ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬಂಟಿ ಹೋರಾಟಗಾರನಿಗೆ ನೂರರ ಸಂಭ್ರಮ

Last Updated 13 ಜನವರಿ 2019, 13:39 IST
ಅಕ್ಷರ ಗಾತ್ರ

ನೂರು ವರ್ಷ ಪೂರೈಸಿರುವ ಡಾ. ಪಾಟೀಲ ಪುಟ್ಟಪ್ಪ ವ್ಯಕ್ತಿಯಲ್ಲ ಶಕ್ತಿ. ಕರ್ನಾಟಕದ ನಾಡು– ನುಡಿ, ಸಂಸ್ಕೃತಿ ರಕ್ಷಣೆ, ರಾಜ್ಯ ರಾಜಕಾರಣದ ಮೇಲೆ ಅವರಷ್ಟು ಪ್ರಭಾವ ಬೀರಿದವರು ಮತ್ತೊಬ್ಬರಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ನಾನು ಪುಟ್ಟಪ್ಪ ಅವರನ್ನು 50 ವರ್ಷಗಳಿಂದ ಬಲ್ಲೆ. ಕಾಲೇಜು ಓದಲು 1956ರಲ್ಲಿ ಹುಬ್ಬಳ್ಳಿಗೆ ಬಂದಾಗ ಅವರ ಪರಿಚಯವಾಯಿತು. ಆಗಲೇ ಅವರದ್ದು ದೊಡ್ಡ ವ್ಯಕ್ತಿತ್ವ. ನಮ್ಮಂತಹ ಕಾಲೇಜು ಹುಡುಗರು ದೂರದಿಂದಲೇ ಅವರನ್ನು ನೋಡಿ ನಮಸ್ಕಾರ ಹಾಕಿ ಹೋಗುವಂತಹ ಸ್ಥಿತಿ. ಪತ್ರಿಕೋದ್ಯಮಿಯಾಗಿ ಅದಾಗಲೇ ಅವರು ಖ್ಯಾತರಾಗಿದ್ದರು.

1968ರಲ್ಲಿ ನಾನು ವೃತ್ತಿನಿರತ ಪತ್ರಕರ್ತನಾಗಿ ಹುಬ್ಬಳ್ಳಿಗೆ ಬಂದಾಗ ಪತ್ರಿಕಾಗೋಷ್ಠಿಗಳಲ್ಲಿ ಅವರಿಗೆ ಪ್ರಶ್ನೆ ಕೇಳುವ, ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ಕಾಲೇಜು ದಿನಗಳಲ್ಲಿ ನೋಡಿದ ಪುಟ್ಟಪ್ಪ ಬದಲಾಗಿರಲಿಲ್ಲ. ತುಂಬ ಇಂಟಲಿಜೆಂಟ್ ಆಗಿದ್ದ ಅವರು ಮಾಹಿತಿಯ ಆಗರವಾಗಿದ್ದರು.

ಉತ್ಸಾಹದ ಚಿಲುಮೆ: ಅವರ ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಡಬೇಕು, ಅವರನ್ನು ಹೇಗೆ ವರ್ಣಿಸಬೇಕು ಎಂಬ ಪ್ರಶ್ನೆ ಮೂಡಿದಾಗ ದಿಗ್ಭ್ರಮೆಯಾಗುತ್ತದೆ. ಅವರನ್ನು ಹಿರಿಯರೆನ್ನಬೇಕೇ, ಕಿರಿಯ ಎನ್ನಬೇಕೇ ಎಂಬ ಜಿಜ್ಞಾಸೆ. ವಯಸ್ಸಾಗಿದೆ, ನಡೆಯಲು ಸಹ ಸಹಾಯ ಪಡೆಯುತ್ತಾರೆ ಎಂಬ ಕಾರಣಕ್ಕೆ ಹಿರಿಯರು. ಆದರೆ, ಅವರ ಚಟುವಟಿಕೆ ಗಮನಿಸಿದರೆ ಕಿರಿಯರಿಗಿಂತ ಕಿರಿಯ.

ರಾಜ್ಯವನ್ನು ಅವರಷ್ಟು ಸುತ್ತಾಡಿದ ಇನ್ನೊಬ್ಬರಿಲ್ಲ. ಎಷ್ಟು ಚಟುವಟಿಕೆ ಎಂದರೆ ‘ಸಿಎಂಗಿಂತ ಬ್ಯೂಸಿಯಾಗಿರ್ತೀರ, ಭೇಟಿಯಾಗಲು ಸಹ ಸಾಧ್ಯವಾಗುವುದಿಲ್ಲ’ ಎಂದು ನಾನು ಯಾವಾಗಲೂ ಅವರನ್ನು ತಮಾಷೆ ಮಾಡುತ್ತೇನೆ. ಅವರ ಸಾರ್ವಜನಿಕ ಕಾರ್ಯಕ್ರಮಗಳಿಗೂ ತೆರಪಿಲ್ಲ. ಅವರಲ್ಲಿರುವುದು ಅದಮ್ಯ ಚೇತನ. ಹಿರಿಯರಿರಲಿ ಕಿರಿಯರಿರಲಿ ಅಂತಹ ಚೇತನ ಇನ್ನೊಂದಿಲ್ಲ.

ಅವರು ರಾಜಕಾರಣಿಯೋ ಅಲ್ಲವೋ ಎಂಬ ಜಿಜ್ಞಾಸೆಯೂ ಇದೆ. ರಾಜಕಾರಣದಲ್ಲಿ ಇದ್ದಾರೆ ಎಂದರೆ ಇದ್ದಾರೆ, ಇಲ್ಲ ಎಂದರೆ ಇಲ್ಲ. ಯಾವ ಪಕ್ಷದಲ್ಲಿಯೂ ಗುರುತಿಸಿಕೊಂಡವರಲ್ಲ. ರಾಜಕಾರಣಿಗಳ ಜೊತೆ ಇರುವುದರಿಂದ ಹಾಗೂ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುವುದರಿಂದ ಅವರನ್ನು ರಾಜಕಾರಣಿ ಎನ್ನಬೇಕು. 12 ವರ್ಷ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಅದನ್ನು ಬಿಟ್ಟರೆ, ಬೇರೆ ಯಾವ ಹುದ್ದೆಗಳನ್ನು ಹಿಡಿಯಲಿಲ್ಲ, ಬಯಸಲೂ ಇಲ್ಲ.

60ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು, ಆದರೆ ಅವರು ಪಕ್ಷದ ಸದಸ್ಯರಾಗಿರಲಿಲ್ಲ. ದೆಹಲಿ ಆಗಲಿ ಬೆಂಗಳೂರಾಗಲಿ ಎಲ್ಲ ಪಕ್ಷಗಳ ರಾಜಕೀಯ ಮುಖಂಡರ ಹೆಸರು ಹಿಡಿದು ಮಾತನಾಡಿಸುವಷ್ಟು ಸಂಪರ್ಕ– ಸಲುಗೆ ಇತ್ತು. ನಿಜಲಿಂಗಪ್ಪ ಒಡನಾಡಿಯಾಗಿದ್ದ ಕಾರಣ ಹೆಚ್ಚು ರಾಜಕೀಯ ಸಂಪರ್ಕ ಇತ್ತು. ರಾಜ್ಯದಮೊದಲ ಮುಖ್ಯಮಂತ್ರಿಯಿಂದ ಹಿಡಿದು ಈಗಿನ ಕುಮಾರಸ್ವಾಮಿ ಅವರ ವರೆಗೆ ಎಲ್ಲ ಸಿಎಂಗಳ ಒಡನಾಟ– ಪರಿಚಯ ಅವರಿಗಿದೆ. ಅವರ ಮಾತನ್ನು ತೆಗೆದು ಹಾಕುವ ದಾರ್ಷ್ಟ್ಯವನ್ನು ಯಾರ ಮುಖ್ಯಮಂತ್ರಿಯೂ ತೋರಿಲ್ಲ. ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಇವರೇ ಮುಖ್ಯಮಂತ್ರಿ ರೀತಿ ಇದ್ದರು. ಆದರೆ ಅವರು ರಾಜಕಾರಣಿಯಲ್ಲ.

ಸಾಮಾಜಿಕ ಕಾರ್ಯಕರ್ತ: ಪಾಪು ಸಾಮಾಜಿಕ ಕಾರ್ಯಕರ್ತರೇ ಎಂಬ ಪ್ರಶ್ನೆಗೆ ಸಹ ಹೌದು, ಇಲ್ಲ ಎಂಬ ಉತ್ತರ ನೀಡಬೇಕಾಗುತ್ತದೆ. ಸಾಮಾಜಿಕ ಹಾಗೂ ಪ್ರಚಲಿತ ಸಮಸ್ಯೆಗಳನ್ನು ಅವರು ಸರ್ಕಾರದ ಬಳಿಕೊಂಡೊಯ್ದು ಹೋರಾಡುತ್ತಲೇ ಇರುತ್ತಾರೆ. ಆದರೆ ಯಾವುದೇ ಸಂಘ– ಸಂಸ್ಥೆಗಳೂ ಅವರ ಹತ್ತಿರವಿಲ್ಲ. ಗೋಕಾಕ್ ಚಳವಳಿಯ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದದ್ದು ಚಾರಿತ್ರಿಕ ಎನ್ನಬಹುಹದು. ಬರಿಗೈಯಿಂದ ಆ ಹೋರಾಟ ಆರಂಭವಾಯಿತು. ಆದರೆ ಸರ್ಕಾರವನ್ನು ಬಗ್ಗಿಸುವಷ್ಟು ಸಫಲವಾಯಿತು. ನಟ ರಾಜಕುಮಾರ ಅವರನ್ನು ಸಹ ಈ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಮುಖ್ಯಮಂತ್ರಿ ಗುಂಡೂರಾವ್ ಅವರು ಜನರ ಭಾವನೆಗಳಿಗೆ ಸ್ಪಂದಿಸುವಂತೆ ಮಾಡುವಲ್ಲಿ ಅದು ಯಶಸ್ವಿಯಾಯಿತು. ಇಂಗ್ಲಿಷ್ ಪತ್ರಿಕೆಗಳು ಕನ್ನಡ ಭಾಷೆಯ ಚಳವಳಿಗೆ ಬಹಳ ನೆರವಾದವು. ಸ್ವತಃ ಪಾಟೀಲ ಪುಟ್ಟಪ್ಪ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ವಿಷಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸದುರ್ಗದ ಉಪ ಚುನಾವಣೆಯಲ್ಲಿ ಕನ್ನಡದ ಅಭ್ಯರ್ಥಿ ಹಾಕಬೇಕು ಎಂಬ ಪ್ರಸ್ತಾಪ ಬಂದರೂ, ಇದು ಚಳವಳಿಯ ವಿಷಯವಲ್ಲ ಎಂದು ಪುಟ್ಟಪ್ಪ ಹೇಳುವ ಮೂಲಕ ರಾಜಕೀಯ ವಿವೇಕ ತೋರಿದರು.

ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪುಟ್ಟಪ್ಪ ಅವರನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದರು. ಆದರೆ ಕಾವಲು ಸಮಿತಿಯ ಅಧ್ಯಕ್ಷರಿಗೆ ಇರುವ ಅಧಿಕಾರ ಏನೆಂಬುದು ಲಿಖಿತವಾಗಿರಲಿಲ್ಲ. ಕೇವಲ ಒಂದು ರೂಪಾಯಿ ಸಂಬಳ ಪಡೆದ ಅವರು ರಾಜ್ಯವನ್ನು ಸುತ್ತಾಡಿ ಕನ್ನಡದ ಕೆಲಸ ಮಾಡಿದರು. ಮುಖ್ಯಮಂತ್ರಿಯ ಆಪ್ತ ಎಂಬ ಹೆಗ್ಗಳಿಕೆ ಅವರಿಗಿತ್ತು. ಅದನ್ನೇ ಬಳಸಿಕೊಂಡು ಕನ್ನಡದ ಕೆಲಸ ಮಾಡಿದರು.

ಅಧಿಕಾರಿಗಳೂ ಅವರ ಮಾತಿಗೆ ಸ್ಪಂದಿಸುತ್ತಿದ್ದರು. ಆಡಳಿತದಲ್ಲಿ ಕನ್ನಡ ಜಾರಿ ಮಾಡಲು ಉದಾಸೀನ ತೋರಿದ ಅಧಿಕಾರಿಗಳಿಗೆ ಚಾಟಿ ಬೀಸಿದರು. ಹೆಗಡೆ ಅವರೊಂದಿಗಿನ ಸಾಂಗತ್ಯ ಇವೆಲ್ಲವನ್ನು ಸಾಧ್ಯವಾಗಿಸಿತು. ಈ ಮಾತನ್ನು ಪುಟ್ಟಪ್ಪ ಅವರೂ ಆಗಾಗ್ಗೆ ಹೇಳುತ್ತಿದ್ದರು. ‘ನಾನು ಹೆಗಡೆ ಅವರ ಆತ್ಮೀಯ ಅನ್ನೋದು ನನ್ನ ಬಲ ಆಯಿತು. ಅದೇ ಕಾರಣಕ್ಕೆ ಕನ್ನಡದ ಕೆಲಸವಾಯಿತು’ ಎಂದು ಅವರು ನೆನಪು ಮಾಡಿಕೊಳ್ಳುತ್ತಿದ್ದರು. ಕನ್ನಡದ ಕೆಲಸಕ್ಕಾಗಿ ಅವರು ಮಾಡಿದಷ್ಟು ಪತ್ರ ವ್ಯವಹಾರವನ್ನು ಯಾರೂ ಮಾಡಿಲ್ಲ. ಸಂಶೋಧನೆಯ ಉದ್ದೇಶಕ್ಕಾಗಿ ಆ ಪತ್ರಗಳನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ. ನೈರುತ್ಯ ರೈಲ್ವೆ ವಲಯ ಹೋರಾಟ ಆರಂಭಿಸಿದ್ದೂ ಅವರೇ ಮೊದಲೇ ಹೇಳಿದಂತೆ ಒಂಟಿಗೈ ಹೋರಾಟವದು.

ಅವರು ಪತ್ರಿಕೋದ್ಯಮಿಯೇ ಎಂಬ ಪ್ರಶ್ನೆಗೂ ಹೌದು– ಇಲ್ಲ ಎಂಬ ಉತ್ತರವೇ ಮನಸ್ಸಿಗೆ ಬರುತ್ತದೆ. ಅವರು ಹುಟ್ಟಿನಿಂದಲೂ ಸಂಪಾದಕರೇ ಆಗಿದ್ದರು. ಯಾರ ಕೈಕೆಳಗೂ ಕೆಲಸ ಮಾಡಲಿಲ್ಲ. ಮುಂಬೈನ ಫ್ರೀಪ್ರೆಸ್ ಜರ್ನಲ್‌ನ ಸದಾನಂದ ಅವರ ಮಾತಿಗೆ ಅವರು ಬೆಲೆಕೊಟ್ಟು ಮುಂಬೈನಲ್ಲೇ ಇದ್ದಿದ್ದರೆ, ಕರ್ನಾಟಕಕ್ಕೆ ಬರುವ ಅವಕಾಶ ಸಿಗುತ್ತಿರಲಿಲ್ಲ. ನವಯುಗ, ವಿಶ್ವವಾಣಿ ಪತ್ರಿಕೆಯನ್ನು ಅವರು ಆರಂಭಿಸಿದರು. ಆದರೆ ಪತ್ರಕರ್ತರನ್ನು ಅವರು ತರಬೇತುಗೊಳಿಸಿದರೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅವರು ಆರಂಭಿಸಿದ ಪತ್ರಿಕೆಗಳು ಈಗ ಅವರ ಹೆಸರಲ್ಲಿ ಇಲ್ಲ. ಅವರೇ ಆರಂಭಿಸಿದ ಕನ್ನಡದ ಮೊದಲ ಸಚಿತ್ರ ವಾರ ಪತ್ರಿಕೆ ‘ಪ್ರಪಂಚ’ ಇತಿಹಾಸ ನಿರ್ಮಿಸಿತು. ಆದರೂ ಕೆಲವು ಕಾರಣಗಳಿಂದಾಗಿ ಅದು ಬೆಳೆಯಲಿಲ್ಲ. ದುರ್ದೈವ ಎಂದರೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಬೇರೆ ಪತ್ರಿಕೆಗಳ ಮೊರೆ ಹೋಗಬೇಕಾಯಿತು.

ಮೌಖಿಕ ಇತಿಹಾಸ ದಾಖಲಾಗಲಿ: ರಾಜ್ಯ ರಾಜಕಾರಣದ ಮೌಖಿಕ ಇತಿಹಾಸ ಪುಟ್ಟಪ್ಪ. 1956 ಮೊದಲ್ಗೊಂಡು 1978ರ ವರೆಗೆ (ಅರಸು ಆಡಳಿತ) ಆದ ಎಲ್ಲ ರಾಜಕೀಯ ಘಟನೆಗಳನ್ನು ಅವರು ಹೇಳಬಲ್ಲರು. ನಿರ್ದಿಷ್ಟ ಘಟನೆಗೆ ಕಾರಣ ಯಾರು, ಅದು ಆ ರೀತಿ ಏಕಾಯಿತು ಎಂಬುದನ್ನು ಸಾಂದರ್ಭ ಸಹಿತ ತೆರೆದಿಡಬಲ್ಲರು. ಅವರ ನೆನಪಿನ ಇತಿಹಾಸ, ಒಳನೋಟವನ್ನು ಕರ್ನಾಟಕದ ಯಾವುದಾದರೂ ವಿಶ್ವವಿದ್ಯಾಲಯ ದಾಖಲಿಸಬೇಕು. ಇಲ್ಲವಾದರೆ ಇಂತಹ ರಾಜಕೀಯ ಇತಿಹಾಸದಿಂದ ವಂಚಿತರಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT