ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಶಾಲೆ ಆರಂಭಕ್ಕೆ ಖಂಡನೆ: ಗೌರವಧನ ವಾಪಸ್

ಪೂರ್ಣಕುಂಭ ಮೆರವಣಿಗೆಗೂ ವಿರೋಧ
Last Updated 6 ಜನವರಿ 2019, 19:04 IST
ಅಕ್ಷರ ಗಾತ್ರ

ಡಾ.ಡಿ.ಸಿ.ಪಾವಟೆ ವೇದಿಕೆ (ಧಾರವಾಡ): ಸಮ್ಮೇಳನದ ಸಮಾನಾಂತರ ವೇದಿಕೆ–2ರಲ್ಲಿ ನಡೆದ ಮೂರನೇ ಕವಿಗೋಷ್ಠಿಯಲ್ಲಿ ಕೆಲ ಕವಿಗಳು ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಹಾಗೂ ಇಂಗ್ಲಿಷ್ ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದರು.

ಕವಿ ಡಾ.ಕೆ.ಪಿ.ನಟರಾಜು ‘ಕನ್ನಡದ ಕತ್ತು ಹಿಸುಕುತ್ತಿರುವ ಸರ್ಕಾರದ ಕ್ರಮ ಹಾಗೂ ಮಹಿಳೆಯರಿಂದ ಕಿಲೋಮೀಟರ್ ಗಟ್ಟಲೆ ಪೂರ್ಣ ಕುಂಭ ಮೆರವಣಿಗೆ ನಡೆಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಡತ್ವಕ್ಕೆ ನನ್ನ ವಿರೋಧವಿದೆ’ ಎಂದು ಹೇಳಿ ‘ಬುದ್ಧ’ ಕವನ ವಾಚಿಸಿದರು.

ಇದಕ್ಕೂ ಮುನ್ನಕವಿ ಕಾರಹಳ್ಳಿ ಶ್ರೀನಿವಾಸ ಅವರು ‘ನಮ್ಮೂರ ಶಾಲೆ’ ಕವನ ಓದಿ ಮುಗಿಸುತ್ತಿದ್ದಂತೆ ಸಭಿಕರಲ್ಲಿದ್ದ ಮಹಿಳೆಯೊಬ್ಬರು ‘ಇಂಗ್ಲಿಷ್ ಶಾಲೆ ಉಳಿಸಿ, ಕನ್ನಡ ಶಾಲೆಗಳನ್ನು ಸಾಯಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಜೋರಾಗಿ ಘೋಷಣೆ ಕೂಗಿದರು.

ಕವಯತ್ರಿ ಅನುಪಮಾ ಪ್ರಸಾದ್ ತಮ್ಮ ಕವನ ವಾಚನಕ್ಕೂ ಮುನ್ನ ‘ಪೂರ್ಣಕುಂಭ ಮೆರವಣಿಗೆಗೆ ನನ್ನ ವಿರೋಧವಿದೆ’ ಎಂದು ಹೇಳಿ ಕವಿತೆ ವಾಚಿಸಿದರು.

ಕವಯತ್ರಿ ದಾಕ್ಷಾಯಣಿ ಹುಡೇದ ಅವರು ‘ಪೂರ್ಣಕುಂಭ ವಿರೋಧ’ ಕುರಿತಾಗಿಯೇ ಕವಿತೆ ವಾಚಿಸಿದರು. ನಂತರ ಸಮ್ಮೇಳನದ ಆಯೋಜಕರು ತಮಗೆ ನೀಡಿರುವ ಗೌರವಧನ ವಾಪಸ್ ನೀಡುತ್ತಿದ್ದೇನೆ ಎಂದು ಪ್ರಕಟಿಸಿದರು. ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಯತ್ರಿ ಪ್ರೊ.ಬಿ.ಸುಕನ್ಯಾ ಅವರ ಬಳಿಗೆ ತೆರಳಿ ಗೌರವಧನ ಕವರ್ ಅನ್ನು ಹಿಂತಿರುಗಿಸಲು ಮುಂದಾದರು. ಆಗ ಸುಕನ್ಯಾ ಅವರು ‘ನಾನು ಕಸಾಪ ಪ್ರತಿನಿಧಿ ಅಲ್ಲ. ದಯಮಾಡಿ ನೀವು ಆಯೋಜಕರಿಗೇ ಹಿಂತಿರುಗಿಸಿ’ ಎಂದರು.

ಕವಿಗೋಷ್ಠಿಯಲ್ಲಿ ಸಭಿಕರಾಗಿ ಪಾಲ್ಗೊಂಡಿದ್ದ ಹೊಸಪೇಟೆಯ ನಿವೃತ್ತ ಉಪನ್ಯಾಸಕ ದಾರೂಕಾಚಾರ್ಯ ಸೂರ್ಯಮಠ ಅವರು ‘ಮಹಿಳೆಯರನ್ನು ಪೂರ್ಣಕುಂಭ ಮೆರವಣಿಗೆಗೆ ಬಳಸಿಕೊಂಡಿದ್ದು ಸರಿಯಲ್ಲ. ಇಂಥ ಕಾರ್ಯಕ್ರಮಗಳಿಗೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಬಾರದು ಎಂದು ಇಲಾಖೆಯ ನಿಯಮವೇ ಇದೆ. ಇಲ್ಲಿ ಪರಿಷತ್ ನಿಯಮ ಉಲ್ಲಂಘಿಸಿದೆ. ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ನಡೆಯಬೇಕೇ ಹೊರತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅಲ್ಲ’ ಎಂದು ಅಭಿಪ್ರಾಯಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT