ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ನಗರಿಯಾಗುವತ್ತ ಹುಬ್ಬಳ್ಳಿ...

ಕಸ ಸಂಗ್ರಹಕ್ಕೆ ಮನೆ ಬಾಗಿಲಿಗೆ ಬರುವ ಆಟೊ ಟಿಪ್ಪರ್‌ಗಳು
Last Updated 12 ಅಕ್ಟೋಬರ್ 2021, 15:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಸದ ವಿಷ್ಯದಲ್ಲಿ ಈಗ ಬಾಳನೇ ಸುಧಾರಣೆ ಕಂಡುಬಂದೈತ್ರಿ. ಮೊದಲು ಎರಡು ಮೂರು ದಿವಸ ಮನೆಯಲ್ಲೇ ಕಸ ಇಟ್ಕೊಂಡು ಕುಂದ್ರಬೇಕಾಗ್ತಿತ್ತು. ಮನೆಯಿಡೀ ದುರ್ನಾತ ಬರ್ತಿತ್ತು. ವಿಧಿ ಇಲ್ದೆ ರಾತ್ರೊರಾತ್ರಿ ತಗೊಂಡು ಹೋಗಿ ಗಿಡದ ಕಂಟಿಗೊ, ರಸ್ತೆ ಬದಿಗೊ ಚೆಲ್ಲಿ ಬರ್ತಿದ್ವಿ. ಈಗ ಅಂತಹ ಸ್ಥಿತಿ ಇಲ್ರಿ. ಪೌರ ಕಾರ್ಮಿಕರು ಆಟೊ ಟಿಪ್ಪರ್‌ ಜೊತೆ ಮನೆ ಬಾಗಿಲಿಗೆ ಬಂದು ಕಸ ತಗೊಂಡು ಹೋಗ್ತಾರ್ರಿ...’

ವಾಣಿಜ್ಯ ನಗರಿ ಹುಬ್ಬಳ್ಳಿಯ ತ್ಯಾಜ್ಯ ನಿರ್ವಹಣೆಯ ನಾಲ್ಕೈದು ವರ್ಷಗಳ ಹಿಂದಿನ ಮತ್ತು ಇಂದಿನ ಸ್ಥಿತಿಯನ್ನು ಮೇಲಿನಂತೆ ತೆರೆದಿಟ್ಟವರು ಗುರುದೇವ ನಗರದ ಕಿರಾಣಿ ವ್ಯಾಪಾರಿ ಗೋವಿಂದರಾವ್ ಕುಲಕರ್ಣಿ.

ನಗರದ ತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ರಸ್ತೆ, ವೃತ್ತಗಳು, ಖಾಲಿ ನಿವೇಶನಗಳೇ ಹಿಂದೆ ಕಸ ಎಸೆಯುವ ತಾಣಗಳಾಗಿದ್ದವು. ವಾರಕ್ಕೆ ಮೂರು ಸಲ ಮನೆ ಕಸ ಸಂಗ್ರಹಿಸಿದರೆ ಹೆಚ್ಚಾಗಿತ್ತು. ಸ್ವಚ್ಛತೆಗೆ ಕಂಟಕವಾಗಿದ್ದ ಬಹುತೇಕ ಸಮಸ್ಯೆಗಳು ಈಗ ತಹಬದಿಗೆ ಬಂದಿವೆ.

ಕಸ ಸಂಗ್ರಹಕ್ಕೆ ಆಟೊ ಟಿಪ್ಪರ್

ಆಟೊ ಟಿಪ್ಪರ್‌ಳಿಂದ ಬಂದ ಕಸ
ಆಟೊ ಟಿಪ್ಪರ್‌ಳಿಂದ ಬಂದ ಕಸ

ಪೌರ ಕಾರ್ಮಿಕರು ಹಿಂದೆ ತಳ್ಳುಗಾಡಿ ಮತ್ತು ಕೈಗಾಡಿಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಿ ತಂದು, ಆಯಾ ಓಣಿಯ ರಸ್ತೆಯ ಮೂಲೆಯಲ್ಲಿ ಇಟ್ಟಿರುತ್ತಿದ್ದ ಕಂಟೈನರ್ ಅಥವಾ ಕಸದ ತೊಟ್ಟಿಗೆ ಹಾಕಬೇಕಿತ್ತು. ಎಲ್ಲಾ ರೀತಿಯ ಕಸವನ್ನೊಳಗೊಂಡ ಈ ತಿಪ್ಪೆಯನ್ನು ಟ್ರಾಕ್ಟರ್‌ ಅಥವಾ ಲಾರಿಗಳಿಗೆ ಲೋಡ್ ಮಾಡಿಕೊಂಡು, ಕಾರವಾರ ರಸ್ತೆಯಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಿ ಬರಬೇಕಿತ್ತು.

ಈಗ ಮನೆ,ಹೋಟೆಲ್‌, ಮಾರುಕಟ್ಟೆ ಸೇರಿದಂತೆ ಪಾಲಿಕೆ ವ್ಯಾಪ್ತಿಯ ವಿವಿಧ ಮೂಲದ ಕಸ ಸಂಗ್ರಹಕ್ಕೆ 193 ಆಟೊ ಟಿಪ್ಪರ್‌ಗಳು ಬಂದಿವೆ. ಈ ಪೈಕಿ, 120ಕ್ಕೂ ಹೆಚ್ಚು ಹುಬ್ಬಳ್ಳಿಯಲ್ಲಿವೆ. ವಾಹನಗಳು ಹೋಗಲಾಗದ ಓಣಿಗಳಿಂದ ಕಸ ಸಂಗ್ರಹಿಸಲು ಪೌರ ಕಾರ್ಮಿಕರಿಗೆ ತಳ್ಳುಗಾಡಿ ಮತ್ತು ಕೈಗಾಡಿಗಳನ್ನು ನೀಡಲಾಗಿದೆ.

ಕಸ ಸಂಗ್ರಹದ ಮಾಹಿತಿ ದಾಖಲಿಸುವ ಸಲುವಾಗಿ ನಗರದ 1 ಲಕ್ಷ ಮನೆಗಳಿಗೆ ಆರ್‌ಎಫ್‌ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ಟ್ಯಾಗ್‌ ಅಳವಡಿಸಲಾಗಿದೆ. ಕಸ ಎಸೆಯುವವರ ಮೇಲೆ ನಿಗಾ ಇಡಲು ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಕಾಂಪ್ಯಾಕ್ಟರ್ ಸ್ಟೇಷನ್

ಆಟೊ ಟಿಪ್ಪರ್‌ಗಳಿಂದ ಮನೆ ಹಾಗೂ ಇತರ ಮೂಲಗಳಿಂದ ಸಂಗ್ರಹಿಸಿದ ಕಸವನ್ನು ಸ್ಥಳೀಯವಾಗಿ ಒಂದೆಡೆ ವಿಲೇವಾರಿ ಮಾಡಲು, ನಾಲ್ಕು ಕಡೆ ಕಾಂಪ್ಯಾಕ್ಟರ್ ಸ್ಟೇಷನ್‌(ಘನ ತ್ಯಾಜ್ಯ ಸಾಂದ್ರೀಕರಣ ಘಟಕ) ಸ್ಥಾಪಿಸಲಾಗಿದೆ. ಬೆಂಗೇರಿ, ಉಣಕಲ್, ಇಂದಿರಾ ನಗರ ಹಾಗೂ ನಂದಿನಿ ಲೇಔಟ್‌ನಲ್ಲಿರುವ ಸ್ಟೇಷನ್‌ಗಳಿಗೆ ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ಸಂಗ್ರಹಿಸುವ ಕಸ ತಂದು ಹಾಕಲಾಗುತ್ತದೆ.

ಸಂಗ್ರಹಿತ ಕಸವನ್ನು 15 ಟನ್‌ ಸಾಮರ್ಥ್ಯದ ಕಾಂಪ್ಯಾಕ್ಟರ್‌ಗಳಿಗೆ ಲೋಡ್‌ ಮಾಡಲಾಗುತ್ತದೆ. ಬಳಿಕ ಅದನ್ನು ಹುಕ್‌ ಲೋಡರ್‌(ವಾಹನ) ವಾಹನಗಳ ಮೂಲಕ, ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ನಗರಗಳ ಸ್ವಚ್ಛತೆ ಅಳೆಯಲು ಕೇಂದ್ರ ಸರ್ಕಾರದವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2016ರಿಂದ ಆರಂಭಿಸಿರುವ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿಯೂ ಪಾಲಿಕೆಯ ರ‍್ಯಾಂಕಿಂಗ್‌ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಈ ವರ್ಷವೂ ಉತ್ತಮ ರ‍್ಯಾಂಕ್ ನಿರೀಕ್ಷೆಯಲ್ಲಿ ಪಾಲಿಕೆ ಇದೆ.

ಕಡ್ಡಾಯವಾಗದ ಕಸ ವಿಂಗಡಣೆ

ಹಸಿ ಮತ್ತು ಒಣ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡುವ ವ್ಯವಸ್ಥೆ ನಾಮಕಾವಸ್ಥೆಗಷ್ಟೇ ಇದೆ.ಆಟೊ ಟಿಪ್ಪರ್‌ಗಳಲ್ಲಿ ವಿಂಗಡಿತ ಕಸ ಸಂಗ್ರಾಹಕಗಳಿದ್ದರೂ, ಮನೆ ಕಸ ಸೇರಿದಂತೆ ವಿವಿಧ ಮೂಲಗಳ ತ್ಯಾಜ್ಯವನ್ನು ಒಟ್ಟಿಗೆ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ವಿಂಗಡಿಸಿ ನೀಡದವರಿಂದ ಕಸ ಸಂಗ್ರಹಿಸಬಾರದು ಎಂದು ಪಾಲಿಕೆ ಪೌರ ಕಾರ್ಮಿಕರಿಗೆ ಸೂಚಿಸಿದರೂ, ವಾಸ್ತವದಲ್ಲಿ ಅದು ನಡೆಯುವಂತಹ ಪ್ರಯೋಗವಲ್ಲ. ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ಹಾಕುವಎಚ್ಚರಿಕೆ ಕೇವಲ ಹಾಳೆ ಮೇಲಷ್ಟೇ ಉಳಿದಿದೆ.

‘ತ್ಯಾಜ್ಯದಿಂದಲೂ ಬರಲಿದೆ ಆದಾಯ’

‘ನಗರದಲ್ಲಿ ನಾಲ್ಕು ಒಣ ತ್ಯಾಜ್ಯ ಘಟಕಗಳನ್ನು ನಿರ್ಮಿಸಲಾಗಿದ್ದು, ಯಂತ್ರೋಪಕರಣಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಪುನರ್‌ಬಳಕೆ ಮಾಡಬಹುದಾದ ವಸ್ತುಗಳನ್ನು ಮಾರಾಟ ಮಾಡುವುದರಿಂದ ಪಾಲಿಕೆಗೆ ಆದಾಯ ಬರಲಿದೆ. ಉಳಿದ ಕಸವನ್ನು ಸಂಸ್ಕರಿಸಲು ಎನ್‌ಟಿಪಿಸಿ ಸಹಕಾರದೊಂದಿಗೆ, ₹40 ಕೋಟಿ ವೆಚ್ಚದಲ್ಲಿ 200 ಟನ್ ಸಾಮರ್ಥ್ಯದ ವೇಸ್ಟ್‌ ಟು ಎನರ್ಜಿ ಪ್ಲಾಂಟ್ ಗಬ್ಬೂರಿನಲ್ಲಿ ತಲೆ ಎತ್ತಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯ 160 ಟನ್ ತ್ಯಾಜ್ಯವನ್ನು ಪ್ಲಾಂಟ್‌ಗೆ ನೀಡಲಾಗುವುದು. ಇಲ್ಲಿ ವಿದ್ಯುತ್ ಉತ್ಪಾದನೆಯಾಗಲಿದೆ. ತ್ಯಾಜ್ಯವನ್ನು ಟಾರಿಫೈಡ್ ಚಾರ್ಕೊಲ್ (ಸುಟ್ಟ ಇದ್ದಿಲು) ಆಗಿ ಪರಿವರ್ತಿಸಿ, ಚಾರ್ಕೊಲ್ ಮತ್ತು ಕೋಲ್ ಅನ್ನು ಒಟ್ಟಿಗೆ ಥರ್ಮಲ್ ಪವರ್ ಘಟಕದಲ್ಲಿ ಬಳಸಬಹುದಾಗಿದೆ. ಇದರಿಂದಲೂ ಆದಾಯ ಬರುವ ಜೊತೆಗೆ, 50 ಮಂದಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳಿದರು.

‘ಕಾಂಪೋಸ್ಟ್‌’ನಿಂದ ಸಮಸ್ಯೆ ಪರಿಹಾರ’

ಕಸ
ಕಸ

‘ಕಾರವಾರ ರಸ್ತೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಥಾಪಿಸಿರುವ ಸಾವಯವ ಗೊಬ್ಬರ ತಯಾರಿಕೆ ಘಟಕ(ಕಾಂಪೊಸ್ಟ್‌) ಆರಂಭವಾದರೆ, ಕಸ ವಿಂಗಡಣೆ ಸೇರಿದಂತೆ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘300 ಟನ್ ಸಾಮರ್ಥ್ಯದ ಘಟಕ ಆರಂಭವಾದರೆ ನಿತ್ಯ ಸಂಗ್ರಹವಾಗುವ ಹಸಿ ಕಸವು ಗೊಬ್ಬರವಾಗಲಿದೆ. ಧಾರವಾಡದಲ್ಲಿ ಈಗಾಗಲೇ ಘಟಕ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಯುತ್ತಿದೆ. ಜೊತೆಗೆ, ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯ ವಿಲೇವಾರಿಗೂ ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT