ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರ ಸ್ಥಿತಿ – ಗತಿ: ಸ್ಪರ್ಧೆಗೆ ಪೈಪೋಟಿ

ಹುಬ್ಬಳ್ಳಿ– ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ, ಹೆಚ್ಚಿದ ಆಕಾಂಕ್ಷಿಗಳು
Last Updated 7 ಮಾರ್ಚ್ 2023, 3:08 IST
ಅಕ್ಷರ ಗಾತ್ರ

ಧಾರವಾಡ: ಅವಳಿ ನಗರದ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳಾದ ಸಿದ್ಧಾರೂಢ ಮಠ ಹಾಗೂ ಮುರುಘಾಮಠ ನಡುವಿನ ಹುಬ್ಬಳ್ಳಿ– ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಪ್ರಬುದ್ಧರ, ಸುಶಿಕ್ಷಿತರ ಕ್ಷೇತ್ರ ಎಂದೇ ಬಿಂಬಿತವಾಗಿದೆ.

1957ರಿಂದ ಇಲ್ಲಿಯವರೆಗೂ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್‌, ಒಂದು ಬಾರಿ ಜೆಎನ್‌ಪಿ ಗೆದ್ದಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚಂದ್ರಕಾಂತ ಬೆಲ್ಲದ ಅವರು ಒಂದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಂತರ ಅವರು ಬಿಜೆಪಿ ಸೇರಿದ ನಂತರ ಎರಡು ಬಾರಿ ಆಯ್ಕೆಯಾದರು. ರಾಜಕೀಯ ನಿವೃತ್ತಿ ಬಳಿಕ ಅವರ ಪುತ್ರ ಅರವಿಂದ ಬೆಲ್ಲದ ಅವರು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

ಎಂಜಿನಿಯರಿಂಗ್ ಪದವೀಧರ ಹಾಗೂ ಉದ್ಯಮಿಯಾಗಿರುವ ಅರವಿಂದ ಬೆಲ್ಲದ ಅವರು, 2013 ಹಾಗೂ 2018ರ ಚುನಾವಣೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿ ದೊಡ್ಡ ಗೆಲುವು ದಾಖಲಿಸಿದರು. 2018ರ ಚುನಾವಣೆ ಸಂದರ್ಭದಲ್ಲಿ ಕೈಗೊಂಡ ಕೆಲ ಕಾಮಗಾರಿಗಳ ಭೂಮಿಪೂಜೆ ಹಾಗೂ ಶಂಕುಸ್ಥಾಪನೆಗಳು ಜನರಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದವು. ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳು ಸ್ಥಾಪನೆಗೊಂಡಿರುವುದೂ ಸೇರಿದಂತೆ ಹಿಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳೇ ಈ ಬಾರಿಯೂ ಚರ್ಚೆಗೊಳ್ಳುವ ಸಾಧ್ಯತೆ ಇವೆ.

ಹಿಂದಿನ ಎರಡು ಅವಧಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿತ್ತು. ಆದರೆ, ಹಲವು ಅಭಿವೃದ್ಧಿ ಕಾರ್ಯಗಳು ಮತ್ತು ಬಡವರಿಗೆ ಸೂರು ಒಗಿಸಿದ್ದ ಎಸ್‌.ಆರ್.ಮೋರೆ ಅವರ ಅಗಲಿಕೆ ನಂತರ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ನಾಯಕತ್ವ ಕೊರತೆಯನ್ನು ಭರಿಸುವ ನಿಟ್ಟಿನಲ್ಲಿ ಈ ಬಾರಿ ಬರೋಬ್ಬರಿ 10 ಅಭ್ಯರ್ಥಿಗಳು ಕಾಂಗ್ರೆಸ್‌ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ನಾಗರಾಜ ಗೌರಿ, ಬಸವರಾಜ ಮಲಕಾರಿ, ಆರ್.ಕೆ.ಪಾಟೀಲ ಹಾಗೂ ಮೋರೆ ಅವರ ಪುತ್ರಿ ಕೀರ್ತಿ ಮೋರೆ, ಪಾಲಿಕೆಯ ಯುವ ಸದಸ್ಯ ಹಾಗೂ ಡಾ. ಮಯೂರ ಮೋರೆ ಸೇರಿದಂತೆ ಹಲವರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಇವರೆಲ್ಲರೂ ಪಾದಯಾತ್ರೆ, ಮುಷ್ಕರಗಳಿಗೆ ಬೆಂಬಲ, ಆರೋಗ್ಯ ಶಿಬಿರ, ಬಡವರಿಗೆ ನೆರವು ಸೇರಿದಂತೆ ಹಲವು ಕಾರ್ಯಗಳ ಮೂಲಕ ಮತದಾರರ ಮನದ ಕದ ತಟ್ಟುವ ಕೆಲಸ ನಡೆಸಿದ್ದಾರೆ.

ಹಿಂದಿನಿಂದಲೂ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿಯ ಕಣವಾಗಿದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಧಾರವಾಡವನ್ನು ತೀವ್ರವಾಗಿ ಕಡೆಗಣಿಸಲಾಗಿದೆ ಎಂಬ ಆರೋಪ ಧಾರವಾಡ ಜನರನ್ನು ಬಹುವಾಗಿ ಕಾಡಿದೆ. ಹೀಗಾಗಿ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದೆ. ಜತೆಗೆ ಎಎಪಿ ಮತ್ತು ಜೆಡಿಎಸ್‌ ಪಕ್ಷವೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕದನ ಕುತೂಹಲ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT