ಭಾನುವಾರ, ಜೂನ್ 26, 2022
26 °C

ಧಾರವಾಡ: ಅದೃಷ್ಟದ ಅಂಬಾಸೆಡರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಬಸವರಾಜ ಹೊರಟ್ಟಿ ಅವರು ತಮ್ಮ ಅದೃಷ್ಟದ ಅಂಬಾಸೆಡರ್ ಕಾರಿನಲ್ಲಿ ಬಂದು ಮಂಗಳವಾರ ನಾಮಪತ್ರ ಸಲ್ಲಿಸಿದರು.

1980ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದಾಗಲೂ ತಮ್ಮ ನೆಚ್ಚಿನ ‘ಸಿಎನ್‌ಬಿ 5757’ ನೋಂದಣಿ ಸಂಖ್ಯೆಯ ಅಂಬಾಸೆಡರ್‌ ಕಾರಿನಲ್ಲೇ ಬಂದು ನಾಮಪತ್ರ ಸಲ್ಲಿಸಿದ್ದರು. ಮಂಗಳವಾರವೂ ತಮ್ಮ ಹೇಮಲತಾ ಅವರೊಂದಿಗೆ ಅದೇ ಕಾರಿನಲ್ಲಿ ಬಂದ ಹೊರಟ್ಟಿ ಸಹಾಯಕ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು.

ಹೊರಟ್ಟಿ ಅವರೊಂದಿಗೆ ಅವರ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಗಳವಾರ 2 ಪ್ರತಿ ನಾಮಪತ್ರ ಸಲ್ಲಿಸಿದ್ದೇನೆ. ಮೇ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಬಂದು ಮತ್ತೊಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

‘ದೇಶದ ಇತಿಹಾಸದಲ್ಲೇ ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಯಾರೂ ಗೆದ್ದಿಲ್ಲ. 8ನೇ ಬಾರಿ ಆಯ್ಕೆಯಾದಲ್ಲಿ ದಾಖಲೆ ಆಗಲಿದೆ. ಅದಕ್ಕಾಗಿಯೇ ಎಲ್ಲರೂ ನನ್ನತ್ತ ಒಲವು ತೋರಿಸುತ್ತಿದ್ದಾರೆ’ ಎಂದರು.

ತಮ್ಮ ಅಂಬಾಸೆಡರ್ ಕಾರಿನ ಕುರಿತು ಮಾತನಾಡಿದ ಹೊರಟ್ಟಿ, ‘ಈ ಕಾರಿನ ಮೇಲೆ ನನಗೇನೋ ಭಾವನಾತ್ಮಕ ಸಂಬಂಧ. ಆ ಪ್ರೀತಿಗಾಗಿ ಕಾರು ತೆಗೆದುಕೊಂಡು ಬಂದಿದ್ಧೇನೆ. ಈವರೆಗೂ 8 ಲಕ್ಷ ಕಿ.ಮೀ. ಓಡಿದೆ. ಶುಭಕಾರ್ಯಗಳಿಗೆ ಈ ಕಾರು ಒಳ್ಳೆಯದು ಎಂಬ ನಂಬಿಕೆ ನಮ್ಮದು. ಹೀಗಾಗಿ ಅಂಥ ಸಂದರ್ಭದಲ್ಲಿ ಈ ಕಾರು ಬಳಸುತ್ತೇವೆ’ ಎಂದರು.

ಮತಯಾಚನೆ
ಬಸವರಾಜ ಹೊರಟ್ಟಿ ಅವರು ಧಾರವಾಡದ ಬಾಸೆಲ್ ಮಿಷನ್ ಇಂಗ್ಲಿಷ್ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮದಾರಮಡ್ಡಿಯ ಸರ್ಕಾರಿ ಪ್ರೌಢಶಾಲೆ, ಆರ್‌ಎಲ್‌ಎಸ್ ಶಿಕ್ಷಣ ಸಂಸ್ಥೆ, ಕೆ.ಇ.ಬೋರ್ಡ್ ಶಿಕ್ಷಣ ಸಂಸ್ಥೆಯಲ್ಲಿ ಸಮಾಲೋಚನಾ ಸಭೆ ನಡೆಸಿದರು.

‘ಶಾಸಕರಾಗಿ, ಸಚಿವರಾಗಿ, ಸಭಾಪತಿಯಾಗಿ ಹಲವಾರು ಸಾಧನೆಗಳನ್ನು ಮಾಡಿದ್ದೇನೆ. ಸಚಿವನಾಗಿದ್ದ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಆದೇಶಗಳ ಮೂಲಕ ಶಿಕ್ಷಣ ರಂಗದ ಬಹುತೇಕ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರ ಒತ್ತಾಸೆಯಂತೆ 8ನೇ ಬಾರಿ ಸ್ಪರ್ಧಿಸುತ್ತಿದ್ದೇನೆ. ಹೀಗಾಗಿ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಜಿ.ಆರ್.ಭಟ್, ಶ್ಯಾಮ್ ಮಲ್ಲನಗೌಡರ, ಅರುಣ ಕಲ್ಲೋಳಿಕರ, ದಯಾನಂದ ಮಾಸೂರ, ಐ.ಎಂ.ಮುಲ್ಲಾ, ಎಸ್.ಆರ್.ಮುರಕಟ್ಟಿ, ವರ್ಧಮಾನ ಕುರಕುರಿ, ಸಿಂಧೂ ಶಿರೂರ, ಮೀನಾಕ್ಷಿ ಹಿರೇಮಠ, ಸುಜಾತಾ ಬಾಸೂರ, ಎನ್.ಗೋವಿಂದರಡ್ಡಿ, ಎನ್.ಎನ್.ಸವಣೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು