ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವನಿಧಿ‌ ಯೋಜನೆಯಿಂದ ಬೀದಿ ವ್ಯಾಪಾರಿಗಳಿಗೆ ಘನತೆಯ ಬದುಕು: ಜಗದೀಶ ಶೆಟ್ಟರ್

ಪಾಲಿಕೆಯಿಂದ ಸ್ವನಿಧಿ ಮಹೋತ್ಸವ, ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆಯಲ್ಲಿ ಶಾಸಕ‌ ಶೆಟ್ಟರ್
Last Updated 20 ಜುಲೈ 2022, 13:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಾಜದ‌ ಕೆಳಸ್ತರದಲ್ಲಿರುವವರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿರುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಬೀದಿ ವ್ಯಾಪಾರಿಗಳಿಗೆ ಘನತೆಯ ಬದುಕು‌ ಕಟ್ಟಿಕೊಟ್ಟಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಮಹಾನಗರ ಪಾಲಿಕೆಯು ಗೋಕುಲ ರಸ್ತೆಯ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಸ್ವನಿಧಿ ಮಹೋತ್ಸವ ಮತ್ತು ಬೀದಿಬದಿ ವ್ಯಾಪಾರಸ್ಥರ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ‘ವ್ಯಾಪಾರಿಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಲು ಯೋಜನೆಯು ನೆರವಾಗಿದೆ’ ಎಂದರು.

‘ಎಲ್ಲೆಂದರಲ್ಲಿ ವ್ಯಾಪಾರ ಮಾಡುವ ಬದಲು, ಪಾಲಿಕೆಯು ಈಗಾಗಲೇ ಗುರುತಿಸಿರುವ 45 ಸ್ಥಳಗಳಲ್ಲೇ ಬೀದಿ ವ್ಯಾಪಾರಿಗಳು ತಮ್ಮ ವ್ಯವಹಾರ ಮಾಡಬೇಕು.‌ ಇದರಿಂದ, ಸಾರ್ವಜನಿಕರಿಗೆ ಆಗುವ ಕಿರಿಕಿರಿ ಹಾಗೂ ಅಧಿಕಾರಿಗಳ ದಬ್ಬಾಳಿಕೆ ತಪ್ಪಲಿದೆ’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ‘ಸ್ವನಿಧಿ ಯೋಜನೆಯಡಿ ಶೇ 7 ಬಡ್ಡಿ ದರದಲ್ಲಿ ಅತಿ ಹೆಚ್ಚು ಬೀದಿ ವ್ಯಾಪಾರಿಗಳಿಗೆ ₹10 ಸಾವಿರ ಸಾಲ‌ ಕೊಟ್ಟ ಖ್ಯಾತಿ ನಮ್ಮ ಪಾಲಿಕೆಯದ್ದಾಗಿದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ 10,896 ವ್ಯಾಪಾರಿಗಳ ಪೈಕಿ 7,300 ಮಂದಿಗೆ ಸಾಲ ನೀಡಲಾಗಿದೆ’ ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಅಣ್ಣಯ್ಯ ಮಾತನಾಡಿ, ‘ಸ್ವನಿಧಿ ಯೋಜನೆಯು ವ್ಯಾಪಾರಿಗಳಿಗೆ ಆಸರೆಯಾಗಿದೆ. ಸಾಲವನ್ನು ಸರಿಯಾಗಿ ಮರುಪಾವತಿಸಿದವರಿಗೆ ಬಡ್ಡಿಯನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ.‌ ಜೊತೆಗೆ, ಎರಡನೇ ಕಂತಿನಲ್ಲಿ ಮತ್ತೆ ₹20 ಸಾವಿರ ಹಾಗೂ ಮೂರನೇ ಕಂತಿನಲ್ಲಿ ₹50 ಸಾವಿರ ಸಾಲ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ‘ವ್ಯಾಪಾರಿಗಳು ಸರ್ಕಾರದ ಯೋಜನೆಗಳ ಪ್ರಯೋಜನೆ ಪಡೆದು ಉದ್ಯಮಿಗಳಾಗುವತ್ತ ಗಮನ ಹರಿಸಬೇಕು’ ಎಂದರು.

ಮಹಾನಗರ ಪಾಲಿಕೆಯತಿಪ್ಪಣ್ಣ ಮಜ್ಜಗಿ, ಸಭಾ ನಾಯಕ, ‘ಬೀದಿ ವ್ಯಾಪಾರಿಗಳಿಂದ ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ‌ವಸೂಲಿ ಮಾಡುತ್ತಿರುವ ದೂರುಗಳಿವೆ. ಇದಕ್ಕೆ ಕಡಿವಾಣ ಹಾಕಲು‌ ಮೇಯರ್ ಕ್ರಮ‌ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಕೇಂದ್ರ ಸರ್ಕಾರವು ವಿಭಿನ್ನ ಕಾರ್ಯಕ್ರಮಗಳ ಮೂಲಕ ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ವ್ಯಾಪಾರಿಗಳು ಹಿಂದೆ ಸಾಲ‌ ಪಡೆಯಲು ಇದ್ದ ಸಿಬಿಲ್ ಮಾನದಂಡವನ್ನು‌ ರದ್ದುಗೊಳಿಸಿದೆ’ ಎಂದು ಹೇಳಿದರು.

ಉಪ‌ ಮೇಯರ್ ಉಮಾ ಮುಕುಂದ, ಪಾಲಿಕೆಯ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ, ವಿರೋಧ ಪಕ್ಷದ ನಾಯಕ ದೊರೈರಾಜ್ ಮಣಿಕುಂಟ್ಲ, ಸದಸ್ಯರಾದ ಶಿವು‌ ಮೆಣಸಿನಕಾಯಿ, ರೂಪಾ ಶೆಟ್ಟಿ, ಸಂದೀಲ್ ಕುಮಾರ್ ಹಾಗೂ ಪಾಲಿಕೆಯ ಅಧಿಕಾರಿಗಳು ಇದ್ದರು. ವಲಯ ಆಯುಕ್ತ ಎಸ್‌.ಸಿ. ಬೇವೂರ ಸ್ವಾಗತಿಸಿದರು.

ಸನ್ಮಾನ:ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ, ಆಹಾರ ತಯಾರಿಕೆ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಸ್ವನಿಧಿ ಯೋಜನೆಯಡಿ ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡಿದ ಹಾಗೂ ಅತೀ ಹೆಚ್ಚು ಡಿಜಿಟಲ್ ವಹಿವಾಟು ನಡೆಸಿದ ವ್ಯಾಪಾರಸ್ಥರನ್ನು ಸನ್ಮಾನಿಸಲಾಯಿತು. ಬೀದಿ ಆಹಾರ ಉತ್ಸವ, ಸ್ವ-ಸ್ವಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT