ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಮುತ್ತಲ ಗ್ರಾಮದಲ್ಲಿ ಮೂಲಸೌಕರ್ಯ ಸಮಸ್ಯೆ: ತಪ್ಪದ ಗೋಳು

ಮುಳಮುತ್ತಲ ಗ್ರಾಮದ ಅಭಿವೃದ್ಧಿಗೆ ತೊಂದರೆ: ಜನರ ಪರದಾಟ
ರಮೇಶ ಓರಣಕರ
Published 10 ಜುಲೈ 2024, 5:58 IST
Last Updated 10 ಜುಲೈ 2024, 5:58 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಕುರುಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 3 ಸಾವಿರ ಜನಸಂಖ್ಯೆ ಇರುವ ಮುಳಮುತ್ತಲ ಗ್ರಾಮವು ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕುರುಬಗಟ್ಟಿಯ ಆರು, ಮಂಗಳಗಟ್ಟಿಯ ಐದು ಹಾಗೂ ಮುಳಮುತ್ತಲದ ಆರು ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಒಟ್ಟು 17 ಸದಸ್ಯರನ್ನೊಳಗೊಂಡ ಒಂದು ಗ್ರಾಮ ಪಂಚಾಯ್ತಿ ಇದೆ.

ಮುಳಮುತ್ತಲ ಗ್ರಾಮದ ಕೆರೆಯ ಪಕ್ಕದಲ್ಲಿ ಬಸ್ ನಿಲ್ದಾಣವಿದ್ದು, ಕಟ್ಟಡದ ಹಿಂಬದಿಯ ಗೋಡೆ ಒಡೆದು ಚಾವಣಿಯ ಸಿಮೆಂಟ್‌ ತಗಡು ಕುಸಿದಿದೆ. ಮುಂಭಾಗದ ರಸ್ತೆ ಎತ್ತರದಲ್ಲಿದ್ದು, ಮಣ್ಣು ಮಿಶ್ರಿತ ನೀರು ಹರಿದು ಬಂದು ಒಳ ನುಗ್ಗಿ, ಕೆಸರು ಗದ್ದೆಯಂತಾಗಿದೆ. ಒಳಗಡೆ ಕುಳಿತುಕೊಳ್ಳಲು ಕಟ್ಟೆ ಕಟ್ಟಲಾಗಿದ್ದು, ಮೇಲ್ಮೈಗೆ ಹಾಕಲಾದ ಕಲ್ಲಿನ ಪರ್ಶಿ ಕಿತ್ತು, ದೂಳಿನಿಂದ ಕೂಡಿವೆ. ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲು. ಕುಳಿತುಕೊಳ್ಳಲಾಗದಂತಹ ಪರಿಸ್ಥಿತಿ ಇದೆ.

ಜಿಲ್ಲಾ ಪಂಚಾಯತಿ ಅಡಿಯಲ್ಲಿ ₹ 11 ಲಕ್ಷ ವೆಚ್ಚದಲ್ಲಿ ಕಾಳಿನ (ಧಾನ್ಯ) ಗೋದಾಮು ಕಟ್ಟಡ ನಿರ್ಮಿಸಲು ಆರಂಭಿಸಲಾಗಿತ್ತು. ಈಚೆಗಿನ ಕೆಲ ವರ್ಷಗಳಿಂದ ಗೋದಾಮು ಕಟ್ಟಡ ಕೆಲಸ ಅರ್ಧಕ್ಕೆ ನಿಂತಿದ್ದು, ಅಪೂರ್ಣವಾಗಿದೆ. ಇಲ್ಲಿಯವರೆಗೆ ₹ 6.75 ಲಕ್ಷದ ಕಾಮಗಾರಿಯಷ್ಟೇ ನಡೆದಿದೆ.

ಅಮೃತ ಗ್ರಾಮ ಪಂಚಾಯ್ತಿ ಯೋಜನೆಯಡಿ ಆಯ್ಕೆಯಾದ ವೇಳೆಯಲ್ಲಿ ಕೆರೆಯ ಪುನಶ್ಚೇತನ, ಸುತ್ತಲಿನ 160 ಮೀಟರ್‌ ವ್ಯಾಪ್ತಿಯಲ್ಲಿ ಉದ್ಯಾನ ಮತ್ತು ತಡೆಗೋಡೆ ಸಹಿತ ಜಾಳಿಗೆ ತಂತಿ ಅಳವಡಿಸುವ ₹ 9.60 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಳ್ಳಹಿಡಿದಿದೆ.

ಮೇಲ್ಮಟ್ಟದ ಕುಡಿಯುವ ನೀರಿನ ಜಲಸಂಗ್ರಹದ ಟ್ಯಾಂಕ್ ಕಟ್ಟಡ ಅಲ್ಲಲ್ಲಿ ಒಡೆದು ಶಿಥಿಲಗೊಂಡಿದೆ. ಮುಳಮುತ್ತಲ ಹಾಗೂ ಮಂಗಳಗಟ್ಟಿಯ ಮಾರ್ಗದ ಒಂದು ಕಿ.ಮೀ. ರಸ್ತೆ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ತೊಂದರೆ ಪಡುವಂತಾಗಿದೆ.

ಮುಳಮುತ್ತಲ ಗ್ರಾಮದ ಕೆರೆಯ ಪಕ್ಕದ ಶಿಥಿಲಗೊಂಡ ಬಸ್‌ ನಿಲ್ದಾಣ
ಮುಳಮುತ್ತಲ ಗ್ರಾಮದ ಕೆರೆಯ ಪಕ್ಕದ ಶಿಥಿಲಗೊಂಡ ಬಸ್‌ ನಿಲ್ದಾಣ
ಮೇಲ್ಮಟ್ಟದ ನೀರಿನ ಟ್ಯಾಂಕ್ ದುಃಸ್ಥಿತಿ
ಮೇಲ್ಮಟ್ಟದ ನೀರಿನ ಟ್ಯಾಂಕ್ ದುಃಸ್ಥಿತಿ

Quote - ಮುಳಮುತ್ತಲ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಮ ಸಭೆ ನಡೆದಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಡ್ಡೆತನ ತೋರುತ್ತಿದ್ದಾರೆ ಮಡಿವಾಳಪ್ಪ ನೇಕಾರ ಗ್ರಾಮದ ನಿವಾಸಿ

Quote - ಕುರುಬಗಟ್ಟಿ ಗ್ರಾಮ ಪಂಚಾಯ್ತಿಗೆ ಮೂರು ತಿಂಗಳ ಹಿಂದೆ ಅಧಿಕಾರ ವಹಿಸಿದ್ದು. ಮುಳಮುತ್ತಲ ಗ್ರಾಮದ ಅಭಿವೃದ್ಧಿ ಸೇರಿದಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎನ್.ಎಚ್.ತಪ್ಪೇಲಿ ಪಿಡಿಒ ಕುರುಬಗಟ್ಟಿ ಪಂಚಾಯಿತಿ

Cut-off box - ಅಧಿಕಾರಿ ಸಿಬ್ಬಂದಿ ನಿರ್ಲಕ್ಷ್ಯ: ಆರೋಪ ‘ಅಧಿಕಾರಿ ವರ್ಗ ಪಂಚಾಯ್ತಿಗೆ ಸಂಬಂಧಿಸಿದ ಕೆಲವು ಕೆಲಸಗಾರರ ನಿರ್ಲಕ್ಷ್ಯದಿಂದ ಗ್ರಾಮದ ಅಭಿವೃದ್ದಿಗೆ ಹಿನ್ನಡೆಯಾಗಿದೆ’ ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರೊಬ್ಬರು ತಿಳಿಸಿದರು. ‘ಕೆರೆಯ ಜಾಗದಲ್ಲಿ ಮೂರು ವಿದ್ಯುತ್ ಕಂಭಗಳಿದ್ದು ತಂತಿಗಳು ಹಾದು ಹೋಗಿವೆ. ಮಳೆ ಗಾಳಿಗೆ ತಂತಿ ಹರಿದು ನೀರಿನಲ್ಲಿ ಬಿದ್ದು ಅಪಾಯ ಸಂಭವಿಸುವ ಲಕ್ಷಣಗಳಿವೆ. ಕೆಇಬಿಯವರು ಮುಂಜಾಗ್ರತೆ ಕ್ರಮವಾಗಿತೆರವುಗೊಳಿಸಬೇಕು. ಚರಂಡಿ ಸ್ವಚ್ಛತೆ ಸೇರಿದಂತೆ ಶೌಚಾಲಯ ದನದ ಕೊಟ್ಟಿಗೆ ಇನ್ನಿತರ ಮೂಲ ಸೌಕರ್ಯಗಳಿಂದ ಫಲಾನುಭವಿಗಳು ವಂಚಿತರಾಗಿದ್ದಾರೆ’ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT