ಧಾರವಾಡ: ಮೈಸೂರಿನ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಲೋಪಗಳು ನಡೆದಿವೆ ಎಂದು ಅಭ್ಯರ್ಥಿಯೊಬ್ಬರು ದಾಖಲಿಸಿದ ದೂರಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಪ್ರೊ.ಜೆ.ಎಲ್.ರಾಥೋಡ್ ಅವರನ್ನು ಅಮಾನತುಗೊಳಿಸಲಾಗಿದೆ.
‘ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಜಿನ್ನಾಂಬೆ ನೀಡಿದ ದೂರಿನ ಮೇರೆಗೆ ಪ್ರೊ.ಜೆ.ಎಲ್.ರಾಥೋಡ್ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್‌ಗೆ ರಾಥೋಡ್ ಅವರು ನೀಡಿರುವ ವಿವರಣೆ ಸಮಂಜಸವಾಗಿಲ್ಲ. ಹೀಗಾಗಿ, ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ‘ಪ್ರಜಾವಾಣಿ’ಗೆ ತಿಳಿಸಿದರು.
ದೂರಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ವಿಶ್ವವಿದ್ಯಾಲಯವು ಸತ್ಯಶೋಧನಾ ಸಮಿತಿ ರಚಿಸಿದೆ. ಸಮಿತಿಯು ಆಗಸ್ಟ್ 23ರಂದು ಕಾರವಾರ ಪಿ.ಜಿ. ಕೇಂದ್ರಕ್ಕೆ ಭೇಟಿ ನೀಡಿದೆ. ಪ್ರೊ.ರಾಥೋಡ್ ಅವರು ಸಮಿತಿಗೆ ದಾಖಲೆಗಳನ್ನು ಸಲ್ಲಿಸಲು 15 ದಿನ ಕಾಲಾವಕಾಶ ಕೋರಿದ್ದಾರೆ. ಸಮಿತಿಯು ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಿಲ್ಲ.
ಏನಿದು ಪ್ರಕರಣ?: ಮೈಸೂರಿನ ರೈಲ್ವೆ ಕೋ ಆಪರೇಟಿವ್ ಬ್ಯಾಂಕ್‌ನ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ಕಾರ್ಯನಿರ್ವಹಿಸಿದ ಪ್ರೊ.ಜೆ.ಎಲ್.ರಾಥೋಡ್ ಅವರ ವಿರುದ್ಧ ಬೆಂಗಳೂರಿನ ಜಿನ್ನಾಂಬೆ ಅವರು ಕುಲಪತಿಗೆ ದೂರು ನೀಡಿದ್ದರು. ಉತ್ತರ ಪತ್ರಿಕೆಯ (ಓಎಂಆರ್) ನಕಲು ಪ್ರತಿಯನ್ನು ಅಭ್ಯರ್ಥಿಗಳಿಗೆ ನೀಡಿಲ್ಲ, ಕೀ ಉತ್ತರಗಳಿಗೆ ಆಕ್ಷೇಪಣೆ ಆಹ್ವಾನಿಸಿಲ್ಲ, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.