ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: 19 ವರ್ಷವಾದರೂ ಸಿಕ್ಕಿಲ್ಲ ಪರಿಹಾರ

ಗೋಲಿಬಾರ್‌ಗೆ ಬಲಿಯಾಗಿದ್ದ ಪತಿ; ಅಂಗವಿಕಲ ಮಗನೊಂದಿಗೆ ವಿಧವೆ ಪರದಾಟ
Last Updated 25 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗೋಲಿಬಾರ್‌ಗೆ ಪತಿ ಬಲಿಯಾಗಿ ಇಂದಿಗೆ 19 ವರ್ಷವಾಯಿತು. ಆದರೆ, ಗಂಡನ ಕಳೆದುಕೊಂಡ ಆ ವಿಧವೆಗೆ ಸರ್ಕಾರದಿಂದ ಪರಿಹಾರ ಮಾತ್ರ ಸಿಕ್ಕಿಲ್ಲ. ಕೈ ಮತ್ತು ಕಾಲಿನ ಸ್ವಾಧೀನವಿಲ್ಲದ 18 ವರ್ಷದ ಅಂಗವಿಕಲ ಮಗನೊಂದಿಗೆ ಇಂದಿಗೂ ಆ ತಾಯಿ ಪರಿಹಾರಕ್ಕಾಗಿ ಅಲೆಯುತ್ತಿದ್ದಾರೆ.

ಹುಬ್ಬಳ್ಳಿಯ ಶರಾವತಿನಗರದ ಹೇಮಾಬಾಯಿ ಮೆಹರವಾಡೆ ಪರಿಹಾರದ ನಿರೀಕ್ಷೆಯಲ್ಲಿರುವ ವಿಧವೆ.

2001ರ ಸೆಪ್ಟಂಬರ್15ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಶೋಕ್ ಸಿಂಘಾಲ್ ನೇತೃತ್ವದ ಕಾರ್ಯಕ್ರಮದಲ್ಲಿ ಗಲಭೆ ಸಂಭವಿಸಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ರಸ್ತೆ ಬದಿ ಶೇಂಗಾ ವ್ಯಾಪಾರ ಮಾಡುತ್ತಿದ್ದ ಹೇಮಾಬಾಯಿ ಪತಿ ಅಂಬಾಲಾಲ ಮೆಹರವಾಡೆ ಗಾಯಗೊಂಡು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

₹600 ವಿಧವಾ ವೇತನ ಮತ್ತು ಮಗನಿಗೆ ಬರುವ ₹1,400 ಅಂಗವಿಕಲ ಮಾಸಾಶನವೇ ಸದ್ಯ ಈ ಇಬ್ಬರ ಕುಟುಂಬಕ್ಕೆ ಆಧಾರವಾಗಿದೆ. ದಿನದ 14 ತಾಸು ಮಗನ ಕಾವಲು ಕಾಯಬೇಕಿರುವ ತಾಯಿ, ಬದುಕಿಗೆ ಪರಿಹಾರದ ಆಸರೆ ಸಿಗಬಹುದೇ ಎಂದು ಇಂದಿಗೂ ಎದುರು ನೋಡುತ್ತಿದ್ದಾರೆ.

ಸಿಕ್ಕಿದ್ದು ಕೇವಲ ಭರವಸೆ

‘ಪತಿ ತೀರಿಕೊಂಡ ಸಂದರ್ಭದಲ್ಲಿ ಜನಪ್ರತಿನಿಧಿಗಳಾದಿಯಾಗಿ ಎಲ್ಲರೂ ಬಂದು ಸಾಂತ್ವನ ಹೇಳಿ, ಪರಿಹಾರ ಕೊಡಿಸುವ ಭರವಸೆ ನೀಡಿದರು. ಆದರೆ, ಇಂದಿಗೂ ಬಿಡಿಗಾಸು ಸಿಕ್ಕಿಲ್ಲ. ಅಂಗವಿಕಲ ಮಗನನ್ನು ಕಟ್ಟಿಕೊಂಡು ರಾಜಕೀಯ ನಾಯಕರನ್ನು ಭೇಟಿ ಮಾಡಿ ಮನವಿ ಕೊಟ್ಟರೂ, ಕಚೇರಿಗಳಿಗೆ ಅಲೆದರೂ ಪ್ರಯೋಜನವಾಗಿಲ್ಲ’ ಎಂದು ಹೇಮಾಬಾಯಿ ಮೆಹರವಾಡೆ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಪಾಲಿಕೆಯವರು ಆಶ್ರಯ ಯೋಜನೆಯಡಿ ಜಗದೀಶ ನಗರದಲ್ಲಿ ಮನೆಯೊಂದನ್ನು ನೀಡಿದರು. ಆದರೆ, ಅದು ವಾಸಿಸಲು ಯೋಗವಿಲ್ಲವಾಗಿರುವುದರಿಂದ, ಪರಿಚಯಸ್ಥರ ಮನೆಯಲ್ಲಿ ಬಾಡಿಗೆ ಇದ್ದೇವೆ. ಇಬ್ಬರಿಗೂ ಸಿಗುವ ಮಾಸಾಶನದಿಂದಲೇ ಬದುಕು ದೂಡುತ್ತಿದ್ದೇವೆ’ ಎಂದರು.

‘ಮಗ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿರುತ್ತಾನೆ. ಆತನ ಚಿಕಿತ್ಸೆಗೆ ಹಣ ಹೊಂದಿಸುವುದೇ ಕಷ್ಟವಾಗಿದೆ. ವಿಧಿ ಇಲ್ಲದೆ ಮಗನನ್ನು ಮನೆಯಲ್ಲೇ ಬಿಟ್ಟು, ಮನೆಗೆಲಸ ಮಾಡುತ್ತಿದ್ದೇನೆ. ಸರ್ಕಾರದಿಂದ ಪರಿಹಾರ ಸಿಕ್ಕರೆ, ಇಬ್ಬರಿಗೂ ಅನುಕೂಲವಾದೀತು. ಇಲ್ಲದಿದ್ದರೆ, ನರಕದಲ್ಲೇ ಸಾಯಬೇಕಾಗುತ್ತದೆ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT