ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಬೈಪಾಸ್‌ನಲ್ಲಿ ಖಾರ ಎರಚಿ ದರೋಡೆ– ಏಳು ಮಂದಿ ಬಂಧನ

ದ್ವಿಚಕ್ರ ವಾಹನ, ಆಟೊ, ಚಾಕು ವಶ; ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಕಾರ್ಯಾಚರಣೆ
Published : 1 ಅಕ್ಟೋಬರ್ 2024, 4:39 IST
Last Updated : 1 ಅಕ್ಟೋಬರ್ 2024, 4:39 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ನಗರದ ಹೊರವಲಯದ ಗದಗ ರಸ್ತೆಯ ವರ್ತುಲ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಏಳು ಮಂದಿಯ ಗ್ಯಾಂಗ್ ಅನ್ನು ಮಂಟೂರ ರಸ್ತೆ ಬಳಿ ಪಾಳುಬಿದ್ದ ಸುಧಾ ಅಪಾರ್ಟ್‌ಮೆಂಟ್‌ ಬಳಿ ಭಾನುವಾರ ರಾತ್ರಿ ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗಾಧರನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ್, ಕೆ.ಬಿ. ನಗರದ ದೀಪಕ ನರಗುಂದ, ಶ್ರೀನಿವಾಸ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ್ ಸಾತಪತಿ, ಗೋಪನಕೊಪ್ಪದ ನಾಗರಾಜ ಬಳ್ಳಾರಿ ಬಂಧಿತರು. ಆರೋಪಿಗಳಿಂದ ₹4,100 ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಆಟೊ, ಎರಡು ದ್ವಿಚಕ್ರ ವಾಹನ, ಚಾಕು ಹಾಗೂ ಖಾರದ ಪುಡಿ ಪ್ಯಾಕೆಟ್ ವಶಪಡಿಸಿಕೊಂಡಿದ್ದಾರೆ.

ಹೊರವಲಯದ ವರ್ತುಲ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಹಾಗೂ ಲಾರಿಗಳನ್ನು ಆರೋಪಿಗಳು ಅಡ್ಡಗಟ್ಟಿ ಬೆದರಿಸುತ್ತಿದ್ದರು. ಕಣ್ಣಿಗೆ ಖಾರದ ಪುಡಿ ಎರಚಿ, ಚಾಕುವಿನಿಂದ ಹಲ್ಲೆ ಮಾಡಿ ಹಣ, ಚಿನ್ನಾಭರಣ ಸೇರಿದಂತೆ ಅತ್ಯಮೂಲ್ಯ ವಸ್ತುಗಳನ್ನು ದೋಚುತ್ತಿದ್ದರು. ಕೆಲ ದಿನಗಳ ಹಿಂದೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‌ಸ್ಪೆಕ್ಟರ್ ಎಸ್.ಆರ್‌. ನಾಯಿಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

ಪಿಎಸ್ಐ ರವಿ ವಡ್ಡರ, ಎಎಸ್ಐ ಟಿ.ಎನ್. ಸವದತ್ತಿ ಹಾಗೂ ಸಿಬ್ಬಂದಿಯಾದ ಪಿ.ಜಿ. ಪುರಾಣಿಕಮಠ, ಎನ್.ಐ. ನಿಲಗಾರ್, ಪಿ.ಎಫ್. ಅಂಬಿಗೇರ್, ಆರ್.ಎಸ್. ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ಕಾರ್ಯಾಚರಣೆಯಲ್ಲಿ‌ ಪಾಲ್ಗೊಂಡಿದ್ದರು.

ಕಳವು ಆರೋಪಿಗಳ ಬಂಧನ: ಇಲ್ಲಿನ ವಿಜಯನಗರದ ತಿರುಪತಿ ಬಜಾರ್‌ ಮೊದಲ ಮಳಿಗೆಯ ನಿವಾಸಿ ಪ್ರೊ. ಸುಜಾತಾ ದೇವರಮನಿ ಅವರ ಮನೆ ಬಾಗಿಲಿನ ಕೀಲಿ ಮುರಿದು, ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ₹5.33 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

‘ಗಂಗಾಧರನಗರ ಸೆಟ್ಲಮೆಂಟ್‌ನ ಬಾಳಿಮೇಡ ಮತ್ತು ಕುಸಗಲ್‌ ಗ್ರಾಮದ ಮಕ್ತುಂಸಾಬ ಕುಂಬಿ ಬಂಧಿತರು. ಹಳೇಬಟ್ಟೆ ಖರೀದಿ ನೆಪದಲ್ಲಿ ಆರೋಪಿಗಳು ಬಡಾವಣೆಗಳಲ್ಲಿ ಸಂಚರಿಸಿ, ಮನೆ ಬಾಗಿಲಿಗೆ ಬೀಗ ಹಾಕಿರುವುದನ್ನು ಗಮನಿಸುತ್ತಿದ್ದರು. ಎರಡು, ಮೂರು ದಿನಗಳವರೆಗೆ ಬೀಗ ಹಾಕಿದ್ದು ಕಂಡು ಬಂದರೆ ಹಗಲಿನ ವೇಳೆಯೇ ಬೀಗ ಮುರಿದು ಕಳವು ಮಾಡುತ್ತಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಗಳ ಗುರುತು ಪತ್ತೆಯಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಕಿರಣಕುಮಾರ್‌ ಎಸ್‌.ಟಿ. ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ ಟಿ.ಎಂ. ಮತ್ತು ಎನ್‌.ಎಂ. ಮನಿಯಾರ, ಸಿಬ್ಬಂದಿಯಾದ ಎಸ್‌.ಎಚ್‌. ಪಾಟೀಲ, ವೈ.ಬಿ. ಮೊರಬ, ರಾಜೇಂದ್ರ ಸಕ್ರೆಪ್ಪಗೋಳ, ವೀರೇಶ ಮಹಾಜನಶೆಟ್ಟರು, ಶಂಭು ಈರೇಶನವರ, ಎ.ಐ. ಚವರಿ, ಎ.ಎ. ಹುಬ್ಬಳ್ಳಿ, ಮಹಾದೇವ ತಳವಾರ ಕಾರ್ಯಾಚರಣೆ ನಡೆಸಿದ್ದರು.

22 ಮೊಬೈಲ್‌ ಪತ್ತೆ; ಇಬ್ಬರ ಬಂಧನ ಹುಬ್ಬಳ್ಳಿ: ಗಣೇಶಮೂರ್ತಿ ವಿಸರ್ಜನೆ ಈದ್‌ ಮಿಲಾದ್‌ ಮೆರವಣಿಗೆ ಹಾಗೂ ಇನ್ನಿತರ ಸಂದರ್ಭದಲ್ಲಿ ಕಳೆದುಕೊಂಡಿದ್ದ 22 ಮೊಬೈಲ್‌ಗಳನ್ನು ಅವಳಿನಗರದ ಪೊಲೀಸರು ಪತ್ತೆ ಹಚ್ಚಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ‘ಸ್ಥಳೀಯ ನಿವಾಸಿಗಳಾದ ಸಿದ್ಧಾರೂಢ ಮತ್ತು ವೆಂಕಟೇಶ ಬಂಧಿತ ಆರೋಪಿಗಳು. ಜನದಟ್ಟಣೆಯಲ್ಲಿ ದೊಡ್ಡ ಕಾರ್ಯಕ್ರಮಗಳಲ್ಲಿ ಅಥವಾ ಮೆರವಣಿಗೆಯಲ್ಲಿ ಆರೋಪಿಗಳು ಭಾಗಿಯಾಗಿ ಸಾರ್ವಜನಿಕರ ಕೈಯ್ಯಲ್ಲಿರುವ ಅಥವಾ ಜೇಬಲ್ಲಿದ್ದ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ದಾಖಲಾಗಿವೆ ಇನ್ನಷ್ಟು ಪ್ರಕರಣಗಳು ದಾಖಲಾಗಿಲ್ಲ. ಮತ್ತಷ್ಟು ಆರೋಪಿಗಳ ಬಂಧನ ಹಾಗೂ ಮೊಬೈಲ್‌ಗಳ ಪತ್ತೆಯಾಗುವ ಸಾಧ್ಯತೆಯಿದೆ’ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT