಜ ನಿಲ್ದಾಣಕ್ಕೆ ₹22ರಿಂದ ₹ 32ಕ್ಕೆ, ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದಿಂದ ಧಾರವಾಡ ಹಳೇ ಬಸ್‌ ನಿಲ್ದಾಣಕ್ಕೆ ₹20ರಿಂದ ₹ 28ಕ್ಕೆ, ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ನವನಗರಕ್ಕೆ ₹15ರಿಂದ ₹ 17ಕ್ಕೆ, ಹುಬ್ಬಳ್ಳಿ ಸಿಬಿಟಿಯಿಂದ ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣಕ್ಕೆ ₹ 10ರಿಂದ ₹ 12ಕ್ಕೆ ಏರಿಕೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT