ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಹೆಸರಲ್ಲಿ ಕೆರೆ ಅಂಗಳಕ್ಕೇ ಮಣ್ಣು

ನಮ್‌ ಕೆರಿ ಕಥಿ–2
Last Updated 10 ಫೆಬ್ರುವರಿ 2020, 3:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿರುವ ಕೆರೆಗಳ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಇದೀಗ ‘ಸ್ಮಾರ್ಟ್‌ ಸಿಟಿ’ಯಲ್ಲೂ ಕೆರೆಗಳ ಅಭಿವೃದ್ಧಿಗೆ ಯೋಜನೆಗಳಾಗಿವೆ. ಆದರೆ ಯಾವ ಇಲಾಖೆಯಲ್ಲೂ ಜಿಲ್ಲೆ, ಅವಳಿನಗರದಲ್ಲಿದ್ದ ಹಾಗೂ ಈಗ ಉಳಿದಿರುವ ಕೆರೆಗಳ ಸಂಪೂರ್ಣ ಮಾಹಿತಿ ಇಲ್ಲ.

ಕೆರೆಗಳ ಮಾಹಿತಿ ಒಂದೊಂದು ಇಲಾಖೆಗೂ ವ್ಯತಿರಿಕ್ತವಾಗಿದೆ. ‘ನಮಗೆ ಸೇರಿದ್ದಿಷ್ಟೇ...’ ಎಂದು ಜಾರಿಕೊಳ್ಳುವುದು ಹೆಚ್ಚು. ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲೇ ‘ಜಿಲ್ಲಾ ಕೆರೆಗಳ ಸಮಿತಿ’ ಇದೆ. ಆದರೆ, ಈ ಸಮಿತಿಗೊಂದು ಕಚೇರಿಯೇ ಇಲ್ಲ. ಮೂಲವಾಗಿ ದಾಖಲಾಗಬೇಕಿರುವ ಕೆರೆಗಳ ಮಾಹಿತಿಯೇ ಸಮಿತಿಗಿಲ್ಲ. ಎಲ್ಲ ಇಲಾಖೆಯ ಮುಖ್ಯಸ್ಥರು ಸೇರಿದಾಗ ಕೆರೆಗಳ ಚರ್ಚೆಯಾಗುತ್ತದೆ. ಎಲ್ಲರೂ ತಮ್ಮ ವ್ಯಾಪ್ತಿಯ ಕೆರೆಗಳ ಮಾಹಿತಿ ನೀಡಿ, ಅದರ ಅಭಿವೃದ್ಧಿಗಷ್ಟೇ ಮಾತನಾಡುತ್ತಾರೆ. ಸಮಗ್ರ ಮಾಹಿತಿ ಸಂಗ್ರಹ ಅಥವಾ ದಾಖಲಿಸುವ ಕೆಲಸ ‘ಜಿಲ್ಲಾ ಕೆರೆಗಳ ಸಮಿತಿ’ಯಿಂದಲೂ ಈವರೆಗೂ ಆಗಿಲ್ಲ.

ಒಂದು ಸಮಗ್ರ ದಾಖಲೆ ಇಲ್ಲದ್ದರಿಂದ ಕೆರೆಗಳ ಮಾಹಿತಿ ಹಾಗೂ ಸಂಖ್ಯೆ ಇಲಾಖೆಯಿಂದ ಇಲಾಖೆಗೆ ವ್ಯತಿರಿಕ್ತವಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ 54ಕ್ಕೂ ಹೆಚ್ಚು ಜೀವಂತ ಕೆರೆಗಳಿದ್ದರೂ, ಪಾಲಿಕೆ ದಾಖಲೆಯಲ್ಲಿರುವುದು 10 ಮಾತ್ರ. ಹೆಗ್ಗೇರಿ, ಕೆಲಗೇರಿ, ಕೆಂಪಕೆರೆ, ಕೋಳಿಕೆರೆ, ನವಲೂರ ಕೆರೆ, ಸೋಮೇಶ್ವರ ಕೆರೆ, ನುಗ್ಗಿಕೆರಿ, ಸಾಧನಕೇರಿ, ಉಣಕಲ್‌ ಮುಖ್ಯ ಕೆರೆ, ಉಣಕಲ್‌ ಸಣ್ಣ ಕೆರೆ. ಈ ಹತ್ತು ಕೆರೆಯಲ್ಲಿ ಹೆಗ್ಗೇರಿ ಕ್ರೀಡಾಂಗಣವಾಗಿದೆ.

ಎಂಪ್ರಿ ಅಧ್ಯಯನ ವರದಿ ಪ್ರಕಾರ, 101 ಕೆರೆಗಳು ಅವಳಿನಗರ, ಅದರಲ್ಲೂ ಪಾಲಿಕೆ ವ್ಯಾಪ್ತಿಯಲ್ಲೇ ಇವೆ. ಇದರಲ್ಲಿ ಸಾಕಷ್ಟು ಕೆರೆಗಳು ಅಂದರೆ 47 ಕೆರೆಗಳು ಬಳಕೆರಹಿತ. ರಸ್ತೆ, ನೆಹರೂ ಸ್ಟೇಡಿಯಂ, ಪೊಲೀಸ್‌ ಸ್ಟೇಷನ್‌, ಪ್ರಾದೇಶಿಕ ಸಾರಿಗೆ ಕಚೇರಿ, ಮಾರುಕಟ್ಟೆ, ಕ್ರೀಡಾ ತರಬೇತಿ ಕೇಂದ್ರ, ಪಾಸ್‌ಪೋರ್ಟ್‌ ಸೇವಾ ಕೇಂದ್ರ, ಧಾರ್ಮಿಕ ಕಟ್ಟಡಗಳು, ಸಮುದಾಯ ಭವನಗಳು ಈ ಬಳಕೆರಹಿತ ಕೆರೆಗಳ ಸಮಾಧಿ ಮೇಲೆಯೇ ಇವೆ. ಇದೇ ರೀತಿ, ಶಾಲಾ–ಕಾಲೇಜುಗಳು, ಮನೆಗಳು, ವಾಣಿಜ್ಯ ಕಟ್ಟಡಗಳು, ಶೆಡ್‌, ಹಾಸ್ಟೆಲ್‌, ಐಟಿ ಪಾರ್ಕ್‌, ಈಜುಕೊಳ ಕೂಡ ಕೆರೆಗಳನ್ನು ಮುಚ್ಚಿಯೇ, ಅವುಗಳ ಮೇಲೆ ತಲೆಎತ್ತಿವೆ. ಇಷ್ಟಾದರೂ, ಅವಳಿನಗರದಲ್ಲಿ ಸಂಪೂರ್ಣ ನಶಿಸಿಹೋಗಿರುವ ಕೆರೆಗಳು ಸುಮಾರು 30. ಉಳಿದ 15ರಿಂದ 17 ಈಗಲೂ ಉಳಿಸಿಕೊಳ್ಳುವ ಈಗಲೂ ಅವಕಾಶವಿದೆ. ಇವುಗಳಿಗೆ ನೀರುಕಾಲುವೆಗಳಿಲ್ಲ. ಹೀಗಾಗಿ, ಮಳೆ ಕೊಯ್ಲು ಘಟಕಗಳನ್ನಾಗಿಯಾದರೂ ಉಳಿಸಿಕೊಳ್ಳಬಹುದಾಗಿದೆ. ಜೊತೆಗೆ ವೃಕ್ಷವನವನ್ನಾಗಿಯೂ ಮಾಡಬಹುದು. ಕೆರೆಗಳಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸುವ ಬದಲಿಗೆ, ಅವುಗಳಿಗೆ ಅರಿಯುವ ಒಳಚರಂಡಿ ನೀರು ತಡೆದು, ಒತ್ತುವರಿ ತೆರವು ಮಾಡಿ, ಗಡಿ ಗುರುತಿಸಿ ಬೇಲಿ ಹಾಕಿದರೆ ಅವುಗಳು ಬದುಕಿಕೊಳ್ಳುತ್ತವೆ. ಆದರೆ, ಈಗಲೂ ಅಭಿವೃದ್ಧಿ ನೆಪದಲ್ಲಿ, ಅತ್ಯಾಧುನಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಳಿದು ಉಳಿದಿರುವ ಕೆರೆಗಳ ಗಾತ್ರವನ್ನೇ ಕಡಿತಗೊಳಿಸಲಾಗುತ್ತಿದೆ. ಇಂತಹ ಅಭಿವೃದ್ಧಿ ಅನಗತ್ಯ ಹಾಗೂ ಶೋಚನೀಯ.⇒v

ಅವಳಿ ನಗರಕ್ಕೆ ನೀರು ಪೂರೈಕೆ ಇತಿಹಾಸ

ತಿರುಕಾರಾಮನೆಂಬ ರಜಪೂತನು 18ನೇ ಶತಮಾನದ ಪ್ರಾರಂಭದಲ್ಲಿ ಹೊಸ ಹುಬ್ಬಳ್ಳಿಯಲ್ಲಿ ಕಟ್ಟಿಸಿದ ಕೆರೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿತ್ತು. ಮುನಿಸಿಪಾಲಿಟಿ ರಚನೆಯಾದ ನಂತರ ಈ ಕೆರೆಯನ್ನು ಹಲವು ಬಾರಿ ವಿಸ್ತರಿಸಲಾಯಿತು. 1881ರಲ್ಲಿ ಈ ಕೆರೆಯ ವಿಸ್ತೀರ್ಣ 59 ಎಕರೆಯಾಗಿತ್ತು. ಈ ಕೆರೆಯ ನೀರು ಗುರುಸಿದ್ದಪ್ಪ ಹೊಂಡಕ್ಕೆ (ಮೂರು ಸಾವಿರ ಮಠದ ಹೊಂಡ) ಹೋಗಿ ಅಲ್ಲಿಂದ ಭೂಸಪೇಟೆ ಹೊಂಡಕ್ಕೆ ಹೋಗುವ ವ್ಯವಸ್ಥೆ ಇತ್ತು. ಅಲ್ಲದೆ, ಹೊಸ ಹುಬ್ಬಳ್ಳಿಯಲ್ಲಿ 386 ಸಿಹಿನೀರಿನ ಬಾವಿಗಳು, 250 ಸವಳು ನೀರಿನ ಬಾವಿಗಳಿದ್ದವು. ಹಳೇ ಹುಬ್ಬಳ್ಳಿಯಲ್ಲಿ ಕೃಷ್ಣಾಪುರದ ಹೆಗ್ಗೆರೆ, ಭವಾನಿ ಶಂಕರ ಗುಡಿಯ ಹತ್ತಿರದ ಹೊಂಡ ನೀರು ಸರಬರಾಜಿನ ಪ್ರಮುಖ ತಾಣಗಳಾಗಿದ್ದವು. ಇದಲ್ಲದೆ, ಹಳೇ ಹುಬ್ಬಳ್ಳಿಯಲ್ಲಿ 100 ಸಿಹಿ ನೀರಿನ ಬಾವಿಗಳು, 150 ಸವಳುನೀರಿನ ಬಾವಿಗಳಿದ್ದವು.

ಹುಬ್ಬಳ್ಳಿ ನಗರಕ್ಕೆ ನಳದ ಮೂಲಕ ಕುಡಿಯುವ ನೀರು ಒದಗಿಸಲು 1876ರಲ್ಲಿ ಉಣಕಲ್‌ ಕೆರೆಯನ್ನು ನಿರ್ಮಿಸಲಾಯಿತು. ಮುನಿಸಿಪಾಲಿಟಿ, ರೈಲ್ವೆ ಕಂಪನಿ ಜಂಟಿಯಾಗಿ ಈ ಯೋಜನೆ ಪ್ರಾರಂಭಿಸಿ, 1892ರ ವೇಳೆಗೆ ಕುಡಿಯುವ ನೀರು ಪೂರೈಸಲಾಯಿತು. ಕೆರೆಯ ಜಲಾವೃತ ಪ್ರದೇಶದ ವಿಸ್ತೀರ್ಣ 18 ಚದರ ಮೈಲಿಗಳಿದ್ದು, ತುಂಬಿದಾಗ 150 ದಶಲಕ್ಷ ಘನ ಅಡಿ ನೀರು ಸಂಗ್ರಹವಾಗುವುದು. 1951ರಲ್ಲಿ ಉಣಕಲ್‌ ಕೆರೆಯ ಮೂಲಕ ಹುಬ್ಬಳ್ಳಿ ನಗರಕ್ಕೆ ಪ್ರತಿದಿನ ಸುಮಾರು ಒಂದು ದಶಲಕ್ಷ ಗ್ಯಾಲನ್‌ ನೀರು ಪೂರೈಕೆಯಾಗುತ್ತಿತ್ತು. ಹುಬ್ಬಳ್ಳಿ ರೈಲ್ವೆ ಇಲಾಖೆಯವರು ದೇವರಗುಡಿಹಾಳ ಕೆರೆಯಿಂದ ಪ್ರತ್ಯೇಕವಾಗಿ ನೀರು ಪೂರೈಕೆ ವ್ಯವಸ್ಥೆ ಹೊಂದಿದ್ದರು.

ಧಾರವಾಡ ನಗರಕ್ಕೆ 20ನೇ ಶತಮಾನದ ಪ್ರಾರಂಭದ ದಶಕದಲ್ಲಿ ಹಿರೇಕೆರೆ, ಕೊಪ್ಪದ ಕೆರೆ, ಹಾಲಕೆರೆ ಸೇರಿದಂತೆ ಐದಾರು ಕೆರೆಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು ಎಂದು ಗೆಜೆಟಿಯರ್‌ನಲ್ಲಿ ನಮೂದಾಗಿದೆ. ಮುಂಬೈ ಸರ್ಕಾರದಲ್ಲಿ ಸ್ಯಾನಿಟರಿ ಎಂಜಿನಿಯರ್‌ ಆಗಿದ್ದ ಸರ್‌ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಕೆಲಗೇರಿ ಕೆರೆಯಿಂದ ನಳದ ಮೂಲಕ ಧಾರವಾಡ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 1908ರಲ್ಲಿ ಆರಂಭಿಸಿ 1911ರಲ್ಲಿ ಪೂರ್ಣಗೊಳಿಸಲಾಯಿತು. ಈ ಯೋಜನೆಯ ವೆಚ್ಚ ₹4.75 ಲಕ್ಷ.

ಅವಳಿನಗರದ ನೀರಿನ ಬೇಡಿಕೆ ಹೆಚ್ಚಾದ ಕಾರಣ ಅದನ್ನು ಪೂರೈಸಲು 1955ರಲ್ಲಿ ನೀರಸಾಗರ ಯೋಜನೆಯನ್ನು ಜಾರಿಗೊಳಿಸಲಾಯಿತು. ಯೋಜನೆಗೆ 1948ರಲ್ಲಿ ಮುಂಬೈ ಸರ್ಕಾರ ಈ ₹141 ಲಕ್ಷ ಮಂಜೂರು ಮಾಡಿತ್ತು. ನೀರಸಾಗರದಿಂದ ಪ್ರತಿದಿನ 20 ಗ್ಯಾಲನ್‌ ನೀರು ಪೂರೈಸಲು ಸಾಧ್ಯವಾಯಿತು. ಇದಾದನಂತರ, ಅವಳಿನಗರಕ್ಕೆ ನೀರಿನ ಬೇಡಿಕೆ ಮತ್ತಷ್ಟು ಹೆಚ್ಚಾದಾಗ, ಧಾರವಾಡದಿಂದ 40 ಕಿ.ಮೀ ದೂರವಿರುವ ಸವದತ್ತಿಯ ಮಲಪ್ರಭಾ ಜಲಾಶಯದಿಂದ ನೀರು ಪೂರೈಸುವ ಯೋಜನೆಯನ್ನು 1975ರಲ್ಲಿ ಆರಂಭಿಸಿ, 1983ರಲ್ಲಿ ಒಟ್ಟು ₹1,175 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಯಿತು. 1990ರಲ್ಲಿ ಮಲಪ್ರಭಾ ಜಲಾಶಯದ ಎರಡನೇ ಯೋಜನೆಯನ್ನೂ ಆರಂಭಿಸಲಾಯಿತು.

2041ಕ್ಕೆ ಕೆರೆಗಳ ಸಂಖ್ಯೆ ಕೇವಲ 6!

ಅವಳಿ ನಗರದ ಹಲವು ಕೆರೆಗಳು ಬತ್ತಿಹೋಗಿವೆ ಎಂದು ಹೇಳಲಾಗಿದೆ. ಹಲವು ಕೆರೆಗಳು ವಸತಿ ಬಡಾವಣೆಗಳಾಗಿವೆ. ಜೀವಂತ ಇರುವ ಕೆರೆಗಳೂ ಸಾಕಷ್ಟು ಸಂಕಷ್ಟದಲ್ಲಿದ್ದು, ಹೂಳು ತುಂಬಿಕೊಳ್ಳುತ್ತಿವೆ ಮತ್ತೆ ಕೆಲವು ಬಡಾವಣೆಗಳಾಗಿ ಪರಿವರ್ತನೆಯಾಗುವ ಆತಂಕವಿದೆ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಯೋಜನೆ–2041ರಲ್ಲೂ ಹೇಳಲಾಗಿದೆ. ಆದರೆ, ಅವಳಿನಗರದಲ್ಲಿ ಉಳಿದಿರುವ ಕೆರೆಗಳ ಸಂಖ್ಯೆಗಳನ್ನು ಮಾತ್ರ 6 ಎಂದಷ್ಟೇ ತೋರಿಸಲಾಗಿದೆ. ಉಣಕಲ್‌, ಸಾಧನಕೇರಿ, ರಾಯಾಪೂರ ಕೆರೆ, ಕೆಲಗೇರಿ ಕೆರೆ, ನವಲೂರ ಕೆರೆ ಮತ್ತು ಕೋಳಿಕೆರೆಗಳನ್ನು ಮಾತ್ರ ಉಳಿದಿವೆ ಎಂದು ದಾಖಲಿಸಲಾಗಿದೆ.

ಅವಳಿನಗರದಲ್ಲಿ ಜೀವಂತವಾಗಿರುವ 54 ಕೆರೆಗಳಲ್ಲಿ

19 ಏರಿ ಇರುವ ಕೆರೆಗಳು

12.5 ಮೀ. ಗೋಕುಲ ಕೆರೆ

12 ಮೀ. ರಾಯನಾಳ ಕೆರೆ

7.5 ಮೀ. ಉಣಕಲ್‌ ಚಿಕ್ಕ ಕೆರೆ

3.2 ಮೀ ಕೆಲಗೇರಿ ಕೆರೆ

3 ಮೀ. ಎತ್ತಿನಗುಡ್ಡ ಕೆರೆ

2.8 ಮೀ. ದೊಡ್ಡನಾಯಕನಕೊಪ್ಪ ಕೆರೆ–1 / ಸಾಧನಕೇರಿ

13 ಒಳಹರಿವಿನ ನಾಲಾ ಇಲ್ಲದ ಕೆರೆಗಳು

13 ಒಳಹರಿವಿನ ಒಂದು ನಾಲಾ ಹೊಂದಿರುವ ಕೆರೆಗಳು

12 ಒಳಹರಿವಿನ ಎರಡು ನಾಲಾ ಹೊಂದಿರುವ ಕೆರೆಗಳು

12 ಒಳಹರಿವಿನ ಮೂರು ನಾಲಾ ಹೊಂದಿರುವ ಕೆರೆಗಳು

3 ಒಳಹರಿವಿನ ನಾಲ್ಕು ನಾಲಾ ಹೊಂದಿರುವ ಕೆರೆಗಳು

1 ಒಳಹರಿವಿನ ಎಂಟು ನಾಲಾ ಹೊಂದಿರುವ ಕೆರೆ (ತೋಳನಕೆರೆ)

32 ಹೊರಹರಿವು ನಾಲಾ (ಕೋಡಿ) ಇಲ್ಲದ ಕೆರೆಗಳು

22 ಹೊರಹರಿವಿನ ಒಂದು ನಾಲಾ (ಕೋಡಿ) ಹೊಂದಿರುವ ಕೆರೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT