ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇವು ನೀಡಿ ಔದಾರ್ಯ ಮೆರೆದ ಗ್ರಾಮಸ್ಥರು

ಪ್ರವಾಹಕ್ಕೆ ಕೊಚ್ಚಿ ಹೋದ ಮೇವು; ಸಂಕಷ್ಟಕ್ಕೆ ಸಿಲುಕಿದ ಜಾನುವಾರು
Last Updated 17 ಆಗಸ್ಟ್ 2019, 6:09 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಜನ ನೆರೆಗೆ ನಲುಗಿದ್ದರೂ, ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿರುವ ನೂರಾರು ಮೂಕ ಪ್ರಾಣಿಗಳಿಗೆ ಮೇವು ನೀಡುವ ಮೂಲಕ ತಮ್ಮ ಔದಾರ್ಯ ಮೆರೆದಿದ್ದಾರೆ.

ಗುಣಮಟ್ಟದ ವಿಭೂತಿ ಸಿದ್ಧತೆಗೆ ಹೆಸರಾಗಿರುವ ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿ 600ಕ್ಕೂ ಹೆಚ್ಚು ಜಾನುವಾರು ಇವೆ. ದೇಸಿ ತಳಿಯ ಈ ಆಕಳು ಸಗಣಿಯಿಂದ ವಿಭೂತಿ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿಯೇ ಮಠ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ.

ಮಲಪ್ರಭಾ ನದಿ ದಂಡೆಯಲ್ಲಿರುವ ಈ ಮಠದ 400 ಎಕರೆ ಪ್ರದೇಶದ ಬಹುಪಾಲು ಇತ್ತೀಚೆಗೆ ಸುರಿದ ಮಹಾಮಳೆಗೆ ಮುಳುಗಿತ್ತು. ಇದರಲ್ಲಿನ 100 ಎಕರೆಯ ಮೇವಿನ ಗುಡ್ಡದಲ್ಲಿ ಜಾನುವಾರುಗಳನ್ನು ಇಟ್ಟು ಅವುಗಳನ್ನು ರಕ್ಷಿಸಲಾಯಿತು. ಆದರೆ ಇವುಗಳಿಗಾಗಿ ಬೆಳೆಸಲಾಗಿದ್ದ ಮೇವಿನ ಬೆಳೆ ಪ್ರವಾಹದಲ್ಲಿ ಕೊಚ್ಚಿಹೋಯಿತು. ಹೀಗಾಗಿ ಮಠದ ಮುಖ್ಯಸ್ಥರಾದ 83 ವರ್ಷದ ಡಾ.ಸಂಗನಬಸವ ಸ್ವಾಮೀಜಿ ಅವರು ಮೇವಿನ ದೇಣಿಗೆಗಾಗಿ ಭಕ್ತರನ್ನುಕೇಳಿದರು.

ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಧಾರವಾಡ ತಾಲ್ಲೂಕು ಬಹಳಷ್ಟು ಮಂದಿ ಲೋಡುಗಟ್ಟಲೆ ಒಣಮೇವನ್ನು ಮಠಕ್ಕೆ ಕಳುಹಿಸಿದ್ದಾರೆ. ತಮ್ಮಲ್ಲೇ ನೆರೆ ಬಂದಿದ್ದರೂ, ಮಠದ ಜಾನುವಾರುಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಯಮನೂರು ಗ್ರಾಮದ ಯುವಕ ವಿಶ್ವನಾಥ ಸರಾವರಿ, ‘ನಮ್ಮ ತಾಲ್ಲೂಕಿನಲ್ಲೂ ತೊಂದರೆಯಾಗಿದೆ. ಇಲ್ಲಿಯೂ ಬೆಳೆ ನಷ್ಟವನ್ನು ರೈತರು ಅನುಭವಿಸಿದ್ದಾರೆ. ಆದರೆ ಶಿವಯೋಗಿ ಮಂದಿರದಲ್ಲಿ ನೂರಾರು ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಅಲ್ಲಿಗೆ ನೆರವಾಗಲು ಇಚ್ಛಿಸಿ, ಯುವಕರ ತಂಡವನ್ನು ಕಟ್ಟಿ ಮೇವು ಸಂಗ್ರಹಿಸಿದೆವು’ ಎಂದರು.

‘ಮಠದಲ್ಲಿ ಮೇವಿನ ಕೊರತೆ ಕುರಿತು ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಬಂತು. ಊರಿನ ಕೆಲವರು ಮಠಕ್ಕೆ ಹೋಗಿ ವಿಚಾರಿಸಿಕೊಂಡು ಬಂದೆವು. ಅದರಂತೆಯೇ ತಮ್ಮ ಶಕ್ತಿಗೆ ಅನುಸಾರವಾಗಿ ದಾನ ನೀಡಲು ಪ್ರತಿಯೊಬ್ಬರಲ್ಲೂ ಮನವಿ ಮಾಡಿಕೊಂಡೆವು. ಕೆಲವರು ತಮ್ಮಲ್ಲಿರುವ ಹೊಟ್ಟು, ಮೇವು ನೀಡಿದರು. ಕೆಲವರು ಗೋಧಿ, ಜೋಳ, ಅಕ್ಕಿ ನೀಡಿದರು. ಇನ್ನೂ ಕೆಲವರು ಹಣ ನೀಡಿದರು. ಹೀಗೆ ಸಂಗ್ರಹವಾಗಿದ್ದನ್ನು ಮಠಕ್ಕೆ ನೀಡಿ ರಶೀದಿ ಪಡೆಯಲಾಗಿದೆ’ ಎಂದು ವಿವರಿಸಿದರು.

ಮಠದ ಮೇವಿನ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಇಷ್ಟಲಿಂಗ ಶಿರಸಿ ಪ್ರತಿಕ್ರಿಯಿಸಿ, ‘ನದಿ ದಂಡೆಯಲ್ಲೇ ಇರುವ ಮಠಕ್ಕೆ ಆ. 11ರಂದು ಭಾರಿ ಪ್ರಮಾಣದ ನೀರು ನುಗ್ಗಿತು. ಮೇವಿನ ಗುಡ್ಡದಲ್ಲಿ ಜಾನುವಾರುಗಳನ್ನು ಇಟ್ಟು ರಕ್ಷಿಸಿದೆವು. ಆದರೆ ಭಾರೀ ಪ್ರಮಾಣದ ಮೇವು ನಷ್ಟವಾಗಿದೆ. ಹೀಗಾಗಿ ಮಠದ
ಭಕ್ತರಿಂದ ಹಾಗೂ ದಾನಿಗಳಿಂದ ಒಣ ಮೇವು ಸಂಗ್ರಹಿಸುತ್ತಿದ್ದೇವೆ. ಸ್ವಾಮೀಜಿ ಅವರೇ ಇದರ ನೇತೃತ್ವ ವಹಿಸಿದ್ದಾರೆ’ ಎಂದರು.

‘ಧಾರವಾಡ, ಗದಗ, ಹಾವೇರಿ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಆದರೆ ಬಹಳಷ್ಟು ದಾನಿಗಳು ಹಸಿ ಮೇವು ಕಳುಹಿಸುತ್ತಿದ್ದಾರೆ. ಇದನ್ನು ಮೂರು ದಿನಗಳ ಒಳಗಾಗಿ ಖಾಲಿ ಮಾಡಬೇಕು. ಆದರೆ ಮಠಕ್ಕೆ ಮುಂದಿನ 6 ತಿಂಗಳಿಗೆ ಆಗುವಷ್ಟು ಮೇವಿನ ಅಗತ್ಯವಿದೆ. ಹೀಗಾಗಿ ಒಣಮೇವನ್ನೇ ಹೆಚ್ಚಾಗಿ ನೀಡುವಂತೆ ಕೋರಿದ್ದೇವೆ. ಮಠದೊಂದಿಗೆ ನಿರಂತರ ಸಂಪರ್ಕದಲ್ಲಿರುವ ಬಹಳಷ್ಟು ಭಕ್ತರು ತಾವು ಕಷ್ಟದಲ್ಲಿದ್ದರೂ, ತಮ್ಮ ಕೈಯಲ್ಲಾದ ಸಹಾಯವನ್ನು ಮಾಡುತ್ತಿದ್ದಾರೆ. ಆರು ತಿಂಗಳ ಒಳಗಾಗಿ ಹಾಳಾಗಿರುವ ಜಮೀನನ್ನು ಉಳುಮೆಗೆ ಸಿದ್ಧಪಡಿಸಿ, ಮೇವಿನ ಬೆಳೆ ಬೆಳೆಯಲಾಗುವುದು’ ಎಂದರು.

ಮೇವು ನೀಡಲು ಇಚ್ಛಿಸುವವರು ಬಸವರಾಜ (78927 86408) ಸಂಪರ್ಕಿಸಬಹುದು ಎಂದು ಇಷ್ಟಲಿಂಗ ಶಿರಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT