ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಒತ್ತುವರಿ ಕಟ್ಟಡಗಳ ತೆರವಿಗೆ ಸೂಚನೆ

ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ
Last Updated 9 ಆಗಸ್ಟ್ 2019, 14:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉಣಕಲ್‌ ಕೆರೆಯಿಂದ ಗಬ್ಬೂರವರೆಗೂ ಹರಿಯುವ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ. ಅವುಗಳಿಗೆ ಅನುಮತಿ ನೀಡಿದ ಅಧಿಕಾರಿಗಳು ನಿವೃತ್ತರಾಗಿದ್ದರೂ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಎಂದು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಸೂಚಿಸಿದರು.

ಮಳೆಯಿಂದ ಹಾನಿಗೊಳಗಾಗಿರುವ ಲಿಂಗರಾಜನಗರ, ದೇವಿನಗರ, ಶಿರೂರಪಾರ್ಕ್‌, ನೂತನ ನ್ಯಾಯಾಲಯ ಕಟ್ಟಡಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆಯಿಂದ 15 ಮೀಟರ್‌ವರೆಗೆ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡದಂತೆ ಕ್ರಮಕೈಗೊಳ್ಳಬೇಕು ಎಂದರು.

ಶಿರೂರ ಪಾರ್ಕ್‌ನಲ್ಲಿ ವಿಂಡಸರ್ ಮ್ಯಾನರ್‌ ಸೇರಿದಂತೆ ಸುತ್ತಲಿನ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿದ್ದನ್ನು ಪರಿಶೀಲಿಸಿದ ಅವರು, ಕೂಡಲೇ ಅಪಾರ್ಟ್‌ಮೆಂಟ್‌ಗಳ ಮಾಲೀಕರನ್ನು ಕರೆಯಿಸಿ ನೀರು ಖಾಲಿ ಮಾಡಿಸುವಂತೆ ಸೂಚಿಸಿ. ಜತೆಗೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಲು ತಿಳಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.

ದೇವಿನಗರದಲ್ಲಿ ಶೈನಾಜ್‌ ಸೌದಾಗರ ಅವರು, ಮನೆಯಲ್ಲಿನ ಟಿವಿ, ಫ್ರಿಡ್ಜ್‌ ಸೇರಿದಂತೆ ಎಲ್ಲ ವಸ್ತುಗಳು ಹಾಳಾಗಿವೆ. ಮೂರು ದಿನ ಮನೆಯಲ್ಲಿ ನೀರಿತ್ತು. ಬಂದು ನೋಡಿ ಎಂದು ಸಚಿವರಿಗೆ ಮನವಿ ಮಾಡಿದರು.

ರಸ್ತೆ ವಿಪರೀತ ರಾಡಿಯಾಗಿದ್ದರಿಂದ ಅಧಿಕಾರಿಗಳು ಸಚಿವರಿಗೆ ಅವರ ಮನೆಗೆ ಹೋಗದಂತೆ ತಡೆದರು. ಸಚಿವರು ಅಲ್ಲಿಯೆ ನಿಂತು ಅವರ ಸಂಕಷ್ಟ ಆಲಿಸಿ, ಆಶ್ರಯ ಯೋಜನೆಯಡಿ ಅವರಿಗೆ ಮನೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.

ರಾಜ್ಯದ 12 ಜಿಲ್ಲೆಗಳಲ್ಲಿ ಬಹಳಷ್ಟು ಮಳೆಯಾಗಿದೆ. ಜಿಲ್ಲೆಯೂ ವ್ಯಾಪಕವಾಗಿದೆ. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಈಗಾಗಲೇ ರಕ್ಷಣಾ ಕಾರ್ಯ, ತುರ್ತು ನೆರವಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಥಮಿಕ ಅಂದಾಜಿನಂತೆ ಅವಳಿ ನಗರದಲ್ಲಿ ₹ 65 ಕೋಟಿಯಷ್ಟು ಆಸ್ತಿ ನಷ್ಟವಾಗಿದೆ ಎಂದು ತಿಳಿಸಿದರು.

ಎನ್‌ಡಿಆರ್‌ಎಫ್‌ನಿಂದ ಈಗಾಗಲೇ ₹78 ಕೋಟಿ ಬಿಡುಗಡೆ ಮಾಡಲಾಗಿದೆ. ಮತ್ತೇ ₹ 128 ಕೋಟಿ ಕೇಳಿದ್ದರು. ಅದನ್ನೂ ಬಿಡುಗಡೆ ಮಾಡಲಾಗಿದೆ. ರಾಜ್ಯಕ್ಕೆ ಅವಶ್ಯವಿರುವ ಎಲ್ಲ ನೆರವನ್ನು ನೀಡಲು ಕೇಂದ್ರ ಬದ್ಧವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT