ಶುಕ್ರವಾರ, ಅಕ್ಟೋಬರ್ 30, 2020
28 °C
ನಾಲ್ಕೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ವಿಶ್ವಬ್ಯಾಂಕ್‌ ನೆರವಿನ ಕಾಮಗಾರಿ, ಸರ್ವೆ ಕಾರ್ಯ ಆರಂಭ

ಹುಬ್ಬಳ್ಳಿ: ಜಲ ಸಂಕಷ್ಟ ಕಳೆಯುವುದೇ 24x7 ಯೋಜನೆ?

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಾಲ್ಕು ವರ್ಷಗಳ ಹಿಂದಿನ ಮಾತು; ಮಳೆಯ ಕೊರತೆಯಿಂದ ಕುಡಿಯುವ ನೀರು ಒದಗಿಸುವ ಕಲಘಟಗಿ ತಾಲ್ಲೂಕಿನ ನೀರಸಾಗರ ಜಲಾಶಯ ಬತ್ತಿ ಹೋಗಿತ್ತು. ಇದರಿಂದ ಭೀಕರ ನೀರಿನ ಅಭಾವ. 10 ದಿನಗಳಿಗೊಮ್ಮೆ ಎರಡ್ಮೂರು ತಾಸು ಬರುತ್ತಿದ್ದ ನೀರಿಗಾಗಿ ಹಗಲಿರುಳು ಕಾಯುವ ಸರತಿ ಜನರದ್ದಾಗಿತ್ತು.

ಇದಕ್ಕಾಗಿ ನಿತ್ಯದ ಕೆಲಸ ಬದಿಗೊತ್ತಿ ಕೊಡ ಹಿಡಿದು, ಅಕ್ಕಪಕ್ಕದ ಮನೆಯವರ ಜೊತೆ ಜಗಳವಾಡುವ ಪರಿಸ್ಥಿತಿಯಿತ್ತು. ‌ಈ ನೀರಿನ ಸಮಸ್ಯೆ ಪ್ರತಿ ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಮತಬೇಟೆಗೆ ಅಸ್ತ್ರವೂ ಆಗಿತ್ತು. ಜೀವಜಲಕ್ಕಾಗಿ ಅವಳಿ ನಗರಗಳ ಜನ ಪರದಾಡುವುದು ಹೊಸತೇನಲ್ಲ.

1900 ಆರಂಭದ ವರ್ಷಗಳಲ್ಲಿ ಹಿರೇಕೆರೆ, ಕೊಪ್ಪದ ಕೆರೆ, ಹಾಲಕೆರೆ ಮತ್ತು ಹೊಕ್ಕು ತುಂಬುವ ಭಾವಿಗಳ ನೀರು ಇಲ್ಲಿಯ ಜನರಿಗೆ ಆಸರೆಯಾಗಿತ್ತು. 1908ರಲ್ಲಿ ಧಾರವಾಡದ ಕೆಲಗೇರಿ ಕೆರೆಯಿಂದ ನಳದ ಮೂಲಕ ನೀರು ಸರಬರಾಜು ಕಾಮಗಾರಿ ಆರಂಭಿಸಿ ಮೂರು ವರ್ಷಗಳಲ್ಲಿ ಮುಗಿಸಲಾಯಿತು. ಬಳಿಕ ಹುಬ್ಬಳ್ಳಿ ಜನರಿಗೆ ತಿರುಕರಾಮ ಕೆರೆ ನೀರಿನ ಮೂಲವಾಗಿತ್ತು. ಪುರಸಭೆ ರಚನೆಗೊಂಡ ಬಳಿಕ ಕೆರೆಯನ್ನು ಹಲವು ಬಾರಿ ವಿಸ್ತರಿಸಲಾಯಿತು. ಅಂದಾಜು 59 ಎಕರೆ ವಿಸ್ತೀರ್ಣದ ಕೆರೆಯ ನೀರು ಗುರುಸಿದ್ಧಪ್ಪನ ಹೊಂಡಕ್ಕೆ ಹೋಗಿ (ಮೂರುಸಾವಿರ ಮಠದ ಹೊಂಡ) ಅಲ್ಲಿಂದ ಭೂಸಪೇಟೆಯ ಹೊಂಡಕ್ಕೆ ಹೋಗುವ ವ್ಯವಸ್ಥೆಯಿತ್ತು.

ಅವಳಿ ನಗರಗಳ ಜನಸಂಖ್ಯೆ ಬೆಳೆದಂತೆಲ್ಲ ಉಣಕಲ್‌ ಕೆರೆಯ ನೀರು ಬಳಸಿಕೊಳ್ಳಲಾಯಿತು. ನೀರಿನ ಅಗತ್ಯತೆ ಹೆಚ್ಚಾಗಿ 1955ರಲ್ಲಿ ನೀರಸಾಗರದ ನೀರು ಉಪಯೋಗಿಸುವ ಮೊದಲ ಹಂತದ ಯೋಜನೆ ನಡೆಯಿತು. ಅಲ್ಲಿಂದ ಅವಳಿ ನಗರಗಳಿಗೆ ನಿತ್ಯ ತಲಾ 2 ಲಕ್ಷ ಗ್ಯಾಲನ್‌ ನೀರು ಪೂರೈಕೆಯಾಗುತ್ತಿತ್ತು. ಮಲಪ್ರಭಾ ಜಲಾಶಯದ ನೀರು ಬಳಸಿಕೊಳ್ಳುವ ಕಾಮಗಾರಿ 1975ರಿಂದ 83ರ ತನಕ ನಡೆಯಿತು. ಬಳಿಕ ಉಣಕಲ್‌ನಿಂದ 10 ಲಕ್ಷ ಗ್ಯಾಲನ್‌, ನೀರಸಾಗರದಿಂದ 85 ಲಕ್ಷ ಗ್ಯಾಲನ್‌ ಮತ್ತು ಮಲಪ್ರಭೆಯಿಂದ 75 ಲಕ್ಷ ಗ್ಯಾಲನ್‌ ನೀರು ಲಭ್ಯವಾಗುತ್ತಿತ್ತು. ವಾಣಿಜ್ಯ ಚಟುವಟಿಕೆ ಹೆಚ್ಚಿದಂತೆಲ್ಲ ಉಣಕಲ್‌ ಕೆರೆಯ ನೀರು ಮಲೀನವಾದ ಕಾರಣ 1997ರಿಂದ ಅಲ್ಲಿನ ನೀರು ಬಳಸಿಕೊಳ್ಳುವುದನ್ನು ನಿಲ್ಲಿಸಲಾಯಿತು.

ಅವಳಿ ನಗರಗಳ ಜನರಿಗೆ ಕುಡಿಯಲು ಈಗಲೂ ನೀರಸಾಗರ ಮತ್ತು ಮಲಪ್ರಭಾ ಜಲಾಶಯಗಳ ನೀರೇ ಆಧಾರ. 2019 ಮತ್ತು ಈ ವರ್ಷ ಸುರಿದ ಭಾರಿ ಮಳೆಯಿಂದ ನೀರಸಾಗರ ಮತ್ತು ಮಲಪ್ರಭಾಕ್ಕೆ ಭರಪೂರ ನೀರು ಬಂತು. ಆದ್ದರಿಂದ ಸದ್ಯಕ್ಕಂತೂ ನೀರಿನ ಅಭಾವವಿಲ್ಲ.

ನೀರಿನ ಕೊರತೆ ಶಾಶ್ವತವಾಗಿ ಕೊನೆಗಾಣಿಸಿ ಅವಳಿ ನಗರಗಳ ಎಲ್ಲ ವಾರ್ಡ್‌ಗಳಿಗೂ 24X7 ನೀರು ಪೂರೈಕೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈಗ 22 ವಾರ್ಡ್‌ಗಳಿಗೆ ಮಾತ್ರ ನಿರಂತರ ನೀರು ಪೂರೈಕೆಯಾಗುತ್ತಿದೆ. ವಿಶ್ವಬ್ಯಾಂಕ್‌ ನೆರವಿನೊಂದಿಗೆ ಈ ಯೋಜನೆ ರೂಪಿಸಲಾಗಿದ್ದು, ಬಿಡ್‌ ಸಲ್ಲಿಸಿದ್ದ ಏಕೈಕ ಕಂಪನಿ ಚೆನ್ನೈನ ಎಲ್‌ ಆ್ಯಂಡ್‌ ಟಿ ₹ 1,206 ಕೋಟಿಗೆ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದೆ.

2016ರಲ್ಲಿ ಅವಳಿ ನಗರಗಳಿಗೆ ನಿತ್ಯ 200 ಎಂಎಲ್‌ಡಿ (ಪ್ರತಿದಿನ ದಶಲಕ್ಷ ಲೀಟರ್‌) ನೀರಿನ ಅಗತ್ಯವಿತ್ತು. ಅದೇ ವರ್ಷ ನೀರಸಾಗರ ಬರಿದಾದ ಬಳಿಕ ನಿತ್ಯ 40 ಎಂಎಲ್‌ಡಿ ನೀರಿನ ಕೊರತೆ ಎದುರಾಗಿತ್ತು. ಮಲಪ್ರಭಾದಿಂದ ಪೂರೈಕೆಯಾಗುತ್ತಿದ್ದ 160 ಎಂಎಲ್‌ಡಿ ನೀರನ್ನೇ ಹೊಂದಾಣಿಕೆ ಮಾಡಿ ಅವಳಿ ನಗರಗಳಿಗೆ ಸರಬರಾಜು ಮಾಡಲಾಯಿತು.

ವಿಳಂಬ: 24X7 ನೀರು ಪೂರೈಕೆಗೆ ನಾಲ್ಕು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆಗ ಟೆಂಡರ್‌ ಪಡೆದಿದ್ದ ಗುತ್ತಿಗೆ ದಾರ ಅರ್ಧದಷ್ಟು ಸರ್ವೆ ಕೆಲಸ ಮುಗಿಸಿ ಬಿಟ್ಟು ಹೋಗಿದ್ದರು. ಆದ್ದರಿಂದ ಮರು ಟೆಂಡರ್‌ ಕರೆದು ಈಗ ಕಾಮಗಾರಿಗೆ ಪುನಃ ಚಾಲನೆ ನೀಡಲಾಗಿದೆ.

ಇದೇ ವರ್ಷದ ಫೆಬ್ರುವರಿಯಲ್ಲಿ ಮಲಪ್ರಭಾ ಜಲಾಶಯದಿಂದ (ರೇಣುಕಾ ಜಲಾಶಯ) ಹೆಚ್ಚುವರಿಯಾಗಿ 40 ಎಂಎಲ್‌ಡಿ ನೀರು ಪೂರೈಕೆ ಆರಂಭವಾಗಿದೆ. ₹26 ಕೋಟಿ ವೆಚ್ಚದಲ್ಲಿ ಅಮ್ಮಿನಭಾವಿಯಲ್ಲಿ ಜಲ ಶುದ್ಧೀಕರಣ ಘಟಕ, ಪಂಪ್‌ಹೌಸ್‌, 850 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಸೆಟ್‌ ಅಳವಡಿಕೆ, ಮಲಪ್ರಭಾ ಜಲಾಶಯದ ಜಾಕ್‌ವೆಲ್‌ನಲ್ಲಿ 1944 ಎಚ್‌.ಪಿ ಸಾಮರ್ಥ್ಯದ ಹೊಸ ಪಂಪ್‌ಸೆಟ್‌ ಅಳವಡಿಕೆ ಮಾಡಲಾಗಿದೆ. 24X7 ಯೋಜನೆ ಪೂರ್ಣ ಗೊಂಡರೆ ಯಾವಾಗಲೂ ನೀರು ಬರುತ್ತದೆ. ಇದಕ್ಕಾಗಿ ನಾಲ್ಕೂವರೆ ವರ್ಷ ಕಾಯಬೇಕು.

ಸದ್ಯಕ್ಕೆ 14 ವಾರ್ಡ್‌ಗಳಲ್ಲಿ 24X7 ನೀರು: ಸದ್ಯಕ್ಕೆ ಹುಬ್ಬಳ್ಳಿಯ 44 ವಾರ್ಡ್‌ಗಳ ಪೈಕಿ 10 ಮತ್ತು ಧಾರವಾಡ 23 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ 24X7 ನೀರು ಪೂರೈಕೆಯಾಗುತ್ತಿದೆ. ವಾಣಿಜ್ಯ ನಗರಿಯಲ್ಲಿ 7 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ₹1.60 ಲಕ್ಷ ಜನರಿಗಷ್ಟೇ ನಿರಂತರ ನೀರು ಸರಬರಾಜು ಆಗುತ್ತಿದೆ. 25 ವಾರ್ಡ್‌ಗಳಲ್ಲಿ ಮೂರು ದಿನಗಳಿಗೊಮ್ಮೆ ಮತ್ತು ಉಳಿದ ಒಂಬತ್ತು ವಾರ್ಡ್‌ಗಳಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ.

‘ಹುಬ್ಬಳ್ಳಿಗೆ ನಿತ್ಯ 120ರಿಂದ 130 ಎಂಎಲ್‌ಡಿ ನೀರು ಖರ್ಚಾಗುತ್ತಿದೆ. 24X7 ಜಾರಿಗೊಂಡ ಬಳಿಕ ನಿತ್ಯ 200 ಎಂಎಲ್‌ಡಿ ನೀರು ಬೇಕಾಗುತ್ತದೆ’ ಎಂದು ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಪಿ. ಸುರೇಶ ಹೇಳುತ್ತಾರೆ. ಇವರು ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದಾರೆ.

ತಾಲ್ಲೂಕು ಪ್ರದೇಶಗಳಲ್ಲೂ ತಪ್ಪಿಲ್ಲ ಬವಣೆ: ಜಿಲ್ಲೆಯ ತಾಲ್ಲೂಕು ಪ್ರದೇಶಗಳಲ್ಲಿಯೂ ನೀರಿನ ಬವಣೆ ತಪ್ಪಿಲ್ಲ. ಕಲಘಟಗಿ ತಾಲ್ಲೂಕಿನ ಡೊಮಗ್ರಿ ಕೊಪ್ಪ ಗ್ರಾಮದ ಹತ್ತಿರದ ಬೆಣಚಿ ಕೆರೆ ಕಲಘಟಗಿ ಜನರಿಗೆ ನೀರು ಒದಗಿಸುತ್ತದೆ. ಅಲ್ಲಿ ಐದಾರು ದಿನಗಳಿಗೊಮ್ಮೆ ನೀರು ಬರುತ್ತದೆ.

ಅಳ್ನಾವರದ ಜನರಿಗೆ ಡವಗಿ ನಾಲಾ ಆಸರೆಯಾಗಿದೆ. ಈಗ ಸಮೃದ್ಧ ಮಳೆಯಾಗುತ್ತಿರುವ ಕಾರಣ ನೀರಿನ ಕೊರತೆ ಕಾಣುತ್ತಿಲ್ಲ. ಬೇಸಿಗೆ ಹಾಗೂ ಮಳೆಯಾಗದ ಸಂದರ್ಭದಲ್ಲಿ ಜನ ನೀರಿಗಾಗಿ 10ರಿಂದ 15 ದಿನಗಳವರೆಗೆ ಕಾಯಬೇಕಾಗುತ್ತಿತ್ತು. ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ತಂದು 24X7 ನೀರೊದಗಿಸುವ ಯೋಜನೆ ಪ್ರಗತಿಯಲ್ಲಿದ್ದು, ಇದಕ್ಕೆ ₹70 ಕೋಟಿ ವೆಚ್ಚ ಮಾಡಲಾಗುತ್ತಿದೆ. ಮನೆಮನೆಗಳಿಗೆ ಕೊಳವೆ ಅಳವಡಿಕೆ ಕಾರ್ಯವೂ ಶೇ 50ರಷ್ಟು ಪೂರ್ಣಗೊಂಡಿದೆ.

ಕುಂದಗೋಳಕ್ಕೆ ಮಲಪ್ರಭಾದಿಂದ ನೀರು ಪೂರೈಕೆಯಾಗುತ್ತಿದ್ದು, ಅಣ್ಣಿಗೇರಿಗೆ ಮಲಪ್ರಭಾದಿಂದ ಅಂಬಿಗೇರಿ ಕೆರೆ ಮೂಲಕ ನೀರಿನ ಲಭ್ಯತೆಯಿದೆ. ಕುಂದಗೋಳ ತಾಲ್ಲೂಕಿನ ಗುಡಗೇರಿ ಜನರಿಗೆ ರಟ್ಟಿಗೇರಿ ಕೆರೆ ಆಶ್ರಯವಾಗಿದೆ. ಈ ಎಲ್ಲ ತಾಲ್ಲೂಕುಗಳ ಸುತ್ತಮುತ್ತಲಿನ ಗ್ರಾಮಗಳು ಬೋರ್‌ವೆಲ್‌ಗಳು, ಕೆರೆಗಳು ಮತ್ತು ಟ್ಯಾಂಕ್‌ ನೀರಿನ ಮೇಲೆ ಅವಲಂಬಿತವಾಗಿವೆ.

***

15 ವರ್ಷಗಳ ಹಿಂದೆಯೇ ಅವಳಿ ನಗರಗಳ ಕೆಲ ಬಡಾವಣೆಗಳಿಗೆ ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತಿತ್ತು. ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೆ ಇದುವರೆಗೆ ಸುಮಾರು ₹500 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರೂ, ಅಧಿಕಾರಿಗಳ ಬದ್ಧತೆಯ ಕೊರತೆಯಿಂದ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಈಗಲೂ ಬಹಳಷ್ಟು ಕೊಳೆಗೇರಿಗಳು ಬೋರ್‌ ವೆಲ್‌ ನೀರನ್ನು ಅವಲಂಬಿಸಿವೆ.

-ಪಾಂಡುರಂಗ ಪಾಟೀಲ, ಮಾಜಿ ಮೇಯರ್‌

***
ಗುತ್ತಿಗೆ ಪಡೆದಿರುವ ಎಲ್‌ ಅಂಡ್ ಟಿ ಕಂಪನಿ ಸರ್ವೆ ಕಾರ್ಯ ಆರಂಭಿಸಿದ್ದು, 2021ರ ಮಾರ್ಚ್‌ ವೇಳೆಗೆ ಸರ್ವೆ ಪೂರ್ಣಗೊಳ್ಳಲಿದೆ. ಮೊದಲ ಹಂತದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು, ಹೊಸ ಕೊಳವೆಗಳನ್ನು ಅಳವಡಿಸುವುದು, ಉಳಿದ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಒಟ್ಟು ನಾಲ್ಕೂವರೆ ವರ್ಷಗಳಲ್ಲಿ ಮುಗಿಯಲಿದೆ. ಮುಂದಿನ ಏಳು ವರ್ಷ ಗುತ್ತಿಗೆ ಪಡೆದ ಕಂಪನಿಯೇ ನಿರ್ವಹಣೆ ಮಾಡಲಿದೆ.

-ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು