ಬುಧವಾರ, ಅಕ್ಟೋಬರ್ 28, 2020
20 °C
ವಾಣಿಜ್ಯನಗರಿಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಮಧ್ಯಾಹ್ನಕ್ಕೆ ನಗರ ಸಹಜ ಸ್ಥಿತಿಗೆ

ಹುಬ್ಬಳ್ಳಿ: ಸರ್ಕಾರಗಳ ವಿರುದ್ಧ ಹೊರಹೊಮ್ಮಿದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕರ್ನಾಟಕ ಬಂದ್‌ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸೋಮವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿಯೇತರ ರಾಜಕೀಯ ಪಕ್ಷಗಳು ಸೇರಿದಂತೆ, ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದ ಬಂದ್‌, ಮಧ್ಯಾಹ್ನದವರೆಗೆ ಮಾತ್ರ ಸೀಮಿತವಾಗಿತ್ತು. ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

ಬೆಳಿಗ್ಗೆಯೇ ಚನ್ನಮ್ಮನ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಂಘಟನೆಗಳ ಸದಸ್ಯರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಕೃಷಿ, ಎಪಿಎಂಸಿ, ಕಾರ್ಮಿಕ ಹಾಗೂ ಭೂ ಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಬೆಳಿಗ್ಗೆ ಹೆಚ್ಚಾಗಿದ್ದ ಬಂದ್ ಕಾವು, ಮಧ್ಯಾಹ್ನದ ಹೊತ್ತಿಗೆ ತಣ್ಣಗಾಯಿತು. ಆಟೊ ಮತ್ತು ಟ್ಯಾಕ್ಸಿ ಸೇವೆ ಬಂದ್ ಆಗಿತ್ತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿನ ಹೋಟೆಲ್‌ಗಳು, ಅಂಗಡಿಗಳು, ಬಾರ್ ಅಂಡ್ ರೆಸ್ಟೊರೆಂಟ್‌ಗಳು ಮಧ್ಯಾಹ್ನದವರೆಗೆ ಬಹುತೇಕ ಮುಚ್ಚಿದ್ದವು. ಜನರ ಓಡಾಟವೂ ಎಂದಿಗಿಂತ ಕಡಿಮೆ ಇತ್ತು.

ಎಪಿಎಂಸಿ, ದುರ್ಗದ ಬೈಲ್ ಸೇರಿದಂತೆ ಕೆಲ ಮಾರುಕಟ್ಟೆ ಪ್ರದೇಶಗಳು ಜನರಿಲ್ಲದೆ ಭಣಗುಡುತ್ತಿದ್ದವು. ಬಿಆರ್‌ಟಿಎಸ್, ನಗರ ಸಾರಿಗೆ ಬಸ್‌ಗಳು ಹಾಗೂ ಇತರ ವಾಹನಗಳ ಸಂಚಾರ ನಿಯಮಿತವಾಗಿತ್ತು. ನಗರದ ಹೊರಭಾಗದ ಗಬ್ಬರೂ ಕ್ರಾಸ್ ಟೋಲ್, ಗದಗ ರಸ್ತೆ ಸೇರಿದಂತೆ ವಿವಿಧೆಡೆ ಯಥಾ ಸ್ಥಿತಿ ಇತ್ತು. 

ಪ್ರತ್ಯೇಕ ಪ್ರತಿಭಟನೆ:

ಬಂದ್ ಬೆಂಬಲಿಸಿದ್ದ ಕಾಂಗ್ರೆಸ್, ಜೆಡಿಎಸ್, ಬಿಎಸ್‌ಪಿ ರಾಜಕೀಯ ಪಕ್ಷಗಳು ಸೇರಿದಂತೆ ರೈತ, ಕಾರ್ಮಿಕ, ದಲಿತ, ಆಟೊ, ಟ್ಯಾಕ್ಸಿ, ಬೀದಿ ವ್ಯಾಪಾರಿಗಳು, ಕನ್ನಡಪರ ಸಂಘಟನೆಗಳ ಸದಸ್ಯರು ಚನ್ನಮ್ಮನ ವೃತ್ತದಲ್ಲಿ ಗುಂಪು ಗುಂಪಾಗಿ ಪ್ರತ್ಯೇಕವಾಗಿ ಪ್ರತಿಭಟಿಸಿದರು. 

ಕೆಲ ಸಂಘಟನೆಗಳ ಸದಸ್ಯರು ಬೆಳಿಗ್ಗೆಯೇ ಹಳೇ ಬಸ್ ನಿಲ್ದಾಣ ಹಾಗೂ ಗೋಕುಲ ರಸ್ತೆಯ ಬಸ್ ಡಿಪೊಗಳ ಬಸ್‌ ಸಂಚಾರಕ್ಕೆ ಕೆಲ ಹೊತ್ತು  ತಡೆಯೊಡ್ಡಿ, ಬಳಿಕ ಚನ್ನಮ್ಮನ ವೃತ್ತದಲ್ಲಿ ಜಮಾಯಿಸಿದರು.

ಪ್ರತಿಕೃತಿ ದಹನ:

ಹುಬ್ಬಳ್ಳಿ ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ಸದಸ್ಯರು ಹಾಗೂ ಎಐಟಿಯುಸಿ ಸಂಘಟನೆಯವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರತಿಕೃತಿಗಳನ್ನು ಶವದ ಮಾದರಿಯಲ್ಲಿ ಚನ್ನಮ್ಮನ ವೃತ್ತಕ್ಕೆ ಹೊತ್ತು ತಂದರು. ಬಳಿಕ, ಅವುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.

ಬಿಗಿ ಬಂದೋಬಸ್ತ್:

ಅಹಿತಕರ ಘಟನೆಗಳು ನಡೆಯದಂತೆ ಚನ್ನಮ್ಮನ ವೃತ್ತದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಪೊಲೀಸರು ಗುಂಪು ಗುಂಪಾಗಿ ನಿಂತಿದ್ದ ದೃಶ್ಯ ಕಂಡುಬಂತು. ಸಂಘಟನೆಗಳ ಪ್ರತಿಭಟನೆಯ ವಿಡಿಯೊ ಚಿತ್ರೀಕರಿಸಿಕೊಂಡರು. ಪೊಲೀಸ್ ಕಮಿಷನರ್ ಆರ್. ದಿಲೀಪ್ ಸ್ಥಳಕ್ಕೆ ಭೇಟಿ ನೀಡಿದರು. 

ಪ್ರತಿಭಟನಾಕಾರರು ಜಮಾಯಿಸಿದ್ದ ಚನ್ನಮ್ಮನ ವೃತ್ತವನ್ನು ಸಂಪರ್ಕಿಸುವ ಭಗತ್ ಸಿಂಗ್ ವೃತ್ತ, ಈಜು ಕೋಳ ವೃತ್ತ ಸೇರಿದಂತೆ, ಕೆಲ ಪ್ರಮುಖ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡವಾಗಿ ಇಟ್ಟಿದ್ದರು. ವಾಹನ ಸವಾರರನ್ನು ಬೇರೆ ಮಾರ್ಗದ ಮೂಲಕ ಕಳಿಸಿದರು.

ಉಪಾಹಾರ ವಿತರಣೆ:

ಜೆಡಿಎಸ್ ವತಿಯಿಂದ ಪ್ರತಿಭಟನಾಕಾರರಿಗೆ ಚನ್ನಮ್ಮನ ವೃತ್ತದಲ್ಲಿ ಮಧ್ಯಾಹ್ನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಟ್ರಾಕ್ಟರ್‌ನಲ್ಲಿ ತಂದಿದ್ದ ಉಪಾಹಾರವನ್ನು ಕಾರ್ಯಕರ್ತರು ಸ್ಥಳದಲ್ಲಿದ್ದವರಿಗೆ ವಿತರಿಸಿದರು. ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎನ್‌.ಎಚ್. ಕೋನರಡ್ಡಿ ಟ್ರಾಕ್ಟರ್ ಚಲಾಯಿಸಿ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ತಮಟೆಗಳ ಸದ್ದು ಕೇಳಿ ಬಂತು. ದಲಿತ ವಿಮೋಚನಾ ಸಮಿತಿಯರು ಭಜನೆ ಹಾಡುವ ಮೂಲಕ ಗಮನ ಸೆಳೆದರು. ಆಮ್ ಆದ್ಮಿ ಪಕ್ಷದವರು ಪ್ರತಿಭಟನೆ ಬಳಿಕ, ಸ್ಥಳವನ್ನು ಸ್ವಚ್ಛಗೊಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು