ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

‘ಸ್ಪೀಚ್ ಕನ್ವೇಯನರ್ ಹ್ಯುಮೆನಾಯ್ಡ್‌’ ಯಂತ್ರ ನಿರ್ಮಿಸಿದ ಧಾರವಾಡ ಐಐಐಟಿ ತಜ್ಞರು
Last Updated 24 ಸೆಪ್ಟೆಂಬರ್ 2022, 7:04 IST
ಅಕ್ಷರ ಗಾತ್ರ

ಧಾರವಾಡ: ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒಡಿಶಾ ಹಾಗೂ ಕರ್ನಾಟಕದ ಬುಡಕಟ್ಟು ಸಮುದಾಯದ ಭಾಷೆಗಳಿಗೆ ಅನುವಾದಿಸುವ ತಂತ್ರಾಂಶ ಹೊಂದಿರುವ ರೊಬೊವನ್ನು ಧಾರವಾಡದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಅಭಿವೃದ್ಧಿಪಡಿಸಿದೆ.

ಒಡಿಶಾ ಮೂಲದವರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 26ರಂದು ಐಐಐಟಿ ಧಾರವಾಡದ ನೂತನ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭದಲ್ಲಿ ಈ ರೊಬೊ ತನ್ನ ಸಾಮರ್ಥ್ಯ ಪ್ರದರ್ಶಿಸಲಿದೆ.

ಇಂಗ್ಲಿಷ್ ಭಾಷೆಯ ಮಾಹಿತಿಯನ್ನು ಈ ರೊಬೊ ಒಡಿಶಾದ ‘ಕುಯಿ’ ಮತ್ತು ‘ಮುಂಡಾರಿ’ ಭಾಷೆಗಳಿಗೆ ಹಾಗೂ ಕರ್ನಾಟಕದ ‘ಲಂಬಾಣಿ’ ಮತ್ತು ‘ಸೋಲಿಗ’ ಭಾಷೆಗಳಿಗೆ ಅನುವಾದಿಸುವ ಸಾಮರ್ಥ್ಯವನ್ನು ಈ‘ಸ್ಪೀಚ್ ಕನ್ವೇಯನರ್ ಹ್ಯುಮೆನಾಯ್ಡ್‌’ ಎಂಬ ಯಂತ್ರ ಹೊಂದಿದೆ. ಹಾಗೆಯೇ ಬುಡಕಟ್ಟು ಭಾಷೆಗಳ ಮಾಹಿತಿಯನ್ನು ಇಂಗ್ಲಿಷ್‌ಗೂ ಭಾಷಾಂತರಿಸಿ ಹೇಳಲಿದೆ. ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆಧಾರದಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ’ ಎಂದು ಸಂಸ್ಥೆಯ ಇಸಿಇ ವಿಭಾಗದ ಪ್ರಾಧ್ಯಾಪಕ ಹಾಗೂ ಯೋಜನೆಯ ಪ್ರಧಾನ ಪರೀಕ್ಷಕ ಡಾ. ಕೆ.ಟಿ.ದೀಪಕ್ ತಿಳಿಸಿದರು.

ಈ ರೊಬೊ ಅಭಿವೃದ್ಧಿಯಲ್ಲಿ ಹೈದರಾಬಾದ್ ಹಾಗೂ ಭುವನೇಶ್ವರ ಐಐಟಿ ಸಂಸ್ಥೆಗಳ ನೆರವೂ ಇದೆ. ಸಂಶೋಧನೆಯಲ್ಲಿ ಸಹಪರೀಕ್ಷಕ ಡಾ.ಪವನ್, ಡಾ.ಪ್ರಕಾಶ ಪವಾರ್ ಹಾಗೂ ಡಾ.ಸುಭಾಶಂಕರಪಾಡಿ ಕೆಲಸ ಮಾಡಿದ್ದಾರೆ. ಕೇಂದ್ರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಾಥಮಿಕ ಹಂತವಾಗಿ ₹44.53 ಲಕ್ಷ ಅನುದಾನ ನೀಡಿದೆ.

‘ಇಂಥ ಭಾಷಾನುವಾದ ತಂತ್ರಾಂಶ ಅಭಿವೃದ್ಧಿಯಿಂದ ಅಳಿವಿನಂಚಿನಲ್ಲಿರುವ ಜೀವವೈವಿಧ್ಯ, ಬುಡಕಟ್ಟು ಸಮುದಾಯದ ಸಂಗೀತ, ನೃತ್ಯ, ಕಲೆ, ಪರಂಪರೆ, ಸಂಸ್ಕೃತಿಯ ಮಾಹಿತಿ ಸಿಗಲಿದೆ. ಅದನ್ನು ಡಿಜಿಟಲ್ ರೂಪದಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯ. ಆ ಮೂಲಕ ಸಮುದಾಯಗಳ ಮಾಹಿತಿ ಹೊರಜಗತ್ತಿಗೂ ತಿಳಿಯಲಿದೆ. ಜತೆಗೆ ಸಂರಕ್ಷಣೆಯೂ ಸಾಧ್ಯವಾಗಲಿದೆ. ಇದರೊಂದಿಗೆ ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ಈ ಸಮುದಾಯಗಳಿಗೆ ತಿಳಿಸುವ ಕೆಲಸವೂ ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT