ಭಾನುವಾರ, ಸೆಪ್ಟೆಂಬರ್ 22, 2019
27 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಮಹಿಳೆಯರ ಸ್ವಾವಲಂಬಿ ಬದುಕಿಗೆ ’ಜ್ಞಾನವಿಕಾಸ‘

Published:
Updated:
Prajavani

ನಮಗೆ ಏನೂ ಗೊತ್ತಿಲ್ಲ, ಯಾವ ಉದ್ಯೋಗ ಆರಂಭಿಸಬೇಕೆಂದರೂ ಅದರ ಅನುಭವವೂ ಇಲ್ಲ. ಯಾವುದನ್ನು ಕಲಿತರೆ ಮುಂದೆ ಅದಕ್ಕೇನಾದರೂ ಭವಿಷ್ಯ ಇದೆಯೇ ಎಂಬ ದೊಡ್ಡ ಚಿಂತೆ, ಪ್ರಶ್ನೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಕನಸನ್ನು ಹೊತ್ತ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಅಂತಹವರಿಗಾಗಿಯೇ, ಮೂಲ ಅರ್ಹತೆಗಳನ್ನೆಲ್ಲ ಬದಿಗಿಟ್ಟು, ಮಾರುಕಟ್ಟೆ ಹಾಗೂ ಸ್ವಯಂ ಉದ್ಯೋಗಕ್ಕೆ ಅಗತ್ಯವಿರುವ ತರಬೇತಿ ನೀಡಿ, ಸಬಲರಾಗಲು ಅನುವಾಗುತ್ತಿದೆ ‘ಜ್ಞಾನವಿಕಾಸ’.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಅಡಿಯಲ್ಲಿ ನಡೆಯುವ ಜ್ಞಾನವಿಕಾಸ ತರಬೇತಿ ಸಂಸ್ಥೆ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಕಸೂತಿ (ಟೈಲರಿಂಗ್‌), ಕರಕುಶಲ ವಸ್ತುಗಳ ತಯಾರಿಕೆ, ಆಹಾರೋತ್ಪನ್ನ ತಯಾರಿಕೆ, ಬೇಕರಿ, ಬಟ್ಟೆ ಬ್ಯಾಗ್‌ ತಯಾರಿಕೆ, ಸಿದ್ಧ ಉಡುಪು ತಯಾರಿಕೆ, ಕಂಪ್ಯೂಟರ್‌ ತರಬೇತಿ ಸೇರಿದಂತೆ ಜೀವನಕ್ಕೆ ಆಧಾರವಾಗುವಂತಹ ತರಬೇತಿಗಳನ್ನು ಧಾರವಾಡದ ರಾಯಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ತನ್ನ ವಿಶಾಲ ಕಟ್ಟಡದಲ್ಲಿ ಒದಗಿಸುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ ನಾಲ್ಕು ತರಬೇತಿ ಸಂಸ್ಥೆಗಳಿದ್ದು, ಅವುಗಳಲ್ಲಿ ಈ ಜ್ಞಾನವಿಕಾಸ ಸಂಸ್ಥೆ ಅತಿದೊಡ್ಡದೆಂಬ ಹೆಗ್ಗಳಿಕೆ ಹೊಂದಿದೆ.

ಅಂದಹಾಗೆ, ಈ ತರಬೇತಿಗಳು ಹೊಸದೇನೂ ಅಲ್ಲ. ಆದರೆ, ಧಾರವಾಡದ ‘ಜ್ಞಾನವಿಕಾಸ’ ಕಳೆದ ಒಂದು ವರ್ಷದಿಂದ ತನ್ನ ದೊಡ್ಡ ಕಟ್ಟಡವನ್ನು ಹೊಂದಿದ್ದು, ವಿಶಾಲವಾದ ವಾತಾವರಣದಲ್ಲಿ ಹಲವು ರೀತಿಯ ತರಬೇತಿಗಳು, ಕಂಪ್ಯೂಟರ್‌, ಕೃಷಿ, ಕೈಗಾರಿಕೆ ಕ್ಷೇತ್ರಗಳಿಗೆ ಕೌಶಲ ಅಭಿವೃದ್ಧಿ ತರಬೇತಿಗಳನ್ನು ಒದಗಿಸುತ್ತಿದೆ. ಈ ಸುಸಜ್ಜಿತ ತರಬೇತಿ ಕೇಂದ್ರ ಒಂದೇ ಬಾರಿ 250ರಿಂದ 300 ಜನರಿಗೆ ತರಬೇತಿ ನೀಡುವ ಸ್ಥಳಾವಕಾಶವನ್ನು ಹೊಂದಿದೆ.

ಜ್ಞಾನವಿಕಾಸದಲ್ಲಿ ಮಹಿಳೆಯರು ಟೈಲರಿಂಗ್‌, ಕಂಪ್ಯೂಟರ್‌ ತರಬೇತಿಗಳನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ. ಇಲ್ಲಿಟೈಲರಿಂಗ್‌ ತರಬೇತಿಯನ್ನು ಎಲೆಕ್ಟ್ರಿಕಲ್‌ ಹಾಗೂ ಸೌರವಿದ್ಯುತ್‌ನ ಯಂತ್ರಗಳಲ್ಲಿ ನೀಡಲಾಗುತ್ತದೆ. ಮಾರುಕಟ್ಟೆಗೆ ಅಗತ್ಯವಾಗಿರುವ ಮೂಲ ಕಸೂತಿ ಕಲೆ ಹಾಗೂ ಹೊಸ ವಿನ್ಯಾಸಗಳ ತರಬೇತಿಯನ್ನು ನೀಡಲಾಗುತ್ತದೆ. ಸ್ವಯಂ ಉದ್ಯೋಗಗಳಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತದೆ. ಕಂಪ್ಯೂಟರ್‌ನಲ್ಲಿ ಹೆಚ್ಚಿನ ಜ್ಞಾನ ಪಡೆದುಕೊಂಡರೆ ಉದ್ಯೋಗಾವಕಾಶ ಹೆಚ್ಚು ಹಾಗೂ ಉದ್ಯೋಗದಲ್ಲಿರುವವರು ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದುಕೊಂಡು ಇಲ್ಲಿ ಬಂದು ತರಬೇತಿ ಪಡೆದುಕೊಂಡು, ಸಾಕಷ್ಟು ಪ್ರಗತಿ ಸಾಧಿಸಿದ ಉದಾಹರಣೆಗಳೂ ಇವೆ. 

‘ಎರಡು ತಿಂಗಳ ಮೂಲ ಕಸೂತಿ ಕಲೆ ತರಬೇತಿಗೆ ₹708 ಶುಲ್ಕವಿದೆ. ಈ ತರಬೇತಿ ಪಡೆದವರು ನಂತರ ಸಂಸ್ಥೆಯೇ ನಡೆಸುವ ಸಿದ್ಧ ಉಡುಪು ತಯಾರಿಕೆ ಘಟಕದಲ್ಲಿ ಕಾರ್ಯನಿರ್ವಹಿಸಬಹುದು. ದಿನಕ್ಕೆ ₹145ರಿಂದ ₹195 ಗಳಿಸಬಹುದು. ಇನ್ನಷ್ಟು ಹೆಚ್ಚಿನ ತರಬೇತಿ ಪಡೆದುಕೊಂಡರೆ ನಂತರ ಸ್ವಯಂ ಉದ್ಯೋಗವನ್ನೂ ಆರಂಭಿಸಬಹುದು. ಇಂತಹ ಉದಾಹರಣೆಗಳು ಬಹಳಷ್ಟಿವೆ. ಪ್ರತಿ ವರ್ಷ ಸುಮಾರು 250 ಮಂದಿ ಇಲ್ಲಿ ತರಬೇತಿ ಪಡೆಯುತ್ತಾರೆ’ ಎನ್ನುತ್ತಾರೆ ಟೈಲರಿಂಗ್ ತರಬೇತಿಯ ಮುಖ್ಯಸ್ಥೆ ಜ್ಯೋತಿ ಶಿಗ್ಗಾವಿ.

ದಿನಕ್ಕೆ ಒಂದು ಸಾವಿರ ರೂಪಾಯಿ ದುಡಿಮೆ

‘ಈ ಸಂಸ್ಥೆಯಲ್ಲಿ ಟೈಲರಿಂಗ್‌ ತರಬೇತಿ ಪಡೆದುಕೊಂಡು, ಇಲ್ಲಿನ ಘಟಕದಲ್ಲಿ ಕೆಲಸ ಮಾಡುತ್ತಿದ್ದೆ. ಇದೀಗ ಹೊರಗೆ ಗಾರ್ಮೆಂಟ್ಸ್‌ನಲ್ಲಿ, ಇಲ್ಲಿನ ಘಟಕ ಹಾಗೂ ವೈಯಕ್ತಿಕವಾಗಿಯೂ ಮನೆಯಲ್ಲಿ ಯಂತ್ರ ಇಟ್ಟುಕೊಂಡಿದ್ದು, ದಿನಕ್ಕೆ ಸುಮಾರು ಒಂದು ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದು ರೇಣುಕಾ ಸಿದ್ರಾಮನವರ ತಮ್ಮ ಸಾಧನೆಯನ್ನು ಹೆಮ್ಮೆಯಿಂದ ಹಂಚಿಕೊಂಡರು. 

‘ಮನೆಯಲ್ಲಿ ಹೊಲಿಗೆ ಯಂತ್ರ ಇದೆ. ಸಣ್ಣಪುಟ್ಟ ಹೊಲಿಗೆಮಾಡುತ್ತಿದ್ದೆ. ಇಲ್ಲಿ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಿದ್ದೇನೆ. ಬೇರೆಡೆ ಸಾಕಷ್ಟು ಹಣ ನೀಡಬೇಕು. ಇಲ್ಲಿ ತೀರಾ ಕಡಿಮೆ ಶುಲ್ಕಕ್ಕೆ ಪ್ರಾಯೋಗಿಕವಾಗಿ ಎಲ್ಲವನ್ನೂ ಹೇಳಿಕೊಟ್ಟಿದ್ದಾರೆ. ನಮ್ಮ ಕಾಲಿನ ಮೇಲೆ ನಾವು ನಿಂತು, ಹಣ ಗಳಿಸುತ್ತಿದ್ದೇವೆ’ ಎಂದು ಜಮುನಾ, ಕವಿತಾ ಹೇಳಿದರು.

‘ಕಂಪ್ಯೂಟರ್‌ ತರಬೇತಿಯನ್ನು ಇಲ್ಲಿಗೆ ಬರುವ ಅಭ್ಯರ್ಥಿಗಳ ಅಗತ್ಯಕ್ಕೆ ತಕ್ಕಂತೆ ನೀಡಲಾಗುತ್ತದೆ. ಪ್ಯಾಕೇಜ್‌ ಹಾಗೂ ವೈಯಕ್ತಿಕ ಎಂಬ ಎರಡು ವರ್ಗದಲ್ಲಿ ತರಬೇತಿ ನೀಡಲಾಗುತ್ತದೆ. ಉದ್ಯೋಗದಲ್ಲಿರುವವರು ತಮಗೆ ನಿರ್ದಿಷ್ಟವಾದ ತರಬೇತಿ ಬೇಕೆಂದರೆ, ಅವರಿಗೆ ಅನುಕೂಲವಾಗುವ ಸಮಯದಲ್ಲಿ ತರಬೇತಿ ನೀಡಲಾಗುತ್ತದೆ’ ಎನ್ನುತ್ತಾರೆ ಕಂಪ್ಯೂಟರ್‌ ತರಬೇತಿಯ ಮುಖ್ಯಸ್ಥೆ ಅಶ್ವಿನಿ ನಂದಿಹಳ್ಳಿ.

‘ನಮ್ಮದೇ ಅಂಗಡಿ ಇದೆ. ಪಿಸಿಯೂ ಇದೆ. ಇದೀಗ ಎಲ್ಲವೂ ಕಂಪ್ಯೂಟರ್‌ನಲ್ಲಿ ಆಗಬೇಕಿರುವುದರಿಂದ ಟ್ಯಾಲಿ ಕಲಿಯಲು ಇಲ್ಲಿಗೆ ಬಂದಿದ್ದೇನೆ. ಇದರಿಂದ ನನಗೆ ಸಾಕಷ್ಟು ಅನುಕೂಲವಾಗಿದೆ’ ಎಂದರು ಸುರೇಖಾ ಘಾಟಗಿ.

‘ನಾನು ಬೇರೆಡೆ ಕಂಪ್ಯೂಟರ್‌ ಕಲಿತಿದ್ದೆ. ಆದರೆ ಕೆಲಸಕ್ಕೆ ಹೋದಾಗ ಅಲ್ಲಿನ ಅಗತ್ಯಕ್ಕೆ ಅದು ಯಾವುದೂ ಉಪಯೋಗವಾಗಲಿಲ್ಲ. ಹೀಗಾಗಿ, ಇಲ್ಲಿ ಸೇರಿಕೊಂಡೆ. ಈಗ ನನ್ನ ಕೆಲಸಕ್ಕೆ ಅಗತ್ಯವಿರುವ ಎಲ್ಲವನ್ನು ಇಲ್ಲಿ ಕಲಿತಿದ್ದೇನೆ. ಇಲ್ಲಿ ಸಮಯದ ನಿರ್ಬಂಧವಿಲ್ಲ. ಸ್ನೇಹಮಯವಾಗಿ ಎಲ್ಲವನ್ನೂ ಹೇಳಿಕೊಡುತ್ತಾರೆ’ ಎನ್ನುತ್ತಾರೆ ಆಶಾ.

‘ಬೇರೆ ಸಂಸ್ಥೆಗಳಲ್ಲಿ ಹಣ ಹೆಚ್ಚಾಗಿ ಪಡೆದರೂ ನಮಗೆ ಅಗತ್ಯವಾದದ್ದನ್ನು ಹೇಳಿಕೊಡುವುದಿಲ್ಲ. ಇಲ್ಲಿ ಶುಲ್ಕವೂ ಕಡಿಮೆ ಹಾಗೂ ತರಬೇತಿಯನ್ನು ವೈಯಕ್ತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಹೇಳಿಕೊಡುತ್ತಾರೆ. ಹೀಗಾಗಿ ನಮಗೆ ಸಾಕಷ್ಟು ಅನುಕೂಲವಾಗಿದೆ’ ಎಂದರು ಶ್ವೇತಾ, ಶ್ರುತಿ, ದೀಪಾ.

‘ಜ್ಞಾನವಿಕಾಸದ ತರಬೇತಿಗಳಿಗೆ ಕನಿಷ್ಠ ಶುಲ್ಕವನ್ನು ಪಡೆಯಲಾಗುತ್ತದೆ. ಸಂಘದ ಸದಸ್ಯರಾಗಿದ್ದರೆ ಅವರ ಕುಟುಂಬಕ್ಕೆ ಶುಲ್ಕ ಇನ್ನೂ ಕಡಿಮೆ. ಟೈಲರಿಂಗ್‌ಗೆ ಅಗತ್ಯವಾಗಿರುವ
ಕ್ಯಾಡ್‌ ತಂತ್ರಜ್ಞಾನದ ತರಬೇತಿಯೂ ಸದ್ಯದಲ್ಲಿಯೇ ಆರಂಭವಾಗಲಿದೆ’ ಎಂದು ಜ್ಞಾನವಿಕಾಸದ ನಿರ್ದೇಶಕ ಪ್ರಕಾಶ ಭಟ್‌ ತಿಳಿಸಿದರು.

ತರಬೇತಿ ವಿಧಾನಗಳು: ಪ್ರಾತ್ಯಕ್ಷಿಕೆ, ಗುಂಪುಚರ್ಚೆ, ಬೋಧನೆ, ರಸಪ್ರಶ್ನೆ, ಕಾರ್ಯಾಗಾರ, ಆಟದೊಂದಿಗೆ ಪಾಠ, ಮನರಂಜನೆ ಮತ್ತು ಸ್ಪರ್ಧೆ, ಮೌಲ್ಯಮಾಪನ, ಅಧ್ಯಯನ ಪ್ರವಾಸ, ಕ್ಷೇತ್ರ ಸಂದರ್ಶನ, ತಂತ್ರಜ್ಞಾನದ ಬಳಕೆ, ಪ್ರಾಯೋಗಿಕ ಕಲಿಕೆ.

ಜ್ಞಾನವಿಕಾಸ ತರಬೇತಿ ಸಂಸ್ಥೆ ಎಲ್ಲಿದೆ?

ಹುಬ್ಬಳ್ಳಿ–ಧಾರವಾಡಗಳ ನಡುವಿರುವ ರಾಯಾಪುರದ ಅವಳಿ ಕೆರೆಗಳ ಸಮೀಪವಿದೆ. ಮಾಹಿತಿಗೆ: ಜ್ಞಾನವಿಕಾಸ ತರಬೇತಿ ಸಂಸ್ಥೆ, ದೂ: 0836–2970791;
ಇಮೇಲ್‌: skdrdpjvti@gmail.com

ಮಹಿಳೆ, ಪುರುಷ ಎಂಬ ಭೇದವಿಲ್ಲದೆ ವರ್ಗದ ಜನರಿಗೆ ತರಬೇತಿ ನೀಡಿ, ಉದ್ಯೋಗಗಳ ಮೂಲಕ ಆರ್ಥಿಕವಾಗಿ ಸಬಲಗೊಳಿಸುವುದು ಸಂಸ್ಥೆಯ ಉದ್ದೇಶ. ಈ ನಿಟ್ಟಿನಲ್ಲಿ ಜ್ಞಾನವಿಕಾಸ ಸಂಸ್ಥೆ ಧಾರವಾಡದಲ್ಲಿ ಅತಿದೊಡ್ಡ ತರಬೇತಿ ಸೌಲಭ್ಯವನ್ನು ಹೊಂದಿದ್ದು, ಅಗತ್ಯವಾದ ತರಬೇತಿಯನ್ನು ಕನಿಷ್ಠ ಶುಲ್ಕದಲ್ಲಿ ಒದಗಿಸುತ್ತಿದೆ

ಡಾ. ಪ್ರಕಾಶ ಭಟ್‌, ನಿರ್ದೇಶಕ, ಜ್ಞಾನವಿಕಾಸ ತರಬೇತಿ ಸಂಸ್ಥೆ

Post Comments (+)