ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಚೆನ್ನೈ ಹೊಸ ರೈಲು: ತಿರುಪತಿಗೆ ತೆರಳಲು ಅನುಕೂಲ

ಹುಬ್ಬಳ್ಳಿ–ವಾರಣಾಸಿ ನಡುವೆ ರೈಲು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Last Updated 15 ಸೆಪ್ಟೆಂಬರ್ 2019, 13:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸದ್ಯಕ್ಕೆ ಹುಬ್ಬಳ್ಳಿಯಿಂದ–ವಾರಣಾಸಿಗೆ ವಾರಕ್ಕೆ ಒಂದು ಬಾರಿ ಸಂಚರಿಸುತ್ತಿರುವ ರೈಲನ್ನು, ಮೂರು ಬಾರಿ ಸಂಚರಿಸಲು ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಸುರೇಶ ಅಂಗಡಿ ಅವರು ಕೂಡ ಪ್ರಯತ್ನಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ–ಚೆನ್ನೈ ಹೊಸ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೊಸದಾಗಿ ಆರಂಭವಾಗಿರುವ ರೈಲನ್ನು ಪ್ರಯಾಣಿಕರ ಬೇಡಿಕೆ ನೋಡಿ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗುವುದು. ಈ ಭಾಗದ ಜನರಿಗೆ ವಾರಣಾಸಿಗೆ ಹೋಗಲು ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು’ ಎಂದರು.

‘ರೈಲ್ವೆ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ 2030ರ ವೇಳೆಗೆ ₹50 ಲಕ್ಷ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಿದೆ. ಹುಬ್ಬಳ್ಳಿ–ಚಿಕ್ಕಜಾಜೂರು ಜೋಡಿ ರೈಲು ಮಾರ್ಗ ಕಾಮಗಾರಿ ಬಾಕಿ ಉಳಿದಿದ್ದು, ಇದಕ್ಕೆ ಹಣದ ಕೊರತೆಯಿಲ್ಲ. ಕಾಮಗಾರಿ ಪೂರ್ಣಕ್ಕೆ ಸೂಕ್ತ ಯೋಜನೆ ರೂಪಿಸುವ ಎಂಜಿನಿಯರ್‌ಗಳು ಹಾಗೂ ತಂತ್ರಜ್ಞರ ಕೊರತೆ ಕಾಡುತ್ತಿದೆ. ಆದ್ದರಿಂದ ಹೆಚ್ಚೆಚ್ಚು ಕಾಮಗಾರಿ ನಡೆಸುವ ಜೊತೆಗೆ ಎಂಜಿನಿಯರ್‌ಗಳನ್ನು ಮತ್ತು ತಂತ್ರಜ್ಞರನ್ನು ರೂಪಿಸುವ ಪ್ರಯತ್ನ ಕೂಡ ಕೇಂದ್ರದ್ದಾಗಿದೆ’ ಎಂದರು.

‘2021ರ ವೇಳೆಗೆ ರಾಜ್ಯದಲ್ಲಿ ಜೋಡಿ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಹುಬ್ಬಳ್ಳಿಯಿಂದ ನಾಲ್ಕರಿಂದ ನಾಲ್ಕೂವರೆ ಗಂಟೆಯಲ್ಲಿ ಬೆಂಗಳೂರು ತಲುಪುವಂತಾಗಬೇಕು’ ಎಂದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ‘2020ರ ಒಳಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಇನ್ನೆರಡು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು. ಇದೇ ಅವಧಿಯಲ್ಲಿ ಹುಬ್ಬಳ್ಳಿ, ಬೆಳಗಾವಿ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಎಲ್ಲ ರೈಲುಗಳಲ್ಲಿ ಜೈವಿಕ ಶೌಚಾಲಯ ಆರಂಭಿಸಲಾಗಿದೆ. ಸಾಮಾನ್ಯ ದರ್ಜೆಯ ಬೋಗಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು.

ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸ್ವಚ್ಛವಾಗಿಲ್ಲ ಎನ್ನುವ ದೂರು ಕೇಳಿಬಂದಿದ್ದು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ‘ನಮ್ಮ ಭಾಗದವರೇ ಕೇಂದ್ರಮಂತ್ರಿಯಾಗಿದ್ದಾರೆ. ಪಕ್ಷಬೇಧ ಮರೆತು ಹೆಚ್ಚೆಚ್ಚು ಯೋಜನೆಗಳನ್ನು ಉತ್ತರ ಕರ್ನಾಟಕಕ್ಕೆ ತರಬೇಕು. ಅಂಗಡಿಯವರು ಬೆಳಗಾವಿಯತ್ತ ಮಾತ್ರ ಗಮನ ಹರಿಸದೇ, ಹುಬ್ಬಳ್ಳಿಗೂ ರೈಲಿನ ಸೌಲಭ್ಯಗಳನ್ನು ಒದಗಿಸಬೇಕು. ರಾಣಿ ಚನ್ನಮ್ಮ ರೈಲಿಗೆ ಮೊದಲು ಹೊಸ ಬೋಗಿಗಳನ್ನು ಅಳವಡಿಸಬೇಕು’ ಎಂದು ಮನವಿ ಮಾಡಿದರು.

ಸಂಸದರಾದ ಕರಡಿ ಸಂಗಣ್ಣ, ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯರಾದ ಪ್ರದೀಪ ಶೆಟ್ಟರ್‌, ಎಸ್‌.ವಿ. ಸಂಕನೂರು, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್ ಇದ್ದರು.

ಹುಬ್ಬಳ್ಳಿ–ಚೆನ್ನೈ ಹೊಸ ರೈಲಿಗೆ ಚಾಲನೆ

ಹುಬ್ಬಳ್ಳಿಯಿಂದ ಚೆನ್ನೈಗೆ ಹೊಸ ರೈಲು ಸಂಚಾರಕ್ಕೆ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಶನಿವಾರ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಈ ರೈಲು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹುಬ್ಬಳ್ಳಿಯಿಂದ ರಾತ್ರಿ 9.05ಕ್ಕೆ ತೆರಳಿ ಮರುದಿನ ಬೆಳಿಗ್ಗೆ 10.50ಕ್ಕೆ ಚೆನ್ನೈ ಸೆಂಟ್ರಲ್‌ ಮುಟ್ಟಲಿದೆ. ಗದಗ (ರಾತ್ರಿ 10.10), ಕೊಪ್ಪಳ (11.02), ಹೊಸಪೇಟೆ (11.40), ಬಳ್ಳಾರಿ (ಬೆ. 1.25), ಗುಂತಕಲ್‌ (ಬೆ. 2.25), ಕಡಪ (5.13), ರೇಣಿಗುಂಟ (7.55) ಮತ್ತು ಅರಕ್ಕೋಣಂ (9.08) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಚೆನ್ನೈನಿಂದ ಪ್ರತಿ ಬುಧವಾರ ಹಾಗೂ ಶನಿವಾರ ಮಧ್ಯಾಹ್ನ 3 ಗಂಟೆಗೆ ಹೊರಡುವ ರೈಲು ಮರುದಿನ ಬೆಳಿಗ್ಗೆ 5.15ಕ್ಕೆ ಹುಬ್ಬಳ್ಳಿಗೆ ಬರಲಿದೆ.

ತಿರುಪತಿಗೆ ತೆರಳಲು ಅನುಕೂಲ

ತಿರುಪತಿಗೆ ತೆರಳ ಬಯಸುವವರಿಗೆ ಈ ರೈಲು ಅನುಕೂಲವಾಗಿದೆ. ರೇಣಿಗುಂಟ ನಿಲ್ದಾಣದ ತನಕ ಹೊಸ ರೈಲು ಹೋಗುತ್ತದೆ. ರೇಣಿಗುಂಟದಿಂದ 10 ಕಿ.ಮೀ. ದೂರದಲ್ಲಿ ತಿರುಪತಿಯಿದೆ. ಚೆನ್ನೈನಿಂದ ಹುಬ್ಬಳ್ಳಿಗೆ ಬರುವಾಗ ಈ ರೈಲು ರೇಣಿಗುಂಟಕ್ಕೆ ಸಂಜೆ 6.20ಕ್ಕೆ ಬರಲಿದೆ.

ಅ. 2ರಂದು ಹೊಸ ಪ್ರವೇಶ ದ್ವಾರ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ ಗದಗ ರಸ್ತೆಯಿಂದ ನಿಲ್ದಾಣಕ್ಕೆ ಹೊಸ ಪ್ರವೇಶ ದ್ವಾರ ಆರಂಭಿಸಬೇಕು ಎಂದು ಪ್ರಹ್ಲಾದ ಜೋಶಿ ಎ.ಕೆ. ಸಿಂಗ್ ಅವರಿಗೆ ಸೂಚಿಸಿದರು. ಇದಕ್ಕೆ ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿದ ‘ಅ. 2ರಿಂದಲೇ ಪ್ರವೇಶ ದ್ವಾರ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT