ಸೋಮವಾರ, ಮೇ 23, 2022
30 °C

ಹಣ ಹೂಡಿಕೆ; ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ₹ 50 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪ್ರತಿಷ್ಠಿತ ಕಂಪನಿಯೊಂದರ ಪ್ರಾಂಚೈಸಿ ಎಂದು ನಗರದ ನಿವಾಸಿ ಡಾ.ಶೈಲಾ ಅವರಿಗೆ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವರಿಂದ ₹50 ಲಕ್ಷ ಪಡೆದು ವಂಚಿಸಿದ್ದಾನೆ.

ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಡಾ.ಶೈಲಾ ಅವರಿಗೆ ನಿವೃತ್ತಿ ನಂತರ ₹38 ಲಕ್ಷ ದೊರಕಿತ್ತು. ಅಂಗವಿಕಲ ಮಗನಿಗೆ ಹಾಗೂ ಇಳಿವಯಸ್ಸಲ್ಲಿ ತಮಗೆ ಸಹಾಯವಾಗಬಹುದೆಂದು ಪರಿಚಯಯದ ಮಣಿಕಂಠನ್‌ ಕುಟ್ಟುತ್‌ ಅವರು ಪ್ರಾಂಚೈಸಿ ಪಡೆದಿದ್ದ ಎನ್ನಲಾದ ಕಂಪನಿಯಲ್ಲಿ ಹೂಡಿಕೆ ಮಾಡಲು ₹50 ಲಕ್ಷ ನೀಡಿದ್ದರು. ಹಣ ಹೂಡಿಕೆ ಮಾಡಿರುವ ಬಗ್ಗೆ ಮಣಿಕಂಠನ್‌ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ನೀಡಿದ್ದನು. ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಗೋಕುಲ ರಸ್ತೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಕೇಶ್ವಾಪುರ ಶಾಂತಿನಗರದ ಹನುಮಂತಪ್ಪ ಬುಲಗಣ್ಣವರ ಅವರ ಮನೆ ಬಾಗಿಲು ಮುರಿದು, ₹4.07 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಕಳವು ಮಾಡಲಾಗಿದೆ. 135 ಗ್ರಾಂ ಚಿನ್ನಾಭರಣ ಹಾಗೂ 55 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಆಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹82 ಸಾವಿರ ವಂಚನೆ: ಸಾಲ ಮಂಜೂರು ಆಗಿದೆ ಎಂದು ಗೋಪನಕೊಪ್ಪದ ಪ್ರವೀಣ ಕರೊಗಲ್ಲರ ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಬ್ಯಾಂಕ್‌ ಮಾಹಿತಿ ಪಡೆದು ₹82 ಸಾವಿರ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.

ಧನಿ ಲೋನ್ ಆ್ಯಪ್‌ನಲ್ಲಿ ಶೇ 2.5 ಬಡ್ಡಿ ದರದಲ್ಲಿ ₹3 ಲಕ್ಷ ಸಾಲ ಮಂಜೂರಾಗಿದೆ ಎಂದು ಕರೆ ಮಾಡಿ ನಂಬಿಸಿದ್ದಾರೆ. ಬಳಿಕ ವಿಮೆ, ಜಿಎಸ್‌ಟಿ ಹಾಗೂ ಇತ್ಯಾದಿ ಶುಲ್ಕ ಎಂದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು