ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ರೈಲ್ವೆ: ಪಾರ್ಸಲ್‌ ಸಾಗಣೆ; ಮೇ ನಲ್ಲಿ ₹ 2.03 ಕೋಟಿ ಆದಾಯ ಗಳಿಕೆ

Last Updated 4 ಜೂನ್ 2021, 13:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಪಾರ್ಸಲ್‌ ಸಾಗಣೆಯಿಂದ ಮೇ ನಲ್ಲಿ ₹ 2.03 ಕೋಟಿ ಆದಾಯ ಗಳಿಸಿದೆ. ಪಾರ್ಸಲ್‌ನಲ್ಲಿ ಇದುವರೆಗೂ ಗಳಿಸಿದ ಗರಿಷ್ಠ ಆದಾಯ ಇದಾಗಿದೆ.

ಇದೇ ವರ್ಷದ ಏಪ್ರಿಲ್‌ನಲ್ಲಿ ಹುಬ್ಬಳ್ಳಿ ವಿಭಾಗ ₹ 1.44 ಕೋಟಿ ಗಳಿಸಿದ್ದು ಇದುವರೆಗಿನ ಗರಿಷ್ಠ ಆದಾಯವಾಗಿತ್ತು. 2020ರ ಅಕ್ಟೋಬರ್‌ ನಂತರದ ಪ್ರತಿ ತಿಂಗಳೂ ₹ 1 ಕೋಟಿಗಿಂತಲೂ ಹೆಚ್ಚು ಆದಾಯ ಗಳಿಸಿದೆ ಎಂದು ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಳಖೇಡೆ ತಿಳಿಸಿದ್ದಾರೆ.

‘ವ್ಯಾಪಾರಿಗಳು ಮತ್ತು ಕೈಗಾರಿಕೆಗಳ ಜೊತೆ ನಿಯಮಿತವಾಗಿ ಸಂಪರ್ಕ ಇಟ್ಟುಕೊಂಡ ಪರಿಣಾಮ ಪಾರ್ಸಲ್‌ ವಹಿವಾಟು ವೃದ್ಧಿಗೊಳ್ಳುತ್ತಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಪಾರ್ಸಲ್‌ ಸಾಗಣೆಗೆ ರೈಲ್ವೆ ಸಾರಿಗೆಯತ್ತ ಆಸಕ್ತಿ ಹೊಂದಿರುವುದನ್ನು ಇದು ತೋರಿಸುತ್ತದೆ. ಬಳಕೆಯಾಗದ ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಮತ್ತು ಆಟೋಮೊಬೈಲ್‍ಗಳ ಸಾಗಣೆಗೆ ಬಳಸುವ ಎನ್‌ಎಂಜಿ ರೇಕ್‍ಗಳನ್ನು ಪಾರ್ಸಲ್‌ ಸಾಗಣೆಗೆ ಬಳಸಿಕೊಳ್ಳುವುದೂ ಸೇರಿದಂತೆ ಹುಬ್ಬಳ್ಳಿ ವಿಭಾಗ ಹಲವು ಹೊಸ ಕ್ರಮಗಳನ್ನು ಕೈಗೊಂಡ ಪರಿಣಾಮ ಆದಾಯದಲ್ಲಿ ಏರಿಕೆ ಕಂಡಿದೆ‘ ಎಂದು ಮಾಳಖೇಡೆ ತಿಳಿಸಿದರು.

‘ಔಷಧಿಗಳು, ಮೀನು, ಟೈರ್‌ಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳನ್ನು ಸಾಗಿಸಿದೆ. ಹುಬ್ಬಳ್ಳಿ ವಿಭಾಗವು ವೇಳಾಪಟ್ಟಿ ನಿಗದಿಪಡಿಸಿದ ಪಾರ್ಸಲ್‌ ವಿಶೇಷ ರೈಲುಗಳನ್ನು ಓಡಿಸುತ್ತಿದ್ದು ಇವು ನಿಗದಿತ ಸಮಯಕ್ಕೆ ಗ್ರಾಹಕರಿಗೆ ತಲುಪುತ್ತಿವೆ. ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೈಯದ್ ಇಮ್ತಿಯಾಜ್ ಅಹಮದ್ ನೇತೃತ್ವದ ವಾಣಿಜ್ಯ ವಿಭಾಗದ ತಂಡದ ಶ್ರಮ ಇದರಲ್ಲಿ ಅಡಗಿದೆ‘ ಎಂದರು.

’ಹುಬ್ಬಳ್ಳಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತು ಗೋವಾ ರಾಜ್ಯಕ್ಕೆ ಸೇವೆ ಒದಗಿಸಲಾಗಿದೆ. ಮೇ ನಲ್ಲಿ ವಾಸ್ಕೋಡಗಾಮದಿಂದ ಗುವಾಹಟಿಗೆ ವಿಶೇಷ ಐದು ರೈಲುಗಳನ್ನು ಓಡಿಸಿ ₹ 87 ಲಕ್ಷ ಆದಾಯ ಗಳಿಸಿದೆ. ವಾಸ್ಕೋಡಗಾಮದಿಂದ ಹರಿಯಾಣದ ಖೋರಿಗೆ ರೈಲು ಚಲಾಯಿಸಿ ₹ 83 ಲಕ್ಷ ಆದಾಯ ಗಳಿಸಿದೆ‘ ಎಂದು ವಿವರಿಸಿದರು.

’ಹುಬ್ಬಳ್ಳಿ, ಕೊಪ್ಪಳ, ಹೊಸಪೇಟೆಗಳಿಂದ ಒಣ ಮತ್ತು ಶೈತ್ಯೀಕರಿಸಿದ ಮೀನು, ಕೊಪ್ಪಳ, ಹೊಸಪೇಟೆಯಿಂದ ಮನುಷ್ಯನ ಕೂದಲು, ಹುಬ್ಬಳ್ಳಿ ವಿಭಾಗದ ವಿವಿಧ ನಿಲ್ದಾಣಗಳಿಂದ ಮೋಟರ್ ಸೈಕಲ್‍ಗಳು, ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲಾಗಿದೆ. ಪ್ರಯಾಣಿಕ ವಿಶೇಷ ರೈಲುಗಳ ಲಗೇಜ್ ಬೋಗಿಗಳ ಮೂಲಕ ಹುಬ್ಬಳ್ಳಿ ಮತ್ತು ಧಾರವಾಡದಿಂದ ಮಾವಿನಹಣ್ಣುಗಳು ಮತ್ತು ಮೆಣಸಿನಕಾಯಿಯನ್ನು ಸಾಗಿಸಲಾಗಿದೆ‘ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT