ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: 137 ಸೋಂಕಿತರಿಗೆ 400 ಸಲ ಡಯಾಲಿಸಿಸ್

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಸಾಧನೆ
Last Updated 29 ಸೆಪ್ಟೆಂಬರ್ 2020, 16:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘137 ಕೊರೊನಾ ಸೋಂಕಿತರಿಗೆ ನೆಫ್ರಾಲಜಿ (ಮೂತ್ರಪಿಂಡ ವಿಜ್ಞಾನ) ವಿಭಾಗದಿಂದ 400 ಸಲ ಉಚಿತವಾಗಿ ಡಯಾಲಿಸಿಸ್ ಮಾಡಲಾಗಿದೆ’ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

‘ಕೊರೊನಾ ಸೋಂಕು ಮೂತ್ರಪಿಂಡಗಳ ಮೇಲೂ ಪರಿಣಾಮ ಬೀರುತ್ತಿದ್ದು, ಶೇ 10ರಿಂದ 15ರಷ್ಟು ರೋಗಿಗಳು ಮೂತ್ರಪಿಂಡ ವೈಫಲ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದುವರೆಗೆ 100ಕ್ಕೂ ಹೆಚ್ಚು ಮಂದಿ ಗುಣಮುಖವಾಗಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂತ್ರಪಿಂಡ ಕಾಯಿಲೆ ಇರುವ ಕೋವಿಡ್ ರೋಗಿಗಳ ಮರಣ ಪ್ರಮಾಣ ಶೇ 10ರಷ್ಟಿದೆ. ಹಾಗಾಗಿ, ನೆಫ್ರಾಲಜಿ ವಿಭಾಗದ ಸಿಬ್ಬಂದಿ ಆರು ತಿಂಗಳಿನಿಂದ ರಜೆ ಪಡೆಯದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಂಕು ಪತ್ತೆಯಾದ ತಕ್ಷಣ, ಅವರನ್ನು ಆಸ್ಪತ್ರೆಗೆ ದಾಖಲಿಸಿದರೆ ಸೂಕ್ತ ಚಿಕಿತ್ಸೆ ನೀಡಿ, ಸಾವಿನಿಂದ ಪಾರು ಮಾಡಬಹುದು’ ಎಂದರು.

‘ಕಿಮ್ಸ್‌ಗೆ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ, ಇಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಮೃತರ ಪೈಕಿ ಶೇ 95 ಮಂದಿಗೆ ಹೃದಯ ಕಾಯಿಲೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು’ ಎಂದು ವಿವರಿಸಿದರು.

ಹಾಸಿಗೆ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವ

‘ಆಸ್ಪತ್ರೆಯಲ್ಲಿರುವ 1,200 ಹಾಸಿಗೆಗಳ ಸಾಮರ್ಥ್ಯವನ್ನು 2,400ಕ್ಕೆ ಹೆಚ್ಚಿಸುವ ಕುರಿತು ಭಾರತೀಯ ವೈದ್ಯಕೀಯ ಮಂಡಳಿಗೆ(ಎಂಸಿಐ) ಪ್ರಸ್ತಾವ ಸಲ್ಲಿಸಲಾಗಿದೆ. ನೆಫ್ರಾಲಜಿ ವಿಭಾಗವೂ ಸೂಪರ್ ಸ್ಪೆಷಾಲಿಟಿ ವ್ಯಾಪ್ತಿಗೆ ಬರಲಿದೆ. ಮುಂದೆ ಕಿಮ್ಸ್‌ನಲ್ಲಿ ಅನೇಕ ಬದಲಾವಣೆಗಳಾಗಲಿವೆ’ ಎಂದರು.

ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ. ವೆಂಕಟೇಶ ಮೊಗೇರ ಮಾತನಾಡಿ, ‘ಕೋವಿಡ್ ರೋಗಿಗಳಿಗೆ ಸೂಪರ್ ಸ್ಪೆಷಾಲಿಟ್ ಆಸ್ಪತ್ರೆಯಲ್ಲೇ ಡಯಾಲಿಸ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಎಲ್.ಐ.ಸಿ ಹಾಗೂ ಲಯನ್ಸ್ ಕ್ಲಬ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಆ್‌ಆರ್‌) ನಿಧಿಯಡಿ 2 ಡಯಾಲಿಸ್ ಯಂತ್ರಗಳನ್ನು ನೀಡಿವೆ. ಡಯಾಲಿಸ್ ಘಟಕದಲ್ಲಿ ಎರಡು ವೆಂಟಿಲೇಟರ್‌ಗಳನ್ನುಪ್ರತ್ಯೇಕವಾಗಿ ಇಡಲಾಗಿದೆ’ ಎಂದು ಹೇಳಿದರು.

‘ವಿಭಾಗದ ಡಾ. ಮಹಾಬಲೇಶ್ವರ ಮಯ್ಯ, ಡಾ. ಎಂ.ಆರ್. ಪಾಟೀಲ, ಡಾ. ವಿವೇಕ ಗಾಣಿಗೇರ, ಸಿಬ್ಬಂದಿ ಡಿ.ವಿ. ಪ್ರಕಾಶ, ಎಂ.ಎನ್. ಮಹೇಶ, ಬಿ.ಎಚ್. ಮಲ್ಲಿಕಾರ್ಜುನ, ಎಚ್‌.ಎಸ್. ನಿರ್ಮಲಾ, ಚಂದ್ರನಾಥ ಸಕೇರಿ, ರಾಜಪ್ಪ, ಸುಮಿತ್ರಾ ಚಲವಾದಿ, ರುಬಿಯಾ ಶೇಕ್, ಎಂ.ಎಲ್. ಶ್ವೇತಾ, ಗಜಾನನ ಆಚಾರಿ, ಪಿ.ಡಿ. ಸಂಜಯ, ಶಂಭು ಪಾಟೀಲ, ರಮೇಶ ಚಲವಾದಿ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದಾರೆ’ ಎಂದರು.

ಕಿಮ್ಸ್ ಆಡಳಿತಾಧಿಕಾರಿ ರಾಜೇಶ್ವರಿ ಜೈನಾಪುರ, ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಉಪ ಅಧೀಕ್ಷಕ ರಾಜಶೇಖರ ದ್ಯಾವೇರಿ, ಡಾ. ಮುಲ್ಕಿ ಪಾಟೀಲ ಇದ್ದರು.

ಕೊರೊನಾ ಸೋಂಕಿತೆಗೆ ಕರುಳಿನ ಶಸ್ತ್ರಚಿಕಿತ್ಸೆ

‘ಹೊಟ್ಟೆಯಲ್ಲಿ ಸಣ್ಣ ಕರಳು ಕೊಳೆತು, ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ನೋವು ಅನುಭವಿಸುತ್ತಿದ್ದ ಕೊರೊನಾ ಸೋಂಕಿತ ಮಹಿಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಕಿಮ್ಸ್‌ ಶಸ್ತ್ರಚಿಕಿತ್ಸಾ ಘಟಕದ ಮುಖ್ಯಸ್ಥ ಡಾ. ರಮೇಶ ಹೊಸಮನಿ ಹೇಳಿದರು.

‘ಸೋಂಕಿತರೊಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಿದ ಮೊದಲ ಪ್ರಕರಣ ಇದಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಗಂಗಾವತಿಯ 45 ವರ್ಷದ ಮಹಿಳೆಯ ಸಣ್ಣ ಕರುಳು ಎರಡು ಕಡೆ ಕೊಳೆತಿದ್ದರಿಂದ, ರಕ್ತ ಸಂಚಾರ ಸಮಸ್ಯೆಯಾಗಿತ್ತು. ಹಾಗಾಗಿ, ಶಸ್ತ್ರಚಿಕಿತ್ಸೆ ಮಾಡಿ ಕೊಳೆತ ನರಗಳನ್ನು ಕತ್ತರಿಸಿ ಜೋಡಿಸಲಾಗಿದೆ’ ಎಂದು ತಿಳಿಸಿದರು.

‘ಸದ್ಯ ಮಹಿಳೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರಾದ ಡಾ. ವಿನಾಯಕ ಬ್ಯಾಟಪ್ಪನವರ, ಡಾ. ವಸಂತ ತಗ್ಗಿನಮನಿ ಹಾಗೂ ಸಿಬ್ಬಂದಿ‌‌ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ’ ಎಂದರು.

ಅಂಕಿ ಅಂಶ...

16 ಸಾವಿರ -ಕಿಮ್ಸ್‌ನಲ್ಲಿ ಇದುವರೆಗೆ ನಡೆದಿರುವ ಕೋವಿಡ್ ಪರೀಕ್ಷೆ

5 ಸಾವಿರ - ಕೋವಿಡ್ ರೋಗಿಗಳಿಗೆ ಚಿಕಿತ್ಸೆ

400 - ಕೋವಿಡ್‌ನಿಂದಾಗಿ ಕಿಮ್ಸ್‌ನಲ್ಲಿ ಮೃತಪಟ್ಟವರು

80 -ಆಸ್ಪತ್ರೆಯಲ್ಲಿರುವ ವೆಂಟಿಲೇಟರ್‌ಗಳು

45 -ಕೇಂದ್ರ ಸರ್ಕಾರ ನೀಡಿದವೆಂಟಿಲೇಟರ್‌ಗಳು

35 - ರಾಜ್ಯ ಸರ್ಕಾರ ನೀಡಿದ ವೆಂಟಿಲೇಟರ್‌ಗಳು

12 - ಕಿಮ್ಸ್‌ನಲ್ಲಿರುವ ಡಯಾಲಿಸಿಸ್ ಯಂತ್ರಗಳು

ಕಿಮ್ಸ್‌ನಲ್ಲಿ ಹಿಂದಿನಿಂದಲೂ ಸಿಬ್ಬಂದಿ ಕೊರತೆ ಇದೆ. ಆದರೆ, ಚಿಕಿತ್ಸೆಗೆ ಯಾವುದೇ ತೊಂದರೆ ಇಲ್ಲ. ಕೊರತೆ ಇರುವ 30 ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು
– ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT