ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ ‌| ಅಕ್ರಮ ಮರಳು; ಕಾಣದ ಕಡಿವಾಣ

ರಿಯಲ್‌ ಎಸ್ಟೇಟ್‌ ಚೇತರಿಕೆ ಕಂಡರೂ ಮರಳು ಕೊರತೆ
Published 30 ಮೇ 2024, 0:18 IST
Last Updated 30 ಮೇ 2024, 2:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ರಿಯಲ್ ಎಸ್ಟೇಟ್‌ ಚೇತರಿಕೆ ಕಂಡಿದೆ. ಆದರೆ, ಅಗತ್ಯಕ್ಕೆ ತಕ್ಕಂತೆ ಮರಳು ಸಿಗುತ್ತಿಲ್ಲ. ನದಿ,ಹಳ್ಳ, ಕೆರೆಗಳ ದಡದಲ್ಲಿ ನೈಸರ್ಗಿಕ ಮರಳಿದೆ. ಆದರೆ, ಗ್ರಾಹಕರಿಗೆ ತಲುಪುತ್ತಿಲ್ಲ. ಮರಳು ಸುಲಭವಾಗಿ ‘ಸಿಗದ’ ರೀತಿ ವ್ಯವಸ್ಥಿತ ಷಡ್ಯಂತ್ರ ನಡೆದಿದೆ; ಈ ಷಡ್ಯಂತ್ರವನ್ನು ಬಯಲಿಗೆ ತರುವ ಪ್ರಯತ್ನವೇ ನಡೆದಿಲ್ಲ.

ರಾಜ್ಯದಲ್ಲಿ ವರ್ಷಕ್ಕೆ 4.50 ಕೋಟಿ ಟನ್‌ ಮರಳು ಬೇಕು. ಕಟ್ಟಡ ನಿರ್ಮಾಣಕ್ಕೆ ನೈಸರ್ಗಿಕ ಮರಳು ಸೂಕ್ತ ಎಂಬ ಕಾರಣಕ್ಕೆ ಅದಕ್ಕೆ ಹೆಚ್ಚು ಬೇಡಿಕೆಯಿದೆ. ಪ್ರಸ್ತುತ, 1 ಟನ್‌ ಮರಳಿಗೆ ಅಂದಾಜು ದರ ₹3 ಸಾವಿರ
ಇದೆ. ಕೇಳಿದಷ್ಟು ಹಣ ಕೊಟ್ಟರೂ ಅಗತ್ಯ ಇರುವಷ್ಟು ಮರಳು ಸಿಗುತ್ತಿಲ್ಲ. ರಾಜ್ಯದಲ್ಲಿ 50 ಲಕ್ಷ ಟನ್‌ ಮಾತ್ರ ಮರಳು ಪೂರೈಕೆಆಗುತ್ತಿದೆ.

ಫಿನಿಷಿಂಗ್‌ ಹಾಗೂ ಕಾಂಕ್ರೀಟ್‌ಗೆ ಮಾತ್ರ ನೈಸರ್ಗಿಕ ಮರಳು, ಇನ್ನುಳಿದ ಕೆಲಸಕ್ಕೆ ಎಂ–ಸ್ಯಾಂಡ್‌ ಬಳಕೆಯಾಗುತ್ತದೆ. ರಾಜ್ಯದಲ್ಲಿ ಎಂ–ಸ್ಯಾಂಡ್‌ ತಯಾರಿಸುವ 648 ಕ್ರಷರ್‌ ಘಟಕಗಳಿವೆ. ಅವುಗಳಲ್ಲಿ ಬಹುತೇಕ ಘಟಕಗಳು ರಾಜಕೀಯ ನಾಯಕರು ಮತ್ತು ಅವರ ಹಿಂಬಾಲಕರಿಗೆ ಸೇರಿದವು. ಈ ಮರಳಿನ ಗುಣಮಟ್ಟ ಪರೀಕ್ಷಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಹೀಗಾಗಿ ಅದರ ಗುಣಮಟ್ಟದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಲ್ಲ.

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ ಯಂತಹ ನಗರಗಳಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಎಂ–ಸ್ಯಾಂಡ್‌ ಬಳಕೆಯಾ ಗುತ್ತದೆ. ಇಷ್ಟಾಗಿಯೂ ಮರಳಿನ ಕೊರತೆ ನೀಗುತ್ತಿಲ್ಲ. ಎಂ– ಸ್ಯಾಂಡ್‌ ಘಟಕಗಳಿಂದ ಅಲ್ಲದೇ ಹೊರರಾಜ್ಯಗಳಿಂದ ಮರಳು ತರಿಸಿಕೊಂಡರೂ, ಅಂದಾಜು 80 ಲಕ್ಷ ಟನ್‌ ಮರಳಿನ ಕೊರತೆ ಇದೆ.

ಮರಳು ನೀತಿ ವಿಫಲ: ನದಿ, ಹಳ್ಳ, ಕೊಳ್ಳ, ಕೆರೆಗಳ ದಡದಲ್ಲಿ ಸಿಗುವ ಮರಳು ಸಂಗ್ರಹಣೆ ಸೇರಿ ಅದರ ಸಾಗಣೆ ಮೇಲಿರುವ ‘ಮಾಫಿಯಾ’ ಹಿಡಿತ ತಪ್ಪಿಸಲು ಮತ್ತು ಜನರಿಗೆ ಸಲೀಸಾಗಿ ಮರಳು ಸಿಗುವಂತೆ ಮಾಡಲು ರಾಜ್ಯ ಸರ್ಕಾರ 2020ರಲ್ಲಿ ಮರಳು ನೀತಿಗೆ ತಿದ್ದುಪಡಿ ಮಾಡಿತು. ಮರಳು ಗಣಿಗಾರಿಕೆಯ ಉಸ್ತುವಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವರ್ಗಾವಣೆ ಮಾಡಲಾಯಿತು. ಖಾಸಗಿ ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಯಿತು. ಇವು ಒಂದೆರಡು ಬದಲಾವಣೆಗಳನ್ನು ಹೊರತುಪಡಿಸಿದರೆ ಬೇರೆ ಮಹತ್ತರ ಬದಲಾವಣೆಯಾಗಲಿಲ್ಲ.

ಇಲಾಖೆಯಿಂದ ಪರ್ಮಿಟ್‌ ಪಡೆಯುವ  ಗುತ್ತಿಗೆದಾರರು, ಹತ್ತಾರು ಲಾರಿ ಮರಳು ಸಾಗಿಸುತ್ತಾರೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ಸೋರಿಕೆ ಆಗುತ್ತದೆ. ಅಕ್ರಮ ಮರಳು ಗಣಿಗಾರಿಕೆಗೂ ಕಡಿವಾಣ ಬಿದ್ದಿಲ್ಲ.

ಅಕ್ರಮ ತಡೆ ಸವಾಲು: ರಾಜ್ಯದ ಬಹುತೇಕ ಕಡೆ ಅಲ್ಲದೇ ರಾಯಚೂರು ಜಿಲ್ಲೆಯ ದೇವದುರ್ಗ, ಮಾನ್ವಿ, ಯಾದಗಿರಿ ಜಿಲ್ಲೆಯ ಕೃಷ್ಣಾ, ಭೀಮಾ ನದಿ ಪಾತ್ರದಲ್ಲಿ ಮರಳು ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ. ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಹುಣಸಗಿ, ಸುರಪುರ, ಶಹಾಪುರ, ವಡಗೇರಾ ತಾಲ್ಲೂಕು ಗಳಲ್ಲಿ ಟನ್ ಗಟ್ಟಲೇ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತದೆ. ಬೀದರ್ ಜಿಲ್ಲೆಯ ಔರಾದ್, ಭಾಲ್ಕಿ, ಹುಲಸೂರು ತಾಲ್ಲೂಕು ವ್ಯಾಪ್ತಿಯ ಮಾಂಜ್ರಾ ನದಿಯಲ್ಲಿ ಮರಳು ಅಕ್ರಮ ಸಾಗಣೆ ಎಗ್ಗಿಲ್ಲದೇ ನಡೆದಿದೆ ಎಂದು ಆಯಾ ಪ್ರದೇಶದಲ್ಲಿನ ಗ್ರಾಮಸ್ಥರೇ ಆರೋಪಿಸುತ್ತಾರೆ.

ತುಂಗಭದ್ರಾ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ತಾಲ್ಲೂಕಿನ ಕೇಸಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಳಿನ ಅಕ್ರಮ ಸಾಗಣೆ ನಿಯಂತ್ರಿಸಲಾಗಿಲ್ಲ. ಕಲಬುರಗಿ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿ ಪಾತ್ರದಲ್ಲಿ ಮರಳು ಅಕ್ರಮ ದಂಧೆ ಅವ್ಯಾಹತವಾಗಿ ನಡೆದಿದೆ. ಇದಕ್ಕೆಲ್ಲ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೃಪಾಕಟಾಕ್ಷವೇ ಕಾರಣ ಎಂದು ಗ್ರಾಮಸ್ಥರು ಬೇಸರದಿಂದ ಹೇಳುತ್ತಾರೆ.

ನೆರೆಯ ರಾಜ್ಯಗಳಿಗೆ ಸಾಗಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25 ಮರಳು ಬ್ಲಾಕ್‌ಗಳಿದ್ದರೂ ಅಗತ್ಯ ಇರುವಷ್ಟು ಮರಳು ಸಿಗುತ್ತಿಲ್ಲ. ಮರಳು ಅಕ್ರಮ ಗಣಿಗಾರಿಕೆಗೆ ಆಸ್ಪದ ನೀಡಿದೆ. ನಿಷೇಧ ಇದ್ದರೂ ಪಕ್ಕದ ಕೇರಳ ರಾಜ್ಯಕ್ಕೆ ಇಲ್ಲಿಂದ ಮರಳು ಸಾಗಿಸಲಾಗುತ್ತದೆ. ಇದೇ ರೀತಿ ಕಾರವಾರದಿಂದ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಿಸಲಾಗುತ್ತದೆ. 

ಉತ್ತರ ಕನ್ನಡ ಜಿಲ್ಲೆಯ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿ ನದಿಗಳಲ್ಲಿ ಮರಳುಗಾರಿಕೆ ನಡೆಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಆದರೂ ನಿಯಮ ಉಲ್ಲಂಘಿಸಿ ಈ ಪ್ರದೇಶಗಳಲ್ಲೂ ರಾತ್ರೋ ರಾತ್ರಿ ಅಕ್ರಮವಾಗಿ ಮರಳು ತೆಗೆಯಲಾ ಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕ್ರಮ ವಹಿಸುತ್ತಿಲ್ಲ ಎಂದು ಜನರು ದೂರುತ್ತಾರೆ.

ಕಠಿಣ ಕ್ರಮವಿಲ್ಲ: ಕಳೆದ ವರ್ಷ ಮರಳು ತಪಾಸಣೆ ಮತ್ತು ನಿಯಂತ್ರಣ ಮಾಡದ ಕಾರಣ ಯಾದಗಿರಿ ಜಿಲ್ಲೆಯ ಕೊಳ್ಳೂರು (ಎಂ) ಗ್ರಾಮದ ಚೆಕ್ ಪೋಸ್ಟ್ ಅಧಿ ಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದು ಹೊರತುಪಡಿಸಿದರೆ ಕಠಿಣ ಕ್ರಮ ಕೈಗೊಂಡ ಉದಾಹರಣೆ ಇಲ್ಲ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಭೀಮಾ ನದಿ ತೀರದ ಜಮೀನಿನಲ್ಲಿ ಸಂಗ್ರಹಿಸಿದ್ದ ₹7.50 ಲಕ್ಷ ಮೌಲ್ಯದ ಮರಳು ವಶಕ್ಕೆ ಪಡೆದ ಪೊಲೀಸರು, ಏಳು ಮಂದಿ ಜಮೀನು ಮಾಲೀಕರ ವಿರುದ್ಧ ಪ್ರಕರಣ ದಾಖ ಲಿಸಿದ್ದರು. ಮರಳು ಅಕ್ರಮ ದಂಧೆಯಲ್ಲಿ ತೊಡಗಿದ್ದವರ ಜೊತೆಗೆ ವ್ಯವಹಾರ ಇರಿಸಿಕೊಂಡ ಆರೋಪದಡಿ ದೇವಲ ಗಾಣಗಾಪುರ ಠಾಣೆಯ ಕಾನ್‌ಸ್ಟೆಬಲ್ ಒಬ್ಬರನ್ನು ಈಚೆಗಷ್ಟೇ ಅಮಾನತು ಮಾಡಲಾಗಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಮಾಫಿಯಾದ ಪ್ರತಿಬಿಂಬವಾಗಿದೆ.

2017ರಲ್ಲಿ ವಿದೇಶದಿಂದ ಮರಳನ್ನು ಆಮದು ಮಾಡಿಕೊಂಡು, ಮಾರಲು ಅವಕಾಶ ಕಲ್ಪಿಸಲಾಗಿತ್ತು. ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ (ಎಂಎಸ್‌ಐಎಲ್‌) ಮತ್ತು ಇತರ ಎಂಟು ಖಾಸಗಿ ಕಂಪನಿಗಳು ವಿದೇಶದಿಂದ ಮರಳು ಆಮದು ಪರವಾನಗಿ ಪಡೆದಿವೆ. ಈ ಪೈಕಿ, ಎಂಎಸ್‌ಐಎಲ್‌, ಚೆನ್ನೈನ ಕಂಪನಿಗಳಾದ ಇಂಟೆಗ್ರೇಟೆಡ್‌ ಸರ್ವಿಸ್‌ ಪಾಯಿಂಟ್‌, ಟಿಎಂಟಿ ಮತ್ತು ಆಕಾರ್‌ ಎಂಟರ್‌ಪ್ರೈಸಸ್‌ ಕಂಪನಿಗಳು ಮಾತ್ರ ಆಮದು ಮಾಡಿವೆ.

ಮಲೇಷ್ಯಾದಿಂದ ಎಂಎಸ್‌ಐಎಲ್‌ ಎರಡು ಬಾರಿ ಒಟ್ಟು 1.03 ಲಕ್ಷ ಟನ್‌ ಮರಳು ಆಮದು ಮಾಡಿಕೊಂಡಿದೆ. ಅದರಲ್ಲಿ 14,750 ಟನ್‌ ಮಾತ್ರ ಮಾರಾಟವಾಗಿದೆ. ಉಳಿದ 89 ಸಾವಿರ ಟನ್‌ ಕೃಷ್ಣಪಟ್ಟಣಂ ಬಂದರಿನಲ್ಲಿದೆ. ಮರಳು ಆಮದಿಗೆ ಎಂಎಸ್‌ಐಎಲ್‌ ₹28 ಕೋಟಿ ವ್ಯಯ ಮಾಡಿದೆ. ಅದರ ಮಾರಾಟದಿಂದ ಸಂಗ್ರಹವಾಗಿರುವ ನಿರ್ವಹಣಾ ಶುಲ್ಕ ₹67.97 ಲಕ್ಷ.

ಬಂದರು ಕೊರತೆ ಇರುವುದರಿಂದ ಹಾಗೂ ಕರಾವಳಿ ಪ್ರದೇಶದಿಂದ ರಾಜ್ಯದ ಇತರ ಪ್ರದೇಶಗಳೆಡೆ ಮರಳು ಸಾಗಿಸಲು ಹೆಚ್ಚಿನ ವೆಚ್ಚ ತಗಲುವುದರಿಂದ ವಿದೇಶಿ ಮರಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.

‘2013ರ ನೀತಿ ಪುನಃ ಅಳವಡಿಸಿ’

‘2013ರ ಮರಳು ನೀತಿ ಪುನರ್‌ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ. ಬಿಜೆಪಿ ಅವಧಿಯಲ್ಲಿ ರೂಪಿಸಿದ ಅವೈಜ್ಞಾನಿಕ ನಿಯಮಗಳ ಫಲವಾಗಿ ಮರಳಿನ ಸಮಸ್ಯೆ ಹೆಚ್ಚಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ. 

‘ಮರಳು ತೆಗೆಯುವ ಸಾಂಪ್ರದಾಯಿಕ ಸಮುದಾಯಕ್ಕೆ ಪರವಾನಗಿ ನೀಡಬೇಕು. ಹೊಸದಾಗಿ ಅರ್ಜಿ ಕರೆದು ತಾತ್ಕಾಲಿಕ ಪರವಾನಗಿ ವಿತರಿಸಬೇಕು. ಗಣಿ ಮಂಜೂರಾತಿಗೆ ಪರಿಸರ ನಿರಾಕ್ಷೇಪಣಾ ಪತ್ರ ನೀಡಲು ಜಿಲ್ಲಾಮಟ್ಟದ ಸಮಿತಿ ರಚಿಸಿ, ಅನುಮತಿ ನೀಡಬೇಕು. ಕರಾವಳಿ ಜಿಲ್ಲೆ ನದಿಪಾತ್ರದಲ್ಲಿ ಸಿಆರ್‌ಜೆಡ್‌ ನಿಯಮದಂತೆ ಮರಳು ತೆಗೆಯಲು ಅವಕಾಶ ಕಲ್ಪಿಸಬೇಕು’ ಎಂದರು.

ಮರಳು ನೀತಿ ಸುಧಾರಣೆಗೆ ಸಲಹೆ

  • ಅಗತ್ಯಕ್ಕೆ ಬೇಕಾಗುವಷ್ಟು ಮರಳು ಬ್ಲಾಕ್‌ ಗುರುತಿಸಿ

  • ಮರಳು ಬ್ಲಾಕ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಜಿಪಿಎಸ್‌ ಅಳವಡಿಸಿ

  • ಮರಳು ಸಾಗಿಸುವ ಟ್ರಕ್‌ಗಳಿಗೆ ಜಿಪಿಎಸ್‌ ಅಳವಡಿಸಬೇಕು

  • ಪರವಾನಗಿ ವಿತರಣೆಯಲ್ಲಿ ಪಾರದರ್ಶಕತೆ ತರಬೇಕು

  • ಗಣಿ– ಭೂವಿಜ್ಞಾನ, ಪೊಲೀಸ್‌, ಕಂದಾಯ ಅಧಿಕಾರಿಗಳ ನಡುವೆ ಸಮನ್ವಯ

  • ಎಂ–ಸ್ಯಾಂಡ್‌ ಗುಣಮಟ್ಟ ಪರಿಶೀಲನೆಗೆ ಕ್ರಮ

ರಾಜ್ಯದಲ್ಲಿ ವಾರ್ಷಿಕ 4.50 ಕೋಟಿ ಟನ್‌ ಮರಳಿಗೆ ಬೇಡಿಕೆ ಇದೆ. 80 ಲಕ್ಷ ಟನ್‌ ಕೊರತೆ ನೀಗಿಸಲು ಎಂ–ಸ್ಯಾಂಡ್‌ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಎಸ್‌.ಎಸ್‌. ಮಲ್ಲಿಕಾರ್ಜುನ, ಗಣಿ ಸಚಿವ
ಕಟ್ಟಡ ನಿರ್ಮಾಣ ಕ್ಷೇತ್ರ ಚೇತರಿಕೆ ಹಾದಿಯಲ್ಲಿದೆ. ಆದರೆ, ಸಮರ್ಪಕವಾಗಿ ಮರಳು ಸಿಗದಿರುವುದರಿಂದ ತೊಂದರೆಯಾಗುತ್ತಿದೆ. ಮರಳು ನೀತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಪ್ರದೀಪ ರಾಯ್ಕರ್‌, ಅಧ್ಯಕ್ಷ, ಕ್ರೆಡೈ
ಮರಳು ನೀತಿ ಸಮರ್ಪಕವಾಗಿ ಜಾರಿಯಾಗಿಲ್ಲ. ವಿದೇಶಗಳಿಂದ ಮರಳು ತರಿಸುವುದಾಗಿ ನೀಡಿದ ಹೇಳಿಕೆ ಇನ್ನೂ ಸಾಕಾರಗೊಂಡಿಲ್ಲ. ಎಂ–ಸ್ಯಾಂಡ್‌ ಗುಣಮಟ್ಟವನ್ನು ಯಾರೂ ಪರೀಕ್ಷಿಸುತ್ತಿಲ್ಲ.
ಶಶಿಧರ ಕೊರವಿ, ಬಿಲ್ಡರ್‌, ಹುಬ್ಬಳ್ಳಿ

ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ (ಬೆಂಗಳೂರು), ಹುಬ್ಬಳ್ಳಿ, ಮಂಗಳೂರು, ಕಲಬುರಗಿ ಬ್ಯೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT