ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಫಿನ್ ಟ್ರೋಫಿ 20–20 ಕ್ರಿಕೆಟ್: ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ ಚಾಂಪಿಯನ್‌

Published 15 ಏಪ್ರಿಲ್ 2024, 4:09 IST
Last Updated 15 ಏಪ್ರಿಲ್ 2024, 4:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುಧನ್ವ ಕುಲಕರ್ಣಿ (59; 43ಎ, 4X5, 6X3), ಅಜೀಮ್‌ ಜಿ (ಅಜೇಯ 90; 44ಎ) ಅವರ ಅರ್ಧಶತಕಗಳ ನೆರವಿನಿಂದ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡವು ಎಲ್ಫಿನ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಇಲ್ಲಿನ ಜಿಮ್ಖಾನ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ತಂಡವು ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ತಂಡದ ಎದುರು 5 ವಿಕೆಟ್‌ಗಳಿಂದ ಜಯಿಸಿತು.

208 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 211 ರನ್‌ ಗಳಿಸಿ ಗೆಲುವಿನ ಸಂಭ್ರಮ ಆಚರಿಸಿತು.

ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ ತಂಡಕ್ಕೆ ಗೆಲುವಿಗೆ ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅವಶ್ಯಕತೆ ಇತ್ತು. ಆಗ ಸಿಕ್ಸರ್‌ ಬಾರಿಸಿದ ಅಜೀಮ್‌ ತಂಡಕ್ಕೆ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ 19ನೇ ಓವರ್‌ನಲ್ಲಿ ಅಜೀಮ್‌ ನಾಲ್ಕು ಸಿಕ್ಸರ್ ಬಾರಿಸಿ ಮಿಂಚಿದರು. ಅವರ ಇನಿಂಗ್ಸ್‌ನಲ್ಲಿ 4 ಬೌಂಡರಿ, 10 ಸಿಕ್ಸರ್ ಇದ್ದವು. 

ಅರ್ಧಶತಕ ಗಳಿಸಿದ್ದ ಆರಂಭಿಕ ಆಟಗಾರ ಸುಧನ್ವ ಕುಲಕರ್ಣಿ ಓಂಕಾರ ವರ್ಣೇಕರ್ ಬೌಲಿಂಗ್‌ನಲ್ಲಿ ಸ್ವಪ್ನಿಲ್‌ ಯಳವೆಗೆ ಕ್ಯಾಚಿತ್ತು ನಿರ್ಗಮಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್ ತಂಡವು ಆರಂಭಿಕ ಆಟಗಾರ ಕವೀಶ ಮುಕ್ಕಣ್ಣವರ ಅವರ ವಿಕೆಟ್‌ ಅನ್ನು ಬೇಗ ಕಳೆದುಕೊಂಡಿತು. ಈ ಹಂತದಲ್ಲಿ ತಂಡದ ನಾಯಕ ಸ್ವಪ್ನಿಲ್ ಯಳವೆ 40 (31ಎ; 3X4, 6X3) ರನ್‌ ಗಳಿಸಿ ಚೇತರಿಕೆ ನೀಡಿದರು.

ನಂತರ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಆಟವಾಡಿದ ಓಂಕಾರ ವರ್ಣೇಕರ ಅರ್ಧಶತಕ (ಅಜೇತ 51; 23ಎ, 4X2, 6X5) ಗಳಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು.

ಸಂಕ್ಷಿಪ್ತ ಸ್ಕೋರು: ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 6ಕ್ಕೆ 208 (ಓಂಕಾರ ವರ್ಣೇಕರ್ 51, ಸ್ವಪ್ನಿಲ್ ಯಳವೆ 40, ಪಾರ್ಥ ಪಾಟೀಲ 36,  ವಿಜಯ್ 36; ಆಕಾಶ ಪತ್ತಾರ 44ಕ್ಕೆ 3, ರೋಹನ್ ಯರೆಶೀಮಿ 21ಕ್ಕೆ 1). ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌: 20 ಓವರ್‌ಗಳಲ್ಲಿ 5ಕ್ಕೆ 211 (ಅಜೀಮ್ ಜಿ 90, ಸುಧನ್ವ ಕುಲಕರ್ಣಿ 59, ಆಕಾಶ ಪತ್ತಾರ 25; ಪಾಟೀಲ ರೋಹಿತ್ 52ಕ್ಕೆ 2). 

ಬಹುಮಾನ ವಿತರಣೆ

ವಿಜೇತ ತಂಡ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ಗೆ ₹75 ಸಾವಿರ ಮತ್ತು ಟ್ರೋಫಿ ರನ್ನರ್‌ ಅಪ್‌ ಆದ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ಗೆ ₹50 ಸಾವಿರ ಟ್ರೋಫಿ ಪ್ರದಾನ ಮಾಡಲಾಯಿತು. ಸೆಮಿಫೈನಲ್‌ನಲ್ಲಿ ತಲುಪಿದ್ದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಮತ್ತು ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿಗೆ ತಲಾ ₹20 ಸಾವಿರ ನೀಡಲಾಯಿತು. ಸುಧನ್ವ ಕುಲಕರ್ಣಿ ಉತ್ತಮ ಬ್ಯಾಟರ್‌ ಆಕಾಶ ಪತ್ತಾರ ಉತ್ತಮ ಬೌಲರ್‌ ಆರವ್‌ ಓಸ್ವಾಲ್ ಉತ್ತಮ ಫೀಲ್ಡರ್ ಸ್ವಪ್ನಿಲ್ ಯಳವೆ ಸರಣಿ ಶ್ರೇಷ್ಠ  ಪ್ರಶಸ್ತಿ ಪಡೆದರು.   ಶಾಲಿನಿ ಎಂಟರ್‌ಪ್ರೈಸಸ್‌ನ ದಿನೇಶ್‌ ಪೈ ಹ್ಯಾಂಗೊ ಐಸ್‌ಕ್ರೀಂನ ಬ್ರಯಾನ್ ಡಿಸೋಜಾ  ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ವೀರಣ್ಣ ಸವಡಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT