ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಕ್ಕೆ ಜಮೆ ಆಗದಿರಲಿ ವಿಮೆಯ ಹಣ

ಬ್ಯಾಂಕರ್‌ಗಳಿಗೆ ಪತ್ರ ಬರೆಯಲು ಲೀಡ್ ಬ್ಯಾಂಕ್‌ಗೆ ಸಿಇಒ ರಾಯಮಾನೆ ಸೂಚನೆ
Last Updated 20 ಜೂನ್ 2018, 8:43 IST
ಅಕ್ಷರ ಗಾತ್ರ

ಧಾರವಾಡ: ‘ರೈತರಿಗೆ ಬರುವ ಬೆಳೆ ನಷ್ಟದ ವಿಮಾ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಲೀಡ್ ಬ್ಯಾಂಕ್ ತನ್ನ ವ್ಯಾಪ್ತಿಯ ಎಲ್ಲಾ ಬ್ಯಾಂಕ್‌ಗಳಿಗೆ ಪತ್ರ ಬರೆಯಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬೆಳೆ ಪರಿಹಾರವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಸರ್ಕಾರದ ಸುತ್ತೋಲೆ ಇದೆ. ಆದರೆ, ಬೆಳೆ ವಿಮೆ ಹಣಕ್ಕೆ ಇಂಥ ನಿರ್ಬಂಧ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾನವೀಯತೆ ನೆಲೆ ಮೇಲೆ ಬ್ಯಾಂಕರ್‌ಗಳಿಗೆ ಪತ್ರ ಬರೆದು ರೈತರಿಗೆ ನೆರವಾಗಬೇಕಿದೆ’ ಎಂದರು.

ಇದಕ್ಕೂ ಮೊದಲು ಮಾತನಾಡಿದ ಸದಸ್ಯರು, ‘ಸತತ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಉತ್ತಮ ಮಳೆಯಿಂದಾಗಿ ಈ ಬಾರಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ರೈತರಿಗೆ ಬರುವ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುವುದು ಸರಿಯಲ್ಲ’ ಎಂದರು.

ಲೀಡ್ ಬ್ಯಾಂಕ್ ಅಧಿಕಾರಿ ಈಶ್ವರ್‌, ‘ಪರಿಹಾರದ ಹಣವನ್ನು ಪಡೆಯುವುದಿಲ್ಲ. ಆದರೆ, ವಿಮೆಯ ಹಣ ಸಾಲಕ್ಕೆ ಜಮಾ ಆಗುವುದು ಬ್ಯಾಂಕ್ ವ್ಯವಸ್ಥೆಯ ಭಾಗ’ ಎಂದಾಗ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯ ಪ್ರವೇಶಿಸಿದ ಸಿಇಒ, ‘ಜಿಲ್ಲಾ ಪಂಚಾಯ್ತಿ ಸಭೆಯ ಒತ್ತಾಯದಂತೆ ಎಲ್ಲಾ ಬ್ಯಾಂಕರ್‌ಗಳಿಗೆ ಪತ್ರ ಬರೆಯಿರಿ’ ಎಂದು ಸೂಚಿಸಿದರು.

‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿವೇಚನಾ ನಿಧಿಯಲ್ಲಿ ₹ 24 ಲಕ್ಷ ಮೊತ್ತದ ಕಾಮಗಾರಿ ಮಾತ್ರ ಬಾಕಿ ಇದೆ. ಹೀಗಾಗಿ, ಉಳಿದ ₹76 ಲಕ್ಷ ಕಾಮಗಾರಿ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಕೈಗೆತ್ತಿಕೊಳ್ಳಲಾಗುವುದು‘ ಎಂದು ಸ್ನೇಹಲ್ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೈತ್ರಾ ಶಿರೂರ, ‘ಕಳೆದ ಸಭೆಯಲ್ಲಿ ₹ 56 ಲಕ್ಷದ ಕಾಮಗಾರಿ ಎಂದು ತಿಳಿಸಿ, ಈಗ ಏಕಾಏಕಿ ಅದು ₹24 ಲಕ್ಷಕ್ಕೆ ಬಂದಿದ್ದು ಹೇಗೆ?’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ‘ಪೂರ್ಣಗೊಂಡ ಕಾಮಗಾರಿಗಳ ಹಣ ಅಷ್ಟೇ ಇದೆ. ಆದರೆ, ಕೈಗೆತ್ತಿಕೊಂಡ ಕಾಮಗಾರಿಗಳ ಕುರಿತು ಕಳೆದ ಸಭೆಯಲ್ಲಿ ಮಾಹಿತಿ ನೀಡಲಾಗಿತ್ತು. ಇಲ್ಲಿ ಯಾವುದೇ ಹಣ ದುರ್ಬಳಕೆ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉಳಿದಿರುವ ಹಣದಲ್ಲಿ ಸದಸ್ಯರ ಕ್ಷೇತ್ರದಲ್ಲಿನ ಅವಶ್ಯಕತೆಗೆ ಅನುಗುಣವಾಗಿ ಸ್ಥಳ ಪರಿಶೀಲನೆ ಮಾಡಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು. ಎಲ್ಲೆಲ್ಲಿ ನೀರಿನ ಅಗತ್ಯವಿದೆಯೋ, ಆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುವುದು. ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಅಧಿಕಾರಿಗಳು ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು’ ಎಂದರು.

ಉಪಾಧ್ಯಕ್ಷ ಶಿವಾನಂದ ಕರಿಗಾರ, ಉಪ ಕಾರ್ಯದರ್ಶಿ ಎಸ್‌.ಜಿ.ಕೊರವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT