ಮಂಗಳವಾರ, ಮಾರ್ಚ್ 31, 2020
19 °C

ಕಾಪಾಡಿಕೊಳ್ಳಿ ಕಿಡ್ನಿ ಆರೋಗ್ಯ: ಇಲ್ಲಿದೆ ನೋಡಿ ಸುದೀರ್ಘ ಟಿಪ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ (ಕಿಡ್ನಿ) ಮಹತ್ವದ್ದು. ದೇಹದಲ್ಲಿ ರಕ್ತ ಶುದ್ಧೀಕರಣ, ಮೂತ್ರ ವಿಸರ್ಜನೆ, ಹಲವು ಹಾರ್ಮೋನ್‌ಗಳ ಉತ್ಪಾದನೆಗೆ ಇದು ನೆರವಾಗುತ್ತದೆ. ಮೂತ್ರಪಿಂಡದ ಕಾರ್ಯಕ್ಷಮತೆ ಕುಸಿದರೆ ಬದುಕೇ ದುಸ್ತರ. ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಡಯಾಲಿಸಿಸ್‌ ಹಾಗೂ ಮೂತ್ರಪಿಂಡ ಕಸಿ ಮಾಡುವಂತಾಗುತ್ತದೆ.

ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವಿನ ಕೊರತೆಯಿಂದ ಮೂತ್ರಪಿಂಡ ಸಂಬಂಧಿ ರೋಗಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಓದುಗರ ಹತ್ತು ಹಲವು ಪ್ರಶ್ನೆಗಳಿಗೆ ಹುಬ್ಬಳ್ಳಿಯ ‘ತತ್ವದರ್ಶ’ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ್ ಮೊಗೇರ್‌ ಉತ್ತರಿಸಿದ್ದಾರೆ.

ಗೀತಾ, ರಾಜನಗರ, ಹುಬ್ಬಳ್ಳಿ:ಟೊಮೆಟೊ ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುತ್ತದೆ ಎನ್ನುವುದು ನಿಜವೇ?

ಟೊಮೆಟೊ ಹಾಗೂ ಕ್ಯಾಬೇಜ್‌ಗಳಲ್ಲಿ ಮೆಟಬಾಲಿಸಂ ಅಂಶ ಜಾಸ್ತಿಯಿರುತ್ತದೆ. ಆಕ್ಸ್‌ಲೇಟ್ಸ್‌ ಅಂಶ ಶರೀರದಲ್ಲಿ ಕ್ರಿಸ್ಟಲ್ ರೂಪದಲ್ಲಿ ಶೇಖರಣೆಯಾಗಿ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವೆರಡರ ಉಪಯೋಗ ಕಡಿಮೆ ಮಾಡುವುದು ಒಳಿತು.

ಸುಮಾ, ಧಾರವಾಡ: ನನ್ನ ಸೊಂಟದ ಎಡಭಾಗದಲ್ಲಿ ಪದೇಪದೆ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿಯಲ್ಲಿ ಕಲ್ಲು ಇಲ್ಲವೆಂದು ಪರೀಕ್ಷೆಯಲ್ಲಿ ದೃಢವಾಗಿದೆ. ಆದರೂ ನೋವಾಗಲು ಕಾರಣವೇನು?

ಕೆಲವೊಮ್ಮೆ ಮೂತ್ರದ ಸೋಂಕಿನಿಂದ ಇಂತಹ ಸಮಸ್ಯೆಗಳು ಆಗುತ್ತವೆ. ಸೋಂಕಾಗುವ ಸಾಧ್ಯತೆಗಳು ಜಾಸ್ತಿ ಇದ್ದಾಗ, ಅದನ್ನು ತಡೆಯಲು ಆ್ಯಂಟಿಬಯಾಟಿಕ್‌ ನೀಡಲಾಗುತ್ತದೆ. ಆದ್ದರಿಂದ ಮೂತ್ರಪಿಂಡ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ಬಸವನಗೌಡ ಪಾಟೀಲ, ಹುಬ್ಬಳ್ಳಿ: ನನಗೆ ಬಲಭಾಗದ ಕಿಡ್ನಿಯಲ್ಲಿ 15 ಎಂ.ಎಂ. ಹಾಗೂ ಎಡಭಾಗದಲ್ಲಿ 3 ಎಂ.ಎಂ.ಗಾತ್ರದ ಕಲ್ಲುಗಳಿವೆ. ಎರಡು ಬಾರಿ ಸಿಟಿಸ್ಕ್ಯಾನ್‌ ಆಗಿದೆ. ಎಡಭಾಗದಲ್ಲಿಯೇ ಹೆಚ್ಚು ನೋವು ಕಾಣಿಸಿಕೊಳ್ಳುತ್ತಿದೆ, ಪರಿಹಾರವೇನು?

ಇದು ಕಿಡ್ನಿಯಲ್ಲಿರುವ ಕಲ್ಲಿನಿಂದಲೇ ಉಂಟಾಗುತ್ತಿರುವ ತೊಂದರೆ ಅಲ್ಲ. ಬೇರೆ ಕಾರಣವೂ ಇರಬಹುದು. ಅಲ್ಲದೆ, ಬಲಭಾಗದ ಕಿಡ್ನಿಯಲ್ಲಿ 15 ಎಂ.ಎಂ. ಕಲ್ಲಿರುವುದು ಅಪಾಯಕಾರಿ. ಅಲ್ಲಿಂದ ಕಲ್ಲು ಜಾರಿ ಮೂತ್ರನಾಳದಲ್ಲಿ ಸಿಲುಕಿಹಾಕಿಕೊಂಡರೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಬಲಭಾಗದಲ್ಲಿರುವ ಕಲ್ಲನ್ನು ಒಡೆದು, ಕರಗಿಸಬೇಕಿರುವುದು ಅವಶ್ಯವಿರುವುದರಿಂದ ಕೂಡಲೇ ತಜ್ಞರನ್ನು ಸಂಪರ್ಕಿಸಿ. 

ಪ್ರವೀಣ, ಧಾರವಾಡ: ನನ್ನ ತಾತನಿಗೆ ಈಗ 70 ವರ್ಷ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಈವರೆಗೆ ಡಯಾಲಿಸಿಸ್‌ ಮಾಡಿಸಿಲ್ಲ. ಇದರಿಂದ ಮತ್ತಷ್ಟು ಸಮಸ್ಯೆ ಆಗುತ್ತದೆಯೇ?

ತೀವ್ರ ವೈಫಲ್ಯವಿದ್ದರೆ ವೈದ್ಯರೇ ಡಯಾಲಿಸಿಸ್‌ಗೆ ಸಲಹೆ ನೀಡುತ್ತಾರೆ. ಕಿಡ್ನಿ ಶೇ 90ರಷ್ಟು ಕಾರ್ಯ ಮಾಡದಿದ್ದರೆ ಡಯಾಲಿಸಿಸ್‌ ಅತ್ಯವಶ್ಯ. ಕಿಡ್ನಿ ನಿರಂತರವಾಗಿ ಕೆಲಸ ಮಾಡುತ್ತಿದ್ದರೆ ಡಯಾಲಿಸಿಸ್ ಅಗತ್ಯವಿಲ್ಲ.

ಪವನ್, ಬಳ್ಳಾರಿ: ನನ್ನ ಸಹೋದರನಿಗೆ ಕಿಡ್ನಿಯಲ್ಲಿ ಕಲ್ಲುಗಳಿವೆ. ಪ್ರತಿ ಬಾರಿ ಪರೀಕ್ಷೆ ಮಾಡಿಸಿದಾಗಲೂ ಕಲ್ಲುಗಳ ಗಾತ್ರ ಏರುಪೇರಾಗುತ್ತಿದೆ. ಆಯುರ್ವೇದ ಔಷಧ ಪಡೆಯಲಾಗುತ್ತಿದ್ದು, ಯಾವುದೇ ನೋವು ಕಾಣಿಸಿಕೊಂಡಿಲ್ಲ.

ಕಿಡ್ನಿಯಲ್ಲಿರುವ ಕಲ್ಲುಗಳ ಗಾತ್ರ ಸಣ್ಣದಾಗಿರುವುದರಿಂದ ಚಿಕಿತ್ಸೆ ಮೂಲಕವೇ ಕರಗಿ, ಹೊರಹೋಗುವ ಸಾಧ್ಯತೆ ಇರುತ್ತದೆ. ದಿನಕ್ಕೆ ಕನಿಷ್ಠವೆಂದರೂ 3ರಿಂದ 4 ಲೀಟರ್‌ನಷ್ಟು ನೀರು ಕುಡಿಯಲು ತಿಳಿಸಿ. ನಿಯಮಿತವಾಗಿ ಡಯಟ್‌ ಮಾಡಲು ಹೇಳಿ. ಸಮಸ್ಯೆ ಮತ್ತೆ ಕಂಡುಬಂದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕಾಗುತ್ತದೆ. ಈ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ.

ರಂಗನಾಥ್, ತುಮಕೂರು: ನನ್ನ ತಾಯಿಗೆ 65 ವರ್ಷ. ಗರ್ಭಕೋಶದ ಆಪರೇಷನ್ ಆಗಿದ್ದು, ಮೂತ್ರ ವಿಸರ್ಜನೆ ಸಮರ್ಪಕವಾಗಿ ಆಗುತ್ತಿಲ್ಲ. ಪರಿಹಾರವೇನು?

ಗರ್ಭಕೋಶದ ಪಕ್ಕದಲ್ಲೇ ಮೂತ್ರಚೀಲವೂ ಇರುವುದರಿಂದ ಆಪರೇಷನ್ ಆದ ಬಳಿಕ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಮೂತ್ರಚೀಲದಲ್ಲಿ ನಂಜು ಉಂಟಾಗಿದ್ದರೆ ಪರೀಕ್ಷೆಯಲ್ಲಿ ತಿಳಿಯುತ್ತೆ. ಆಗ ಸೂಕ್ತ ಚಿಕಿತ್ಸೆ ಪಡೆಯಬಹುದು. ಏನಾದರೂ ತೊಂದರೆ ಆಗಿದ್ದರೆ ಶೀಘ್ರ ಸರಿ ಮಾಡಬಹುದು.

ಪ್ರದೀಪ, ಹುಬ್ಬಳ್ಳಿ: ಕಿಡ್ನಿ ಸ್ಟೋನ್‌ ಇತ್ತು. ಆಲೋಪಥಿ ಔಷಧದಿಂದ ವಾಸಿಯಾಗಿತ್ತು. ಮತ್ತೆ ಕಾಣಿಸಿಕೊಂಡಿದ್ದು, ಇದಕ್ಕೆ ಪರಿಹಾರವೇನು?

ನೀವು ಸೇವಿಸುತ್ತಿರುವ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನೀರನ್ನು ಹೆಚ್ಚು ಕುಡಿಯಬೇಕು. ಉಪ್ಪಿನ ಅಂಶ, ಮಾಂಸಾಹಾರ ಸೇವನೆ ಕಡಿಮೆ ಮಾಡಬೇಕು.

ಶ್ರೀನಿವಾಸ, ಉಡುಪಿ: ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಮೊದಲು ಆಲೊಪಥಿ ಔಷಧ ತೆಗೆದುಕೊಳ್ಳುತ್ತಿದ್ದೆ. ಈಗ ಆಯುರ್ವೇದ ಔಷಧ ತೆಗೆದುಕೊಳ್ಳುತ್ತಿದ್ದೇನೆ. ಈಗ ಮೂತ್ರ ಸ್ವಲ್ಪ ಪ್ರಮಾಣದಲ್ಲಿ ಬರಲು ಶುರುವಾಗಿದೆ.

ಮೂತ್ರ ಬರಲು ಶುರುವಾಗಿದೆ ಎಂದಾದರೂ ಪೂರ್ತಿ ಹುಷಾರಾಗಿದೆ ಎಂದುಕೊಳ್ಳುವಂತಿಲ್ಲ. ಡಯಾಲಿಸಿಸ್‌ಗೂ ಮುನ್ನ ರಕ್ತ ತಪಾಸಣೆ ಮಾಡಿಸಿಕೊಳ್ಳಿ. ಮೂತ್ರದಲ್ಲಿ ಯೂರಿಯಾ ಅಂಶ ಜಾಸ್ತಿ ಇದ್ದರೆ ಇನ್ನಷ್ಟು ಕಟ್ಟುನಿಟ್ಟಿನ ಚಿಕಿತ್ಸೆ ಬೇಕಾಗುತ್ತದೆ.

ಮಂಜುನಾಥ ನಾಡಿಗೇರ, ಹಳೇ ಹುಬ್ಬಳ್ಳಿ: ಮೂತ್ರಪಿಂಡ ದಾನ ಮಾಡುವುದು ಹೇಗೆ?

ಸಂಬಂಧಿಕರಲ್ಲಿ ಯಾರಿಗಾದರೂ ಮೂತ್ರ ಪಿಂಡದ ಅಗತ್ಯ ಇದ್ದರೆ ಮಾತ್ರ ಆರೋಗ್ಯವಂತ ವ್ಯಕ್ತಿ ಸ್ವ ಇಚ್ಛೆಯಿಂದ ದಾನ ಮಾಡಬಹುದು. ಹೊರಗಿನವರಿಗೆ ಹಣಕ್ಕಾಗಿ ಮಾರಾಟ ಮಾಡಲು ಅವಕಾಶವಿಲ್ಲ. ಹಾಗೇನಾದರೂ ಪ್ರಯತ್ನಿಸಿದರೆ ಅದಕ್ಕೆ ಸಂಬಂಧಿಸಿದವರಿಗೆಲ್ಲ ಶಿಕ್ಷೆಯಾಗುತ್ತದೆ.

ಗೀತಾ ಪಾಟೀಲ, ಹುಬ್ಬಳ್ಳಿ: ಹತ್ತು ವರ್ಷದ ಮಗನಿಗೆ ಕಿಡ್ನಿಯಲ್ಲಿ ಸಣ್ಣ ಕಲ್ಲಿದೆ. ಆದರೆ, ವೈದ್ಯರು ಯಾವುದೇ ಔಷಧ ನೀಡಿಲ್ಲ...

ಸಣ್ಣ ಪ್ರಮಾಣದ ಕಲ್ಲುಗಳಾದರೆ ಔಷಧದ ಅಗತ್ಯವಿಲ್ಲ. ನಿಯಮಿತವಾಗ ಎಳನೀರು ಕುಡಿಯುವುದು ಹಾಗೂ ಉತ್ತಮ ಆಹಾರ ಅಭ್ಯಾಸದಿಂದಲೇ ಕಲ್ಲು ಮೂತ್ರದಲ್ಲಿ ಹೊರಹೋಗುತ್ತದೆ.

ಮಹೇಶ, ಹುಬ್ಬಳ್ಳಿ: 7 ಮಿ.ಮೀ. ಕಲ್ಲು ಬೆಳೆದಿತ್ತು. ಚೆನ್ನಾಗಿ ನೀರು ಕುಡಿಯುತ್ತಿದ್ದೇನೆ. ಗುಳಿಗೆಯನ್ನೂ ಕೊಟ್ಟಿದ್ದಾರೆ. ಈಗ ನೋವಿಲ್ಲ. ಕಲ್ಲು ಹೊರಹೋಗಿದೆ ಎಂದುಕೊಳ್ಳಬಹುದಾ?‌

ಮತ್ತೊಮ್ಮೆ ತಪಾಸಣೆ ಮಾಡದೇ ಹಾಗೆ ನಿರ್ಧಾರಕ್ಕೆ ಬರುವಂತಿಲ್ಲ. ಯಾಕೆಂದರೆ, ಕಲ್ಲು ಮೂತ್ರಪಿಂಡದ ಒಳಗಡೆಯೇ ಇದ್ದರೆ ನೋವು ಬರುವುದಿಲ್ಲ. ಕಿಡ್ನಿಯಿಂದ ಜಾರಿ ಮೂತ್ರನಾಳಕ್ಕೆ ಬಂದಾಗ ಮಾತ್ರ ನೋವಿನ ಅನುಭವವಾಗುತ್ತದೆ.

ವೆಂಕೋಬ, ಕೊಪ್ಪಳ: ಎಡ ಭಾಗದ ಕಿಡ್ನಿಯಲ್ಲಿ 8 ಮಿ.ಮೀ. ಕಲ್ಲು ಬೆಳೆದಿದೆ. ಅದೀಗ ಮೂತ್ರನಾಳಕ್ಕೆ ಬಂದಿದ್ದು, ನೋವಾಗುತ್ತಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಗಾತ್ರದ ಕಲ್ಲು ಮೂತ್ರದಲ್ಲಿ ಹೊರಹೋಗುವುದು ಕಷ್ಟ. ಮೂತ್ರ ಕಟ್ಟಿಕೊಳ್ಳಲು ಶುರುವಾದರೆ ಆ ಕಿಡ್ನಿಯ ಸಾಮರ್ಥ್ಯ ಕಡಿಮೆಯಾಗುತ್ತ ಹೋಗುತ್ತದೆ. ಹೀಗಾಗಿ ಅದಕ್ಕೆ ನೀವು ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಒಳಿತು.

ರಾಜೇಶ್, ಬೆಂಗಳೂರು: ಅಪಘಾತದಲ್ಲಿ ಮಗನ ಒಂದು ಮೂತ್ರಪಿಂಡ ವಿಫಲವಾಗಿದೆ. ಒಂದೇ ಕಿಡ್ನಿಯಲ್ಲಿ ಜೀವನ ಸಾಗಿಸುತ್ತಿದ್ದು, ಅದನ್ನು ಆರೋಗ್ಯವಾಗಿಡುವುದು ಹೇಗೆ?

ಒಂದೇ ಕಿಡ್ನಿಯಿದ್ದರೂ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದು ಆರೋಗ್ಯಯುತವಾಗಿರಬೇಕು. ಪ್ರತಿ ವರ್ಷ ತಪಾಸಣೆ ಮಾಡಿಸಿಕೊಳ್ಳಿರಿ. 

ಸಿದ್ದು, ಬೆಳಗಾವಿ: ನನಗೆ ಪೊಲೀಸ್‌ ಆಗುವ ಕನಸಿದೆ. ಆದರೆ, ವರ್ಷದ ಹಿಂದೆ ಮೂತ್ರಪಿಂಡದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಈಗ ಓಟ, ವ್ಯಾಯಾಮ ಮಾಡಬಹುದೇ?

ಚಿಕಿತ್ಸೆಯ ಬಳಿಕ ಕಿಡ್ನಿ ಸರಿಯಾಗಿದ್ದರೆ ದೈಹಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಪೊಲೀಸ್‌ ಆಗಲು ಬೇಕಾದ ದೈಹಿಕ ಕಸರತ್ತಿನಲ್ಲಿ ತೊಡಗಬಹುದು.

ಶಿವಾನಂದ ಯಡವಟ್ಟಿ, ಮಮ್ಮಿಗಟ್ಟಿ: 45 ವರ್ಷ. ಮೂತ್ರಕೋಶದ ತೊಂದರೆ ಇದೆ. ಮೂತ್ರವಿಸರ್ಜನೆ ವೇಳೆ ಸಾಕಷ್ಟು ತೊಂದರೆ ಆಗುತ್ತಿದೆ.

40 ವರ್ಷ ದಾಟಿದವರಿಗೆ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ಬಾರಿ ಸಮಗ್ರ ಪರೀಕ್ಷೆಗೆ ಒಳಗಾಗಿರಿ.

ಸಂತೋಷ, ಬೆಳಗಾವಿ: ವರ್ಷದ ಹಿಂದೆ ಮೂತ್ರಪಿಂಡದಲ್ಲಿನ ನಾಲ್ಕು ಕಲ್ಲುಗಳನ್ನು ಕರಗಿಸಲಾಗಿತ್ತು. ಮತ್ತೆ ಕಲ್ಲು ಕಾಣಿಸಿಕೊಂಡಿರುವ ಅನುಮಾನವಿದೆ.

ಚಿಕಿತ್ಸೆ ಮೂಲಕ ಸಣ್ಣು ಕಲ್ಲುಗಳನ್ನು ಕರಗಿಸಿರಬಹುದು. ಮತ್ತೆ ತಪಾಸಣೆ ಮಾಡಿಸಿಕೊಳ್ಳಿ. ಕಿಡ್ನಿಯ ಆರೊಗ್ಯದ ಬಗ್ಗೆ ಖಚಿತಪಡಿಸಿಕೊಳ್ಳಿರಿ.

ರಾಜೇಶ, ಹೊಸಪೇಟೆ: ಒಂದು ಕಿಡ್ನಿ ವಿಫಲವಾಗಿದೆ. ಪರಿಹಾರ ತಿಳಿಸಿ.

ಒಂದು ಕಿಡ್ನಿ ವಿಫಲವಾದರೂ ಇನ್ನೊಂದು ಕಿಡ್ನಿ ಚೆನ್ನಾಗಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಮೂತ್ರಪಿಂಡ ತಜ್ಞರನ್ನು ಭೇಟಿಯಾಗಿರಿ. ಅವರು ನೀಡುವ ಸಲಹೆಯಂತೆ ನಡೆಯಿರಿ.

‘ಜೀವ ಸಾರ್ಥಕತೆ’ ಯೋಜನೆ ನೆರವು

ಕಿಡ್ನಿ ಸೇರಿದಂತೆ ದೇಹದ ವಿವಿಧ ಅಂಗಾಂಗ ದಾನ ಮಾಡಲು ಬಯಸುವವರು ಮತ್ತು ಅಗತ್ಯವಿರುವವರು ಆರೋಗ್ಯ ಇಲಾಖೆಯ ‘ಜೀವ ಸಾರ್ಥಕತೆ’ ಸಂಸ್ಥೆಯಲ್ಲಿ ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಡಾ. ಮೊಗೇರ್‌ ತಿಳಿಸಿದರು.

ಕಿಡ್ನಿ ಅಗತ್ಯ ಇರುವವರು ಆಯಾ ಜಿಲ್ಲೆಗಳಲ್ಲಿ ಸರ್ಕಾರ ಗುರುತಿಸಿರುವ ಆಸ್ಪತ್ರೆಗಳಲ್ಲಿ ₹ 3 ಸಾವಿರ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬೇಕಾಗುತ್ತಿದೆ. ವೈದ್ಯರ ಶಿಫಾರಸು ಇದ್ದವರಿಗೆ ಮಾತ್ರ ಜ್ಯೇಷ್ಠತೆ ಆಧಾರದ ಮೇಲೆ ಅಂಗಾಂಗಳನ್ನು ನೀಡಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ₹ 6 ಲಕ್ಷ ವೆಚ್ಚವಾಗುತ್ತದೆ. ಇದರಲ್ಲಿ ‘ಕಿಡ್ನಿ ಸುರಕ್ಷಾ ಯೋಜನೆ’ಯಡಿ ₹ 2 ಲಕ್ಷ ನೆರವು ಸಿಗಲಿದೆ. ಜೊತೆಗೆ ₹ 1 ಲಕ್ಷದಂತೆ ಮೂರು ವರ್ಷ ಔಷಧ ಕೊಳ್ಳಲು ನೆರವು ನೀಡಲಾಗುತ್ತದೆ ಎಂದು ಹೇಳಿದರು.

ಮಾನವ ಅಂಗಾಂಗ ಕಸಿ ಕಾಯ್ದೆಯನ್ನು ಉಲ್ಲಂಘಿಸಿ ಯಾವುದಾರೂ ಆಸ್ಪತ್ರೆಗಳು, ವೈದ್ಯರು ಅಂಗಾಂಗ ಕಸಿ ಮಾಡಿದರೆ ₹ 2 ಕೋಟಿ ದಂಡ ಅಥವಾ ಏಳು ವರ್ಷ ಜೈಲು ಅಥವಾ ವೈದ್ಯಕೀಯ ವೃತ್ತಿ ಲೈಸನ್ಸ್‌ ರದ್ದು ಮಾಡಲಾಗುತ್ತದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಅಧಿಕ

ಉತ್ತರ ಕರ್ನಾಟಕ ಭಾಗದಲ್ಲಿ ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ಹೆಚ್ಚು ಕಂಡುಬರುತ್ತಿವೆ. ಈ ಭಾಗದಲ್ಲಿ ಜನರು ಅಗತ್ಯಕ್ಕೆ ತಕ್ಕಷ್ಟು ನೀರು ಕಡಿಯುವ ಅಭ್ಯಾಸ ಕಡಿಮೆ. ಜೊತೆಗೆ ಉಷ್ಣಾಂಶವೂ ಅಧಿಕ. ಹೀಗಾಗಿ ಮೂತ್ರಪಿಂಡ ಸಂಬಂಧಿ ಕಾಯಿಲೆಗಳು ಹೆಚ್ಚು ಕಂಡುಬರುತ್ತದೆ ಎಂದು ತಿಳಿಸಿದರು.

ಬೇಡವೇ ಬೇಡ ಉಪ್ಪಿನಕಾಯಿ

ಮಾನವನ ದೇಹಕ್ಕೆ ಪ್ರತಿದಿನ 5 ಗ್ರಾಂನಷ್ಟು ಉಪ್ಪು ಸಹ ಹೆಚ್ಚು ಎನಿಸುತ್ತದೆ. ಡಯಟ್‌ನಲ್ಲಿ 2 ಗ್ರಾಂ ಉಪ್ಪು ಬಳಸಲು ಮಾತ್ರ ಸಲಹೆ ನೀಡುತ್ತೇವೆ. ಹೀಗಿರುವಾಗಿ ಉಪ್ಪಿನಕಾಯಿಯಲ್ಲಿರುವ 15ರಿಂದ 20 ಗ್ರಾಂವರೆಗಿನ ಉಪ್ಪಿನ ಪ್ರಮಾಣ ದೇಹಕ್ಕೆ ಅತ್ಯಂತ ಅಪಾಯಕಾರಿ. ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾದಷ್ಟೂ ತೊಂದರೆ ಕಟ್ಟಿಟ್ಟಬುತ್ತಿ. ಇನ್ನು ನೀರು ಕಡಿಮೆ ಕುಡಿದರಂತೂ ಈ ಸಮಸ್ಯೆ ಉಲ್ಬಣವಾಗುತ್ತದೆ. ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಿ, ಹರಳಾಗಿ ಉಳಿದುಬಿಡುತ್ತವೆ. ಉಪ್ಪು ಹೆಚ್ಚಿದಷ್ಟೂ ರಕ್ತದೊತ್ತಡವೂ ಹೆಚ್ಚುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡದಂತಹ ಗಂಭೀರ ಸಮಸ್ಯೆಗಳು ಜನರನ್ನು ಕಾಡುತ್ತಿವೆ.

‘ಬಿಯರ್‌ ಮದ್ದಲ್ಲ’

’ಬಿಯರ್ ಸೇವಸಿದರೆ ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸಬಹುದೇ‘ ಎಂಬ ಗೋಪನಕೊಪ್ಪದ ನಾಗರಾಜ ಅವರ ಪ್ರಶ್ನೆಗೆ ಉತ್ತರಿಸಿದ ವೈದ್ಯರು, ’ಬಿಯರ್ ಸೇವನೆ ಉತ್ತಮ ಹವ್ಯಾಸವಲ್ಲ. ಒಂದು ಬಾರಿ ಅಮಲಿನ ಚಟ ಅಂಟಿಕೊಂಡರೆ ದೇಹದಲ್ಲಿ ಬೇರೆ ಸಮಸ್ಯೆಗಳು ಉಂಟಾಗಬಹುದು. ವ್ಯಕ್ತಿಯು ಶಾಶ್ವತವಾಗಿ ಮದ್ಯವ್ಯಸನಿ ಆಗುವ ಅಪಾಯವೂ ಇದೆ. ಕಿಡ್ನಿ ಸಮಸ್ಯೆ ಕಾಣಿಸಿಕೊಂಡವರು ಬಿಯರ್ ಬದಲು ನೀರನ್ನೇ ಹೆಚ್ಚಾಗಿ ಸೇವಿಸಬೇಕು. ಇದೇ ಉತ್ತಮ ಸಲಹೆ ಹಾಗೂ ಸರಿಯಾದ ಚಿಕಿತ್ಸಾ ಕ್ರಮ‘ ಎಂದು ತಿಳಿಸಿದರು.

ಮೂತ್ರಪಿಂಡ ಸಂರಕ್ಷಣೆಗೆ ಏಳು ಸೂತ್ರಗಳು

1. ಸಕ್ಕರೆ ಕಾಯಿಲೆ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುತ್ತಿರಿ

2. ರಕ್ತದೊತ್ತಡ (ಬಿಪಿ) ಆಗಾಗ ಪರೀಕ್ಷಿಸಿಕೊಳ್ಳಬೇಕು

3. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಆಯಾ ಕಾಲಮಾನದಲ್ಲಿ ದೇಹಕ್ಕೆ ಅಗತ್ಯವಾದಷ್ಟು ನೀರು ಕಡ್ಡಾಯವಾಗಿ ಕುಡಿಯಿರಿ.

4. ಉಪ್ಪಿನ ಅಂಶ ಇರುವ ವಸ್ತುಗಳನ್ನು ಕಡಿಮೆ ತೆಗೆದುಕೊಳ್ಳಿ. ಉಪ್ಪಿನ ಕಾಯಿ ತ್ಯಜಿಸಿದಷ್ಟು ಉತ್ತಮ

5. ದೇಹದ ಫಿಟ್‌ನೆಸ್‌ಗೆ ಗಮನ ನೀಡಿ. ಪ್ರತಿದಿನ ಯೋಗ, ವ್ಯಾಯಾಮ, ನಡಿಗೆ ಇರಲಿ.

6. ವಿಪರೀತ ಔಷಧೋಪಚಾರ ಮಾಡಬೇಡಿ. ಅನಗತ್ಯವಾಗಿ ನೋವುನಿವಾರಕದಂಥ ಔಷಧ ತೆಗೆದುಕೊಳ್ಳಬೇಡಿ.

7.  ಕುಟುಂಬದಲ್ಲಿ ‘ಮೂತ್ರಪಿಂಡ’ ವೈಫಲ್ಯದ ಇತಿಹಾಸವಿದ್ದಲ್ಲಿ ತಜ್ಞ ವೈದ್ಯರ ಸಲಹೆ ಪಡೆಯಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)